ಮಳೆ ಅಭಾವ: ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸಿದ್ಧರಾಗಲಿ-ದೇಶಪಾಂಡೆ

KannadaprabhaNewsNetwork |  
Published : Jul 29, 2026, 02:30 AM IST
27ಎಚ್.ಎಲ್.ವೈ-1: ಶಾಸಕ ಆರ್.ವಿ.ದೇಶಪಾಂಡೆಯವರು ಸೋಮವಾರ ತಾಲೂಕಾಡಳಿತ ಸೌಧದಲ್ಲಿ ಹಳಿಯಾಳ ವಿಧಾನ ಸಭಾ ಕ್ಷೇತ್ರಮಟ್ಟದ ಕೃಷಿ-ಮಳೆ ಪರಿಸ್ಥಿತಿಯ ಅವಲೋಕನ ಸಭೆಯನ್ನು ನಡೆಸಿದರು. | Kannada Prabha

ಸಾರಾಂಶ

ಪರಿಸರ ಅಸಮತೋಲನ ಉಲ್ಲಂಘನೆ ತರುವಂತಹ ಯಾವುದೇ ಕಾರ್ಯಕ್ಕೆ ಪರಿಸರ ಅವಕಾಶ ನೀಡುವುದಿಲ್ಲ, ಈ ತತ್ವ ಮನಗಂಡು ಅಧಿಕಾರಿಗಳು ತಮ್ಮ ಸೇವೆ ಸಲ್ಲಿಸಬೇಕು.

ಹಳಿಯಾಳ ಮಟ್ಟದ ಮಳೆ, ಕೃಷಿ ಪರಿಸ್ಥಿತಿ ಅವಲೋಕನ ಸಭೆಯಲ್ಲಿ ಶಾಸಕ ಸೂಚನೆಕನ್ನಡಪ್ರಭ ವಾರ್ತೆ ಹಳಿಯಾಳ

ಪರಿಸರ ಅಸಮತೋಲನ ಉಲ್ಲಂಘನೆ ತರುವಂತಹ ಯಾವುದೇ ಕಾರ್ಯಕ್ಕೆ ಪರಿಸರ ಅವಕಾಶ ನೀಡುವುದಿಲ್ಲ, ಈ ತತ್ವ ಮನಗಂಡು ಅಧಿಕಾರಿಗಳು ತಮ್ಮ ಸೇವೆ ಸಲ್ಲಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಸಲಹೆ ನೀಡಿದರು.

ಸೋಮವಾರ ತಾಲೂಕು ಆಡಳಿತ ಸೌಧದಲ್ಲಿ ನಡೆದ ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ಮಳೆ ಹಾಗೂ ಕೃಷಿಪರಿಸ್ಥಿತಿಯ ಅವಲೋಕನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಂಚಾರ ಮಾಡಿ:

ಈ ಬಾರಿ ಮಳೆ ಅಭಾವದಿಂದ ಬೆಳೆ ಸರಿಯಾಗಿ ಬರದೇ ಇರುವುದರಿಂದ ಅನ್ನದಾತ ಸಹ ಆತಂಕಕ್ಕೊಳಗಾಗಿದ್ದಾನೆ. ಹೀಗಿರುವಾಗ ಮುಂದೆ ಬರಬಹುದಾದ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ ಸಿದ್ಧರಾಗಬೇಕು ಎಂದರು.

ತಹಸೀಲ್ದಾರರು, ತಾಪಂ ಇಒಗಳು ಮತ್ತು ಪಿಡಿಒಗಳು ವಿವಿಧ ಇಲಾಖೆಯ ಅಧಿಕಾರಿಗಳು ಕಚೇರಿ ಬಿಟ್ಟು, ಹೊರ ಬಂದು, ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ ಸಾರ್ವಜನಿಕರನ್ನು, ಭೇಟಿಯಾಗಿ ಚರ್ಚಿಸಿ, ಸಮಸ್ಯೆ ಆಲಿಸಿ ಬಗೆಹರಿಸಲು ಪ್ರಯತ್ನಿಸಿರಿ ಎಂದರು.

ಮಳೆ ಕೊರತೆ:

ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಕೃಷಿ-ಮಳೆಯ ಮಾಹಿತಿ ನೀಡಿದ ಕೃಷಿ ಸಹಾಯಕ ನಿರ್ದೇಶಕ ಪಿ.ಐ.ಮಾನೆ, ಹಳಿಯಾಳ ತಾಲೂಕಿನಲ್ಲಿ ಶೇ. 49 ಹಾಗೂ ದಾಂಡೇಲಿ ತಾಲೂಕಿನಲ್ಲಿ ಶೇ.36 ಮಳೆಯ ಕೊರತೆಯಿದೆ. ಭತ್ತದ ಬೆಳೆಗೆ ಇನ್ನಷ್ಟು ನೀರು ಬೇಕಾಗಿದ್ದು, ಕಬ್ಬು ಮತ್ತು ಗೋವಿಜೋಳ ಉತ್ತಮವಾಗಿದೆ, ಹತ್ತಿ ಬೇಸಾಯ ಕಡಿಮೆಯಾಗಿದೆ ಎಂದರು.

ಜೋಯಿಡಾ ತಾಲೂಕಿನಲ್ಲಿ ಈಗ ನಾಟಿ ಮಾಡುವ ಕಾರ್ಯ ಆರಂಭಗೊಂಡಿದೆ. ಜೋಯಿಡಾ ತಾಲೂಕು ಸಾವಯವ ತಾಲೂಕು ಎಂದು ಘೋಷಿಸಿದ್ದರಿಂದ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಲು ಪ್ರೋತ್ಸಾಹಕರ ಯಾವುದೇ ಕ್ರಮವಾಗಿಲ್ಲ ಎಂದು ತಿಳಿಸಿದರು.

ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ. ಕೆ.ಎಂ.ನದಾಫ ಮಾತನಾಡಿ, ದುಸಗಿ ಗ್ರಾಮದಲ್ಲಿರುವ ಜಿಲ್ಲಾ ಗೋಶಾಲೆಯಲ್ಲಿ 210 ಜಾನುವಾರಗಳಿವೆ. ಗೋಶಾಲೆಗೆ ಮೇವಿನ ಕೊರತೆಯಿಲ್ಲ, ಒಣಮೇವು ಈಗ ದುಬಾರಿಯಾಗಿದೆ ಎಂದು ತಿಳಿಸಿದರು.

ಗ್ರಾಮಾಂತರ ಕುಡಿಯುವ ನೀರು ಪೂರೈಕೆ ವಿಭಾಗದ ಅಧಿಕಾರಿ ಸತೀಶ ಬಿರಾದಾರ ಇಲಾಖೆಯ ಪ್ರಗತಿಯನ್ನು ಮಂಡಿಸಿ ಗ್ರಾಮಾಂತರ ಭಾಗದಲ್ಲಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದರು.

ಕೊಲ್ಲಿ ಯುದ್ಧ ಆರಂಭವಾಗಿದ್ದರಿಂದ ಡಾಂಬರು ಸಮಸ್ಯೆಯು ಎದುರಾಗಿದೆ ಎಂದು ಪಿಡಬ್ಲ್ಯುಡಿ ಎಇಇ ಸಂತೋಷ ಅಥಣಿ ತಿಳಿಸಿದರು. ಡಾಂಬರು ದರ ಏರಿಕೆಯಾಗಿದ್ದರಿಂದ ಹೆಚ್ಚುವರಿ ಹಣವನ್ನು ನೀಡಲು ಆರ್ಥಿಕ ಇಲಾಖೆಯು ಪರವಾನಿಗೆ ನೀಡಿದೆ ಎಂದು ತಿಳಿಸಿದರು.

ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ಮಾರಕವಾದ 120ಕ್ಕೂ ಹೆಚ್ಚು ಮರ ತೆರವುಗೊಳಿಸಲಾಗಿದೆ ಎಂದು ಎಸಿಎಫ್‌ ತಿಳಿಸಿದರು. ಕುಳಗಿ-ಗೌಳಿವಾಡದ ಬಳಿ ಬಡ ಗೌಳಿ ರೈತನೊಬ್ಬನ ಮನೆ ಆವರಣದಲ್ಲಿ ಬೆಳೆದ ಮರವನ್ನು ತೆರವುಗೊಳಿಸಲು ಅರಣ್ಯ ಇಲಾಖೆಯವರು ಹಣವನ್ನು ಆಕರಿಸಿದ್ದಾರೆಂದು ಜಿಪಂ ಮಾಜಿ ಅಧ್ಯಕ್ಷ ಕೃಷ್ಣ ಪಾಟೀಲ ಸಲ್ಲಿಸಿದ ದೂರನ್ನು ಕೇಳಿ ಕೆಂಡಾಮಂಡಲರಾದ ಶಾಸಕರು ಡಿಸಿಎಫ್‌ಗೆ ಕರೆಮಾಡಿ ಆದ ಪ್ರಮಾದ ಸರಿಪಡಿಸುವಂತೆ ಸೂಚಿಸಿದರು.

ಸಭೆಯಲ್ಲಿ ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ದಾಂಡೇಲಿ ತಹಸೀಲ್ದಾರ ಶೈಲೇಶ್ ಪರಮಾನಂದ, ತಾಪಂ ಇಒ ಟಿ.ಸಿ. ಹಾದಿಮನಿ, ಜೋಯಿಡಾ ತಹಸೀಲ್ದಾರ ಮಂಜುನಾಥ ಮುನವಳ್ಳಿ, ತಾಪಂ ಇಒ ಭಾರತಿ ಎನ್, ಹಳಿಯಾಳ ವಿಧಾನಸಭಾ ಕ್ಷೇತ್ರ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೈನಿಕರನ್ನು ಗೌರವಿಸುವ ಕಾರ್ಯವಾಗಲಿ
ಶೆಟ್ಟಿಗೇರಿ: ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯ ದಿನ ಆಚರಣೆ