ಕ್ರಿಯಾಶೀಲತೆಯಿರದೆ ಮಾಧ್ಯಮದ ಗುಣಮಟ್ಟ ಕುಸಿತ: ಕೆ.ವಿ.ಪ್ರಭಾಕರ್ ವಿಷಾದ

KannadaprabhaNewsNetwork |  
Published : Jul 28, 2024, 02:07 AM IST
ಪೋಟೊ: 27ಎಸ್‌ಎಂಜಿಕೆಪಿ04ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ವಾರ್ತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ವಾರ್ತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದ ಜನರಿಗೆ ತಾಳ್ಮೆ ಇಲ್ಲ. ಕ್ರಿಯಾಶೀಲತೆ ಕಡಿಮೆ ಆಗುತ್ತಿದೆ. ಹಾಗಾಗಿ ಪತ್ರಿಕೋದ್ಯಮದ ಗುಣ ಮಟ್ಟವೂ ಕುಸಿಯುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ವಾರ್ತಾ ಇಲಾಖೆ ಸಹಯೋಗದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪತ್ರಕರ್ತರಲ್ಲಿ ಕೇಳಿಸಿಕೊಳ್ಳುವ, ಆಲೋಚನೆ ಮಾಡುವ, ಚಿಂತನೆ ಮಾಡುವ ಗುಣ ಕಡಿಮೆ ಆಗಿದೆ. ಪತ್ರಿಕೋದ್ಯಮಕ್ಕೆ ಬರುವವರು ಮಧ್ಯಮ ವರ್ಗ, ಬಡವರ ಕುಟುಂಬದಿಂದ ಬಂದವರೇ ಹೆಚ್ಚಿದ್ದಾರೆ. ಆದರೂ ಬಡವರ ಪರವಾದ ಕಾಳಜಿ ಮಾತ್ರ ಕಾಣುತ್ತಿಲ್ಲ. ಜನರಿಗೆ ಏನು ಕೊಡಬೇಕೋ ಅದನ್ನು ನಾವು ಕೊಡುತ್ತಿಲ್ಲ. ಹಾಗಾಗಿ ಪತ್ರಿಕೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಉಳಿಯುತ್ತಿಲ್ಲ. ಭವಿಷ್ಯದಲ್ಲಿ ಪತ್ರಿಕೋದ್ಯಮಕ್ಕೆ ಬರುವ ವಿದ್ಯಾರ್ಥಿಗಳು ಒಮ್ಮೆ ಈ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಜನರಿಗೆ ಏನು ಬೇಕೋ ಅಂತಹ ಸುದ್ದಿಗಳನ್ನು ನೀಡಬೇಕು. ಜನಪರವಾಗಿ ಹಾಗೂ ಕ್ರಿಯಾತ್ಮಕವಾಗಿ ಪತ್ರಿಕೋದ್ಯಮ ಕೆಲಸ ಮಾಡಬೇಕು. ಇತ್ತೀಚಿನ ದಿನಮಾನದಲ್ಲಿ ಬರವಣಿಗೆ ನಶಿಸುತ್ತಿದೆ. ಕ್ರಿಯಾತ್ಮಕತೆ ದಿನೇ ದಿನೇ ಕ್ಷೀಣಿಸುತ್ತಿದೆ. ಸುದ್ದಿಗಳಲ್ಲಿ ಸಮಾಜ ಪರತೆ ಕಡಿಮೆ ಆಗಿದೆ. ವೈಭವೀಕರಣ ಮತ್ತು ಪೀತ ಪತ್ರಿಕೋದ್ಯಮ ಹೆಚ್ಚುತ್ತಿದೆ. ಈ ಕುರಿತು ಪತ್ರಕರ್ತರು ಹಾಗೂ ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು. ನಾವು ಯಾವ ರೀತಿಯ ಸುದ್ದಿಗಳನ್ನು ನೀಡಬೇಕೆಂದು ಆಲೋಚಿಸಿ, ಜನ ಮತ್ತು ಸಮಾಜಪರವಾಗಿ ಕೆಲಸ ಮಾಡುವ ತುರ್ತು ಇದೆ ಎಂದರು.

ಶಿವಮೊಗ್ಗ ಜಿಲ್ಲೆ ಚಳವಳಿಗಳ ತವರೂರು, ಇಲ್ಲಿನ ಅನೇಕ ಮಂದಿ ಪತ್ರಕರ್ತರು ರಾಜ್ಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಈ ಊರಿನ ವಿಶೇಷ. ಪತ್ರಕರ್ತರು ಹೆಚ್ಚಾಗಿದ್ದಾರೆ. ಪತ್ರಿಕೆಗಳು ಹೆಚ್ಚಿವೆ. ಇದು ಗೌರವದ ಸಂಕೇತವು ಹೌದು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಪತ್ರಕರ್ತರು ಹಾಗೂ ಅವರ ಒಟ್ಟು ಕುಟುಂಬ ಸಂಕಷ್ಟದಲ್ಲಿದೆ. ಪತ್ರಕರ್ತರ ಆರೋಗ್ಯಕ್ಕೆ ವಿಶೇಷ ಒತ್ತು ನೀಡುವಂತಹ ಕೆಲಸ ಆಗಬೇಕು. ಆಂಧ್ರ ಪ್ರದೇಶ ಮಾದರಿ ರೀತಿ ರಾಜ್ಯದಲ ಪತ್ರಕರ್ತರಿಗೂ ಆರೋಗ್ಯದ ಸವಲತ್ತುಗಳು ಸಿಗುವಂತಾಗಬೇಕು. ಇದಕ್ಕಾಗಿ ಪತ್ರಕರ್ತರ ಕ್ಷೇಮ ನಿಧಿಯ ಸಮಿತಿ ರಚಿಸಿ 25 ಕೋಟಿ ರೂ ಮೀಸಲಿಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ.ಶಿವಕುಮಾರ್ ಮಾತನಾಡಿ, ವ್ಯವಸ್ಥೆಯಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಲ್ಲಿ ನ್ಯಾಯ ಸಿಗದೆ ಹೋದಾಗ ಜನರು ಪತ್ರಿಕಾ ರಂಗದ ಕಡೆ ನೋಡುತ್ತಿದ್ದರು. ಆದರೆ ಈಗ ಜನರ ವಿಶ್ವಾಸವನ್ನು ಮಾಧ್ಯಮ ಉಳಿಸಿಕೊಳ್ಳುತ್ತಿಲ್ಲ. ಅದು ಬದಲಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಾರ್ಯಕಾರಿ ಸಮಿತಿ ಸದಸ್ಯ ಎನ್.ರವಿಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಹಿರಿಯ ಪತ್ರಕರ್ತ ಎಚ್.ಬಿ.ಮದನಗೌಡ, ವಾರ್ತಾಧಿಕಾರಿ ಆರ್.ಮಾರುತಿ , ಅಗ್ನಿ ಗಿರೀಶ್, ರಾಷ್ಟ್ರೀಯ ಮಂಡಳಿ ಸದಸ್ಯ ಬಂಡಿಗಡಿ ನಂಜುಂಡಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಕಾರ್ಯದರ್ಶಿ, ನಾಗರಾಜ್ ನೇರಿಗೆ ಸೇರಿದಂತೆ ಸಂಘ ಮತ್ತು ಟ್ರಸ್ಟಿನ ಪದಾಧಿಕಾರಿಗಳು ಹಾಜರಿದ್ದರು.

ಗ್ರಾಮೀಣ ಪತ್ರಕರ್ತರಿಗೆ ಶೀಘ್ರ ಉಚಿತ ಬಸ್‌ಪಾಸ್‌

ಗ್ರಾಮೀಣ ಭಾಗದ ಪತ್ರಕರ್ತರ ಬಹುದಿನದ ಬೇಡಿಕೆಯಾಗಿದ್ದ ಉಚಿತ ಬಸ್‌ ಪಾಸ್ ಯೋಜನೆ ಶೀಘ್ರದಲ್ಲೇ ಜಾರಿಯಾಗಲಿದೆ. ಪತ್ರಕರ್ತರ ವೈದ್ಯಕೀಯ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲೇ ಆರೋಗ್ಯ ವಿಮೆ ಜಾರಿಗೆ ತರಲಿದ್ದು, ಇದಕ್ಕೆ ಸುಮಾರು 10 ಕೋಟಿ ರು. ಅವಶ್ಯಕತೆ ಇದೆ. ವಿಮೆ ಕುರಿತಾದ ಮಾರ್ಗ ಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಸದಾ ಸಮಾಜದ ಕುರಿತು ಚಿಂತನೆ ಮಾಡುವ ಪತ್ರಕರ್ತರು ತಮ್ಮ ಕುಟುಂಬದ ಬಗ್ಗೆಗೂ ಹೆಚ್ಚಿನ ಕಾಳಜಿ ವಹಿಸಬೇಕೆಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಕಿವಿಮಾತು ಹೇಳಿದರು.

ಲಗಾಮೇ ಇಲ್ಲದ ಡಿಜಿಟಲ್ ಮಾಧ್ಯಮ

ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಪತ್ರಿಕೋದ್ಯಮದ ಸವಾಲುಗಳ ಬಗ್ಗೆ ಚರ್ಚೆ ಮಾಡಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಗೋಪಾಲ್‌ ಯಡಗೆರೆ ತಿಳಿಸಿದರು.

ಇಂದು ಮುದ್ರಣ ಮಾದ್ಯಮ ದೊಡ್ಡ ಸವಾಲು ಎದುರಿಸುತ್ತಿದೆ. ಮುದ್ರಣ ಮಾಧ್ಯಮಕ್ಕೆ ದೊಡ್ಡ ಬಿಕ್ಕಟ್ಟಿದೆ. ಡಿಜಿಟಲ್ ಮಾಧ್ಯಮಕ್ಕೆ ಯಾವುದೇ ಲಂಗು‌-ಲಗಾಮು ಇಲ್ಲದೆ ದೊಡ್ಡ ಯುವ ಸಮೂಹ ಹೆಜ್ಜೆ ಇಡುತ್ತಿದೆ. ಒಂದು ಮೊಬೈಲ್ ಸಿಕ್ಕರೆ ಸಾಕು ದೊಡ್ಡ ಪತ್ರಕರ್ತ ಆಗಬಹುದು ಎಂಬ ಭ್ರಮೆಯಲ್ಲಿ ಯುವ ಸಮುದಾಯ ಇದೆ. ಈ ಭ್ರಮೆಯಿಂದ ಪರ್ತಕರ್ತರು ಹೊರಬರಬೇಕಿದೆ ಎಂದರು.

ಇಂದು ಪತ್ರಿಕೋದ್ಯಮ ಸೇವೆಯಾಗಿ ಉಳಿದಿಲ್ಲ. ಪತ್ರಿಕೋದ್ಯಮ ಉದ್ಯಮವಾಗಿ ರೂಪಿತವಾಗಿದೆ. ಆದರೆ, ಅನೇಕರು ಪತ್ರಕರ್ತರು ತಮ್ಮದೇ ಪತ್ರಿಕೆಗಳನ್ನು ಮಾಡಿಕೊಂಡು ಅದನ್ನು ಉಳಿಸಿಕೊಳ್ಳಲು ಸಾಲ-ಶೂಲ ಮಾಡಿಕೊಂಡು ಒದ್ದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪತ್ರಿಕೆ ನಡೆಸುವ ಮ್ಯಾನೇಜ್ಮೆಂಟ್ ಸ್ಕಿಲ್ ಬಗ್ಗೆ ತರಬೇತಿ ನೀಡಬೇಕಾದ ಅನಿವಾರ್ಯತೆಯೂ ಇದೆ. ಇನ್ನು ಸ್ಥಳೀಯ ಪತ್ರಕರ್ತರು ಆದಾಯದ ಕೊರತೆಯನ್ನು ಎದುರಿಸುತ್ತಿದ್ದಾರೆ. ಪತ್ರಕರ್ತರಿಗೆ ಹಣಕಾಸು ನಿರ್ವಹಣೆ ಮತ್ತು ನೈತಿಕ ಮೌಲ್ಯಗಳ ಅಳವಡಿಕೆ ಬಗ್ಗೆ ತರಬೇತಿ ನೀಡುವಂತಾಗಬೇಕು ಎಂದು ಹೇಳಿದರು.ಎಐಗೆ ಬುದ್ಧಿ ಶೂನ್ಯ: ದೇಸಾಯಿ

ಸವಾಲು ಕೇವಲ ಪತ್ರಕರ್ತರ ಮುಂದಿಲ್ಲ. ಓದುಗರ ಮುಂದೆಯೂ ಇದೆ. ಹೀಗಾಗಿ ಸುದ್ದಿಗಳ ವಿಚಾರಗಳಿಗೆ ಪತ್ರಕರ್ತರು ಆದ್ಯತೆ ನೀಡಬೇಕಿದೆ. ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿವೆ ಎಂದು ಹಿರಿಯ ಪತ್ರಕರ್ತ ಋಷಿಕೇಷ ಬಹದ್ದೂರು ದೇಸಾಯಿ ಹೇಳಿದರು.

ಮಾಧ್ಯಮ ಕ್ಷೇತ್ರಕ್ಕೆ ಭವಿಷ್ಯದ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸುಳ್ಳು ಸುದ್ದಿಯಲ್ಲಿಂದು ನಿಪುಣತೆ ಹೆಚ್ಚಾಗುತ್ತಿದೆ. 9 ಸಾವಿರ ಪತ್ರಕರ್ತರು ದೇಶದ್ರೋಹದ ಕೇಸಿನಲ್ಲಿ ಜೈಲಿನಲ್ಲಿದ್ದಾರೆ ಎಂದರು. ಆರ್ಟಿಫಿಷಿಯಲ್ ಇಂಟಲಿಜೆನ್ಸಿಯಲ್ಲಿ ಬುದ್ಧಿ ಇಲ್ಲ. ನಾವು ಒಂದು ಹುಡುಕಿದರೆ ಅದು ಇನ್ನೊಂದು ಕೊಡುತ್ತದೆ. ಹೀಗಾಗಿ ಅದನ್ನು ಬಳಸಬೇಕೇ ಬೇಡವೇ ಎಂಬುದನ್ನು ನಾವೇ ತೀರ್ಮಾನಿಸಿಕೊಳ್ಳಬೇಕಿದೆ. ಮನಸು ಬದಲಾಯಿಸದೆ ಭಾಷೆ ಬದಲಾಯಿಸಿದರೆ ಉಪಯೋಗವಿಲ್ಲ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ