ದೇಶದಲ್ಲಿ ಪಶು ಸಂಪತ್ತು ಇಳಿಕೆಯಾಗುತ್ತಿರುವುದು ಆತಂಕ: ಶಾಸಕ ಆರಗ ಜ್ಞಾನೇಂದ್ರ

KannadaprabhaNewsNetwork |  
Published : Sep 25, 2026, 03:30 AM IST
ಫೊಟೋ 24 ಟಿಟಿಎಚ್ 02: ಹಿರೇಸರ ನೆಸ್ಟ್ ಹೋಂಸ್ಟೆನಲ್ಲಿ ಗುರುವಾರ ಆರಂಭಗೊಂಡ 3 ದಿನಗಳ ರಾಜ್ಯ ಮಟ್ಟದ ಪಶು ವೈದ್ಯರ ತರಬೇತಿ ಶಿಬಿರವನ್ನು ಶಾಸಕ ಆರಗ ಜ್ಞಾನೇಂದ್ರ ಉಧ್ಗಾಟಿಸಿದರು. ತೀರ್ಥಹಳ್ಳಿ ಲಯನ್ಸ್ ಅಧ್ಯಕ್ಷ ಶ್ರೀನಾಥ್ ಜೋಯ್ಸ್ ಇದ್ದರು. | Kannada Prabha

ಸಾರಾಂಶ

ಪಶುರೋಗ ಚಿಕಿತ್ಸೆಯಲ್ಲಿ ಪಾರಂಪರಿಕ ಆಯುರ್ವೇದ ಮತ್ತು ಪರ್ಯಾಯ ಪದ್ದತಿಗಳ ಅಳವಡಿಕೆ ಮತ್ತು ಆ ಬಗೆಗಿನ ಚಿಂತನೆ ಅಗತ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಪಶುರೋಗ ಚಿಕಿತ್ಸೆಯಲ್ಲಿ ಪಾರಂಪರಿಕ ಆಯುರ್ವೇದ ಮತ್ತು ಪರ್ಯಾಯ ಪದ್ದತಿಗಳ ಅಳವಡಿಕೆ ಮತ್ತು ಆ ಬಗೆಗಿನ ಚಿಂತನೆ ಅಗತ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಆರಗ ಸಮೀಪದ ಹಿರೇಸರ ನೆಸ್ಟ್ ಹೋಮ್‌ಸ್ಟೇನಲ್ಲಿ ಹುಂಚದ ಸಿದ್ದಿವಿನಾಯಕ ಸೇವಾ ಸಂಘ, ಹೊಂಬುಜ ಜೈನಮಠ, ಕೋಣಂದೂರು ಹಾಗೂ ತೀರ್ಥಹಳ್ಳಿ ರೋಟರಿ ಮತ್ತು ಲಯನ್ಸ್ ಕ್ಲಬ್, ಬೆಂಗಳೂರಿನ ಕರ್ನಾಟಕ ಪಶುವೈದ್ಯಕೀಯ ಪರಿಷತ್, ಪಶುಪಾಲನಾ ಇಲಾಖೆ, ಪಶು ಮತ್ತು ಮೀನುಗಾರಿಕೆಗಳ ವಿಜ್ಞಾನ ವಿವಿ ಹಾಗೂ ಬೆಂಗಳೂರಿನ ಪಶು ವೈದ್ಯರ ಸಂಘದ ಸಹಯೋಗದಲ್ಲಿ ಗುರುವಾರ ಆರಂಭಗೊಂಡ 3 ದಿನಗಳ ರಾಜ್ಯ ಮಟ್ಟದ ಪಶು ವೈದ್ಯರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪಶು ಸಂಗೋಪನೆಗೆ ಆದ್ಯತೆ ನೀಡುವ ಅನಿವಾರ್ಯತೆ ಇದ್ದು, ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಪಶು ಸಂಪತ್ತು ಇಳಿಕೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಹಿಂದೆ ನಮ್ಮ ಕೊಟ್ಟಿಗೆಗಳೇ ಗೊಬ್ಬರದ ಕಾರ್ಖಾನೆಗಳಾಗಿದ್ದವು ಹಾಗೂ ಪಶು ಸಂಪತ್ತು ದೇಶದ ಘನತೆಯ ಮಾನದಂಡದಂತಿತ್ತು. ಗೋ ಸಂತತಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ವಿದೇಶದಿಂದ ವರ್ಷಕ್ಕೆ ಸುಮಾರು 8 ಲಕ್ಷ ಕೋಟಿ ರು. ರಸಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಗೋವುಗಳನ್ನು ಸಾಕಲು ನಮ್ಮಲ್ಲಿ ಗೋಮಾಳವೂ ಇಲ್ಲವಾಗಿದ್ದು, ಜಾನುವಾರುಗಳನ್ನು ಸಾಕುವ ಸ್ಥಿತಿಯೂ ಇಲ್ಲವಾಗಿದೆ ಎಂದು ಬೇಸರಿಸಿದರು.

ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ದೇಶೀಯ ತಳಿಗಳಿಗೆ ಒತ್ತು ನೀಡುವ ಬದಲಿಗೆ ಹೈಬ್ರೀಡ್ ತಳಿಗಳನ್ನು ಆಮದು ಮಾಡಿಕೊಂಡ ಪರಿಣಾಮ ಹೈಬ್ರೀಡ್ ಖಾಯಿಲೆಗಳನ್ನೂ ಆಹ್ವಾನಿಸಿದ್ದೇವೆ. ದೇಶಿಯ ತಳಿಗಳಿಗೆ ಪ್ರಕೃತಿಯಲ್ಲೇ ಚಿಕಿತ್ಸೆಗೆ ಪೂರಕವಾದ ನಾರು ಬೇರುಗಳಿಂದ ಮಾಡಿದ ಔಷಧವನ್ನು ಬಳಸಲಾಗುತ್ತಿತ್ತು. ಪಶುಗಳಿಗೆ ಬಳಸುತ್ತಿದ್ದ ಗಿಡಮೂಲಿಕೆಗಳ ಬಗ್ಗೆ ಹಿಂದಿನ ನಾಟಿ ಪಂಡಿತರು ಯಾರಿಗೂ ಮಾಹಿತಿಯನ್ನು ಕೊಡದ ಕಾರಣ ನಾಟಿ ವೈದ್ಯಕೀಯ ಪದ್ದತಿ ನಶಿಸಿ ಹೋಗುತ್ತಿದೆ. ವಿಶ್ವ ವಿದ್ಯಾಲಯಗಳು ಈ ಬಗ್ಗೆ ಆಸಕ್ತಿ ವಹಿಸಿ ಪರ್ಯಾಯ ಚಿಕಿತ್ಸೆಯ ಬಗ್ಗೆ ಪ್ರಯೋಗದ ಮೂಲಕ ದೇಶೀಯ ಚಿಕಿತ್ಸಾ ಪದ್ದತಿಗೆ ಆದ್ಯತೆ ಇಡುವ ಅಗತ್ಯವಿದೆ ಎಂದು ಹೇಳಿದರು.

ಮೂರು ದಿನಗಳ ಈ ಶಿಬಿರದಲ್ಲಿ ಸುಮಾರು 100 ಮಂದಿ ಪಶು ವೈದ್ಯರು ಹಾಗೂ ತಜ್ಞರು ಆಗಮಿಸಿದ್ದು, ಪಶು ಆಯುರ್ವೇದ ವಿಜ್ಞಾನದ ಮೂಲತತ್ವಗಳು, ತ್ರಿದೋಷ ಅಗ್ನಿ ರಸಾಯನ ಮತ್ತು ಗಿಡಮೂಲಿಕೆ, ಸ್ಥಳೀಯ ಔಷಧಿ ಸಸ್ಯಗಳ ಗುರುತಿಸುವಿಕೆ ಮತ್ತು ಗಿಡ ಮೂಲಿಕೆಗಳ ಔಷಧ ತಯಾರಿಕೆ, ಹೋಮಿಯೋಪತಿ ಚಿಕಿತ್ಸಾ ಪದ್ದತಿ, ಆಂಟಿಬಯೋಟಿಕ್ ಮುಕ್ತ ನಿರ್ವಹಣಾ ಕ್ರಮಗಳು ಮುಂತಾದ ವಿಷಯಗಳ ಕುರಿತು 6 ಗೋಷ್ಠಿಗಳಲ್ಲಿ ತಜ್ಞರು ತಮ್ಮ ಪ್ರಬಂಧವನ್ನು ಮಂಡಿಸಲಿದ್ದಾರೆ.

ವೇದಿಕೆಯಲ್ಲಿ ಪ್ರೊ.ಕೆ.ಸಿ.ವೀರಣ್ಣ, ಡಾ.ಪಿ.ಶ್ರೀನಿವಾಸ್, ಡಾ.ಬಿ.ಪಿ.ಶಂಕರ್, ಡಾ.ಶಿವಶರಣಪ್ಪ ಯಲ್ಗೋಡ್, ಡಾ. ಮಂಜೇಶ್ ಗೌಡ, ಡಾ.ಫಣಿರಾಜ್, ಕಾರ್ತಿಕ್ ಶರ್ಮಾ, ಅಭಿಷೇಕ್, ಸಂದೇಶ್, ವಿಷ್ಣು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಿವು ಎಂಬುದು ಗ್ರಹಿಕೆ, ಭಾವನೆಯ ನಂಬಿಕೆ
ಸಾಂಪ್ರದಾಯಿಕ ಬೇರುಗಳಿಲ್ಲದೆ ಆರೋಗ್ಯಕರ ರಾಷ್ಟ್ರ ನಿರ್ಮಾಣ ಅಸಾಧ್ಯ