ಕೊಟ್ಟೂರು ತಾಲೂಕಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ

KannadaprabhaNewsNetwork |  
Published : Jul 29, 2026, 02:30 AM IST
ಕೊಟ್ಟೂರು ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬಹುತೇಕ ರೈತರ  ಮೆಕ್ಕೆಜೋಳ ಬೆಳೆಗಳು ಮಂಕಾಗಿರುವುದು. | Kannada Prabha

ಸಾರಾಂಶ

ಕೊಟ್ಟೂರು ತಾಲೂಕಿನಲ್ಲಿ ಮುಂಗಾರು ಮತ್ತು ಅದಕ್ಕಿಂತ ಮುಂಚಿತವಾಗಿ ಸುರಿದ ಮಳೆಯಿಂದ ಖುಷಿಗೊಂಡಿದ್ದ ರೈತರು ಮೆಕ್ಕೆಜೋಳ, ಜೋಳ, ಸೂರ್ಯಕಾಂತಿ, ಸಜ್ಜೆ, ಮತ್ತಿತರ ಬೆಳೆಗಳನ್ನು ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಬಿತ್ತಿದ್ದರು. ನಂತರ ಬರಬೇಕಾದ ಮಳೆ ಬಾರದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಜಿ.ಸೋಮಶೇಖರ

ಕೊಟ್ಟೂರು: ಮಳೆ ಹೋಗೇತಿ, ಬರ ಬಂದೈತಿ, ಹೊಲ ಯಾಕ್ ಮಾರಬಾದ್ರಿ, ಮಾರಿದ್ರೆ ಕೈತುಂಬ ದುಡ್ಡು ಇಟ್ಟುಕೊಂಡು ಜೀವನ ಸಾಗಿಸಬಹುದು...

ಇದು ಕೊಟ್ಟೂರು ತಾಲೂಕಿನ ಬಹುತೇಕ ರೈತರ ಬೇಸರದ ಮಾತು. ತಾಲೂಕಿನಲ್ಲಿ ಮುಂಗಾರು ಮತ್ತು ಅದಕ್ಕಿಂತ ಮುಂಚಿತವಾಗಿ ಸುರಿದ ಮಳೆಯಿಂದ ಖುಷಿಗೊಂಡಿದ್ದ ರೈತರು ಮೆಕ್ಕೆಜೋಳ, ಜೋಳ, ಸೂರ್ಯಕಾಂತಿ, ಸಜ್ಜೆ, ಮತ್ತಿತರ ಬೆಳೆಗಳನ್ನು ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಬಿತ್ತಿದ್ದರು. ನಂತರ ಬರಬೇಕಾದ ಮಳೆ ಬಾರದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಅಂತರ್ಜಲ ಕುಸಿತ

ತಾಲೂಕಿನಲ್ಲಿ ಮಳೆ ಬಾರದೇ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಬಿತ್ತಿದ ಬೆಳೆ ಬಾಡಿ ನೆಲಕಚ್ಚಿವೆ. ಬೆಳೆ ರಕ್ಷಿಸಲು ಕೊಳವೆಬಾವಿಗಳಿಗೆ ರೈತರು ಮೊರೆ ಹೋದರೂ ಅಲ್ಲಿ ನೀರು ಸಿಗುತ್ತಿಲ್ಲ. ಕೊಳವೆಬಾವಿಗಳಲ್ಲಿ ಅಂತರ್ಜಲ ಭಾರೀ ಕುಸಿತ ಕಂಡಿದೆ.

ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದಿದ್ದರಿಂದ ಕೃಷಿ ಭೂಮಿ ಬರಡಾಗುವಂತಾಗಿದೆ. ಕೊಟ್ಟೂರು ಕೆರೆ ಸೇರಿದಂತೆ ತಾಲೂಕಿನ ಇತರೆ ಕೆರೆಗಳಿಗೆ ನೀರು ತರಿಸುವ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ.

ಸುಧಾರಣೆ ಕಾಣದ ರೈತರ ಬದುಕು

ಮಳೆ ಬಾರದೇ ಒಂದೂವರೆ ತಿಂಗಳು ಗತಿಸಿದೆ. ಬಿತ್ತಿದ್ದ ಬೆಳೆಗಳು ಬೆಳವಣಿಗೆ ಹಂತದಲ್ಲಿ ಒಣಗಲು ಆರಂಭಿಸಿವೆ. ತಾಲೂಕು ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದ್ದು, ರೈತರ ಜೀವನ ಸುಧಾರಣೆ ಕಾಣುವ ಲಕ್ಷಣಗಳು ಕಾಣುತ್ತಿಲ್ಲ. ತಾಲೂಕಿನಲ್ಲಿ ಇದುವರೆಗೂ 36.2 ಮಿ.ಮೀ. ಮಾತ್ರ ಮಳೆ ಬಂದಿದೆ. ಈ ಬಾರಿ 34301 ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ ಮೆಕ್ಕೆಜೋಳ 12480 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಜೋಳ 480 ಹೆಕ್ಟೇರ್, ಸೂರ್ಯಕಾಂತಿ 825 ಹೆಕ್ಟೇರ್, ಸಜ್ಜೆ 186 ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ಒಟ್ಟಾರೆಯಾಗಿ 1397 ಹೆಕ್ಟೇರ್ ಪ್ರದೇಶದ ರೈತರ ಭೂಮಿಗಳಲ್ಲಿ ಬಿತ್ತನೆಯಾಗಿದೆ.

ರೈತರ ಗುಳೆ

ತಾಲೂಕಿನ ತಾಂಡಾಗಲ್ಲಿನ ಜನ ಕೆಲಸ ಅರಸಿ ದೂರದ ಕಾಫಿ ಪ್ರದೇಶ ಇಲ್ಲವೇ ಕಬ್ಬು ಬೆಳೆಯುವ ಪ್ರದೇಶಗಳತ್ತ ಸದ್ದಿಲ್ಲದೇ ತೆರಳುತ್ತಿದ್ದಾರೆ. ಗುಳೆ ತಪ್ಪಿಸಲು ಸರ್ಕಾರಿ ಅಧಿಕಾರಿಗಳು ವಿಬಿಜಿ ರಾಮ್‌ಜಿ ಯೋಜನೆಯ ಕೆಲಸ ಕೊಡುವ ಭರವಸೆ ನೀಡುತ್ತಿದ್ದಾರೆ. ಆದರೂ ರೈತರು ಹೆಂಡತಿ, ಮಕ್ಕಳ ಸಮೇತ ದೂರದ ಊರಿನತ್ತ ರಾತ್ರೋರಾತ್ರಿ ಪಯಣ ಬೆಳೆಸಿದ ಪ್ರಸಂಗಗಳು ದಿನವೂ ನಡೆಯುತ್ತಲೇ ಇವೆ. ವಲಸೆ ಹೋಗದ ಚಿಕ್ಕಮಕ್ಕಳು ತಾಂಡಾದಲ್ಲಿನ ಶಾಲೆಗಳಿಗೆ ಹೋಗುವ ಬದಲು ಅಲ್ಲಲ್ಲಿ ಸುತ್ತಾಡಿ ಬಂದು ಮನೆಗೆ ಸೇರುತ್ತಿದ್ದಾರೆ. ಸರಾಸಗಟು ಗುಳೆ ಹೋಗುವುದು ನಮಗಿರುವ ಏಕೈಕ ಮಾರ್ಗ ಎಂಬ ಸ್ಥಿತಿಗೆ ರೈತರು ತಲುಪಿದ್ದಾರೆ.

ಬರಗಾಲದ ಛಾಯೆ ಆವರಿಸಿರುವುದರಿಂದ ಕಳೆದ ವಾರ ಜಿಲ್ಲಾಧಿಕಾರಿ ಅಧಿಕಾರಿಗಳ ತಂಡದೊಂದಿಗೆ ತಾಲೂಕಿನ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳ ಸಮೀಕ್ಷೆ ನಡೆಸಿದ್ದಾರೆ. ಶೇ.50ಕ್ಕೂ ಹೆಚ್ಚು ಮಳೆಯ ಕೊರತೆ ಇದೆ. ನೀರಿನ ಮೂಲ ಕಂಡು ಬಾರದೇ ರೈತರ ಹಸಿವಿನ ಯಾತನೆ ಮುಂದುವರೆದಿದೆ. ಸದ್ಯಕ್ಕೆ ಕುಡಿಯುವ ನೀರಿನ ತೊಂದರೆ ಅಷ್ಟಾಗಿ ಕಂಡು ಬಾರದಿದ್ದರೂ ಕೊಟ್ಟೂರು ಪಟ್ಟಣ ಪ್ರದೇಶ ಮತ್ತಿತರ ದೊಡ್ಡ ಗ್ರಾಮಗಳಲ್ಲಿ ಹತ್ತಾರು ದಿನಕೊಮ್ಮೆ ಪೂರೈಕೆಯಾಗುವ ಪರಿಸ್ಥಿತಿ ಬಂದೊದಗಿದೆ. ಕೊಟ್ಟೂರು ತಾಲೂಕು ಕಳೆದ 2-3 ವರ್ಷಗಳ ನಂತರ ಮತ್ತೆ ಬರಗಾಲ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.

ಮಳೆಗಾಗಿ ಕಾದು ಸಾಕಾಗಿದೆ. ಇರುವ 10 ಎಕರೆ ಭೂಮಿಯಲ್ಲಿ ಇನ್ನು ಬಿತ್ತನೆ ಕಾರ್ಯ ನಡೆದಿಲ್ಲ. ಮಳೆ ಬಾರದಿರುವುದರಿಂದ ದಿನದ ಬದುಕು ಸಾಗಿಸಲು ಮತ್ತು ಕುಟುಂಬವನ್ನು ನಿರ್ವಹಣೆಗೆ ಕಟ್ಟಡ ಕಾರ್ಮಿಕ ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಅಳಲು ತೋಡಿಕೊಳ್ಳುತ್ತಾರೆ ಕೊಟ್ಟೂರಿನ ರೈತ ರಾಜಪ್ಪ ಬಿ. ಅವರು.

ನಿಗದಿತ ಬಿತ್ತನೆ ಗುರಿ ತಲುಪುವ ಆಶಯ ಹೊಂದಿ ರೈತರಿಗೆ ಬೇಕಾಗುವ ಎಲ್ಲ ಬಗೆಯ ಬಿತ್ತನೆ ಬೀಜ ಮತ್ತಿತರ ಕೃಷಿ ಪರಿಕರಗಳನ್ನು ದಾಸ್ತಾನು ಇರಿಸಿಕೊಂಡಿದ್ದೇವೆ. ಆದರೆ ಈವರೆಗೂ ಪೂರ್ಣ ಪ್ರಮಾಣದಲ್ಲಿ ಮಳೆ ಸುರಿದಿಲ್ಲ. ಇದು ಕೃಷಿಕರಲ್ಲಿ ಆತಂಕ ತಂದಿದೆ. ರೈತರಿಗೆ ಬೇಕಾಗುವ ಎಲ್ಲ ಬಗೆಯ ಸೌಲಭ್ಯ ನೀಡಲು ಸಿದ್ಧರಿದ್ದೇವೆ ಎಂದು ಕೊಟ್ಟೂರು ಸಹಾಯಕ ಕೃಷಿ ಅಧಿಕಾರಿ ಶ್ಯಾಮ್‌ಸುಂದರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈನಿಕರನ್ನು ಗೌರವಿಸುವ ಕಾರ್ಯವಾಗಲಿ
ಶೆಟ್ಟಿಗೇರಿ: ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯ ದಿನ ಆಚರಣೆ