ಎಕ್ಸ್‌ಪ್ರೆಸ್ ಕೆನಾಲ್ ಅನಾಹುತ ಬಗ್ಗೆ ಧ್ವನಿ ಎತ್ತಿ

KannadaprabhaNewsNetwork | Published : Jul 2, 2025 11:52 PM
ಚುನಾಯಿತ ಪ್ರತಿನಿಧಿಗಳಿಗೆ ಒತ್ತಾಯಿಸಿ ಹೋರಾಟಗಾರರ ಸಭೆಯಲ್ಲಿ ನಿರ್ಣಯ | Kannada Prabha

ಲಿಂಕ್‌ ಕೆನಾಲ್ ವಿರುದ್ಧ ನಡೆದ ದೊಡ್ಡ ಹೋರಾಟದ ಫಲವಾಗಿ ಸರ್ಕಾರ ಈ ತಿಂಗಳ 4 ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚರ್ಚೆ ನಡೆಸಲು ಇಲ್ಲಿನ ಜನಪ್ರತಿನಿಧಿಗಳ ಸಭೆ ಕರೆದಿದೆ.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯ ಜನರಿಗೆ ಅನ್ಯಾಯವಾಗಲಿರುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್‌ ಕೆನಾಲ್‌ ಯೋಜನೆ ಕುರಿತು ಚರ್ಚೆ ನಡೆಸಲು ಈ ತಿಂಗಳ 4 ರಂದು ಸರ್ಕಾರ ಕರೆದಿರುವ ಸಭೆಯಲ್ಲಿ ಭಾಗವಹಿಸುವ ಈ ಭಾಗದ ಚುನಾಯಿತ ಪ್ರತಿನಿಧಿಗಳು ಈ ಯೋಜನೆಯಿಂದ ಜಿಲ್ಲೆಯ ಜನರಿಗೆ ಆಗುವ ಅನ್ಯಾಯದ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಹಾಗೂ ಲಿಂಕ್‌ ಕೆನಾಲ್‌ ಯೋಜನೆಯನ್ನು ರದ್ದುಪಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿ ಎಕ್ಸ್ ಪ್ರೆಸ್ ಲಿಂಕ್‌ ಕೆನಾಲ್ ವಿರೋಧಿ ಹೋರಾಟ ಸಮಿತಿ ಸಭೆ ನಿರ್ಣಯ ಕೈಗೊಂಡಿತು.ಇದೇ 4 ರಂದು ಸರ್ಕಾರ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಆ ಸಂಬಂಧ ಬುಧವಾರ ನಗರದಲ್ಲಿ ಪೂರ್ವಭಾವಿ ಸಭೆ ನಡೆಸಿದ ಸಮಿತಿಯ ಹೋರಾಟಗಾರರು, ಜಿಲ್ಲೆಯ ಪಾಲಿನ ಹೇಮಾವತಿ ನೀರಿಗೆ ಅನ್ಯಾಯವಾಗಲಿರುವ ಲಿಂಕ್‌ ಕೆನಾಲ್‌ ಯೋಜನೆ ಕೈಬಿಡುವಂತೆ ಸರ್ಕಾರದ ಮನವೊಲಿಸಬೇಕು ಎಂದು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳಿಗೆ ಒತ್ತಾಯ ಮಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ರೈತ ಸಂಘ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಲಿಂಕ್‌ ಕೆನಾಲ್ ವಿರುದ್ಧ ನಡೆದ ದೊಡ್ಡ ಹೋರಾಟದ ಫಲವಾಗಿ ಸರ್ಕಾರ ಈ ತಿಂಗಳ 4 ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚರ್ಚೆ ನಡೆಸಲು ಇಲ್ಲಿನ ಜನಪ್ರತಿನಿಧಿಗಳ ಸಭೆ ಕರೆದಿದೆ. ಈ ಯೋಜನೆಯ ಮೂಲ ಕಾರಣಕರ್ತರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಭೆಯಲ್ಲಿ ಜಿಲ್ಲೆಯ ಪಾಲಿಗೆ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳೇ ಸಭೆ ಕರೆದು ಲಿಂಕ್‌ ಕೆನಾಲ್‌ ಯೋಜನೆಯಿಂದ ಜಿಲ್ಲೆಯ ಜನರಿಗೆ ಆಗುವ ಅನಾಹುತಗಳ ಬಗ್ಗೆ ತಿಳಿದು ಯೋಜನೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.ಕುಣಿಗಲ್ ಶಾಸಕ ಡಾ.ರಂಗನಾಥ್‌ ಅವರು ನಮ್ಮ ಹೋರಾಟದ ಬಗ್ಗೆ ಅಲ್ಲಿನ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ರೈತರು- ರೈತರ ನಡುವೆ ಎತ್ತಿಕಟ್ಟುವ ರಾಜಕಾರಣ ಮಾಡುತ್ತಿದ್ದಾರೆ. ಕುಣಿಗಲ್‌ಗೆ ಹೇಮಾವತಿ ನೀರು ಕೊಡಬಾರದು ಎಂದು ನಾವು ಯಾವಾಗಲೂ ಒತ್ತಾಯ ಮಾಡಿಲ್ಲ. ಆದರೆ ಲಿಂಕ್‌ ಕೆನಾಲ್ ಮೂಲಕ ಬೇಡ, ಹೇಮಾವತಿ ನಾಲೆಯನ್ನು ಅಗಲೀಕರಣ ಮಾಡಿ ನಾಲೆ ಮೂಲಕ ನೀರು ತೆಗೆದುಕೊಂಡು ಹೋಗಲು ನಮ್ಮದು ಯಾವ ತಕರಾರೂ ಇಲ್ಲ ಎಂದು ತಿಳಿಸಿದರು.4 ರಂದು ನಡೆಯುವ ಸಭೆಯ ಮೊದಲೇಜಿಲ್ಲೆಯ ಸಚಿವರು, ಶಾಸಕರು, ಸಂಸದರು ಇಲ್ಲಿನ ರೈತರು, ಸಾರ್ವಜನಿಕ ಸಂಘಸಂಸ್ಥೆಗಳ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಬೇಕಾಗಿತ್ತು. ಆದರೆ ಆಡಳಿತ ಪಕ್ಷದ ಸಚಿವರಾಗಲಿ, ಶಾಸಕರಾಗಲಿ ಲಿಂಕ್‌ಕೆನಾಲ್‌ನಿಂದ ಆಗುವ ಅನಾಹುತಗಳ ಬಗ್ಗೆ ಧ್ವನಿ ಮಾಡಿಲ್ಲ. ಆದರೆ, 4ರಂದು ನಡೆಯುವ ಸಭೆಯಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಮೌನ ಮುರಿದು ಆಗಬಹುದಾದ ಆನ್ಯಾಯಗಳ ಬಗ್ಗೆ ಮಾತನಾಡಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡದಿದ್ದರೆ ಅಪಾಯವಾಗುವುದು ಖಂಡಿತ. ಆದರೆ ಸರ್ಕಾರವು ಜಿಲ್ಲೆಯ ಜನರ ನೀರಿನ ವಿಚಾರದಲ್ಲಿ ಅನ್ಯಾಯವಾಗುವಂತಹ ತೀರ್ಮಾನಗಳನ್ನು ಕೈಗೊಂಡರೆ ಹೋರಾಟವನ್ನು ತೀವ್ರವಾಗಿ ಮುಂದುವರೆಸುವುದು ಖಚಿತ ಎಂದು ಘೋಷಿಸಿದರು.ಮತ್ತೊಬ್ಬ ಮುಖಂಡ ಗುಬ್ಬಿಯ ದಿಲೀಪ್‌ಕುಮಾರ್ ಮಾತನಾಡಿ, ಜಿಲ್ಲೆಯ ಪಾಲಿಗೆ ಮರಣಶಾಸನ ಆಗಿರುವ ಎಕ್ಸ್ ಪ್ರೆಸ್ ಲಿಂಕ್‌ ಕೆನಾಲ್‌ ಯೋಜನೆಯ ರೂವಾರಿ, ಈಗಿನ ಅಚಾತುರ್ಯಕ್ಕೆ ಕಾರಣವಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಸಭೆ ಏರ್ಪಡಿಸಿರುವುದು ದುರಾದೃಷ್ಟಕರ.ಈ ಸಭೆಯಲ್ಲಿ ನಮಗೆ ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸವಿಲ್ಲ. ಆದರೆ, ಸಭೆಯಲ್ಲಿ ಭಾಗವಹಿಸುವ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಕೆನಾಲ್‌ ಯೋಜನೆಯಿಂದ ಆಗುವ ಅನ್ಯಾಯಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು.ಯಾವುದೇ ಕಾರಣಕ್ಕೂಯೋಜನೆ ಮುಂದುವರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.ಕುಣಿಗಲ್‌ಗೆ ಹಾಲಿ ಇರುವ ಹೇಮಾವತಿ ನಾಲೆಯಲ್ಲಿ ಗುರುತ್ವಾಕರ್ಷಣೆ ಮೂಲಕ ಕುಣಿಗಲ್‌ಗೆ ನೀರು ಹರಿಸಲಿ, ಬೇಕಾದರೆ ನಾಲೆಯನ್ನು ಮತ್ತಷ್ಟು ಅಗಲ ಮಾಡಲಿ. ಆದರೆ, ಹತ್ತಾರು ಅಡಿ ಆಳದ ನಾಲೆಯಲ್ಲಿ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಈ ಬಗ್ಗೆ ಜಿಲ್ಲೆಯ ಸಚಿವರು, ಶಾಸಕರು ಸಭೆಯಲ್ಲಿಗಂಭೀರವಾಗಿಚರ್ಚೆ ಮಾಡಿಜಿಲ್ಲೆಯಜನರಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಗೆ ಅನ್ಯಾಯವಾಗದ ರೀತಿಯಲ್ಲಿ ಈ ಅವೈಜ್ಞಾನಿಕ ಯೋಜನೆಗೆ ತಾತ್ವಿಕ ಅಂತ್ಯ ದೊರಕಿಸಬೇಕು ಎಂದು ಆಗ್ರಹಿಸಿದರು.ಹೋರಾಟ ಸಮಿತಿಯ ಮುಖಂಡರಾದ ಗುಬ್ಬಿಯ ಎಚ್.ಟಿ. ಭೈರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ರೈತ ಮುಖಂಡರಾದ ಅಜ್ಜಪ್ಪ, ಕಳ್ಳಿಪಾಳ್ಯ ಲೋಕೇಶ್, ವೆಂಕಟೇಗೌಡ, ಶಂಕರಪ್ಪ, ತಿರುಮಲೇಶ್ ಚೇಳೂರು, ಕೆ.ಪಿ.ಮಹೇಶ್, ಸಾಗರನಹಳ್ಳಿ ವಿಜಯಕುಮಾರ್, ನರಸಿಂಹಯ್ಯ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.