ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಹರಪನಹಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ ಹಿನ್ನೆಲೆ ಪಟ್ಟಣದ ಪುರಸಭಾ ಕಚೇರಿ ಎದುರು ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಂಭ್ರಮಾಚರಣೆ ನಡೆಸಿದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹರಪನಹಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಘೋಷಿಸುತ್ತಿದ್ದಂತೆ ಪುರಸಭೆಯಲ್ಲಿಯೇ ಜಮಾವಣೆಗೊಂಡಿದ್ದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರು ಹೊರಗಡೆ ಬಂದು ಪಟಾಕಿ ಸಿಡಿಸಿ, ಸಿಹಿ ವಿತರಿಸಿ, ಹೂವು ಮಳೆ ಸುರಿಸಿ ಸಂತಸ ವ್ಯಕ್ತಪಡಿಸಿದರು.
ಹಿರಿಯ ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ ಪುರಸಭೆ ನಗರಸಭೆಯನ್ನಾಗಿ ನೋಡುವ ಕನಸು ಬಹಳ ವರ್ಷಗಳದ್ದು, ನಗರಸಭೆಯಾಗುವುದರಿಂದ ಸರ್ಕಾರದಿಂದ ಹೆಚ್ಚು ಅನುದಾನ ಬರುತ್ತದೆ. ಮೂಲ ಸೌಕರ್ಯ ಒದಗಿಸಲು ಅನುಕೂಲವಾಗುತ್ತದೆ. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಬಹಳ ಶ್ರಮ ಪಟ್ಟು ಸರ್ಕಾರದ ಮೇಲೆ ಒತ್ತಡ ತಂದು ನಗರಸಭೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲರ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಪೌರಾಯುಕ್ತ ಎರಗುಡಿ ಶಿವಕುಮಾರ ಮಾತನಾಡಿ, 2014ರಿಂದಲೂ ಇದನ್ನು ನಗರಸಭೆಯನ್ನಾಗಿ ಮಾಡುವ ಪ್ರಕ್ರಿಯೆ ನಡೆದಿತ್ತು, ಶಾಸಕರು ಬೆನ್ನು ಹತ್ತಿ ಯಶಸ್ವಿಯಾಗಿದ್ದಾರೆ. ಸರ್ಕಾರದಿಂದ ಬರುವ ಆದಾಯ ಹೆಚ್ಚಾಗುತ್ತದೆ, ಹರಪನಹಳ್ಳಿ ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಬಿ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ ಹಾಗೂ ಸದಸ್ಯ ಹರಾಳು ಅಶೋಕ ಮಾತನಾಡಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.ಉಪಾಧ್ಯಕ್ಷ ಎಚ್.ಕೊಟ್ರೇಶ, ಸದಸ್ಯರಾದ ಮಂಜುನಾಥ ಇಜಂತಕರ್, ಕಿರಣ್ ಶಾನಬಾಗ್, ಜಾಕೀರ ಹುಸೇನ್, ಜಾವೇದ್, ರೊಕ್ಕಪ್ಪ, ವಸಂತಪ್ಪ, ಗುಡಿ ನಾಗರಾಜ, ಸುಮಾ ಜಗದೀಶ ಮುಖಂಡರಾದ ಚಿಕ್ಕೇರಿ ಬಸಪ್ಪ, ಬಸವರಾಜ ಸಂಗಪ್ಪನವರ್, ಇಸ್ಮಾಯಿುಲ್ ಎಲಿಗಾರ, ಒ.ಮಹಾಂತೇಶ, ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಶಶಿಕುಮಾರ ನಾಯ್ಕ, ಡಂಕಿ ವಾಸೀಮ್, ಎನ್.ಶಂಕರ ಇತರರಿದ್ದರು.