ಲಕ್ಷ್ಮೀ ಶಿವಣ್ಣ
ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಜನತಾ ಬಜಾರ್ ಹಾಗೂ ಹಳೇ ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಆಕಾಶಬುಟ್ಟಿ, ವಿವಿಧ ಬಗೆಯ ದೀಪಗಳು ಸೇರಿದಂತೆ ಹಲವು ಅಲಂಕಾರಿಕ ವಸ್ತುಗಳು ಗ್ರಾಹಕರ ಗಮನ ಸೆಳೆಯುತ್ತಿವೆ.ಮಾರುಕಟ್ಟೆಯ ಸುತ್ತೆಲ್ಲ ಅಲಂಕಾರಿಕ ವಸ್ತುಗಳದ್ದೆ ಹವಾ ಎಂಬಂತಾಗಿದೆ. ಬಿದಿರು, ಬಟ್ಟೆ, ಪ್ಲಾಸ್ಟಿಕ್ ಹೀಗೆ ಅದೆಷ್ಟೋ ರೀತಿಯ ಆಕಾಶಬುಟ್ಟಿಗಳು, ಮಣ್ಣಿನ ಹಣತೆ, ಪುಟ್ಟ-ಪುಟ್ಟ ಕ್ಯಾಂಡಲ್ ಲೈಟ್, ನೀರಿನ ದೀಪ, ಸುಂದರವಾದ ತೋರಣ, ಪ್ಲಾಸ್ಟಿಕ್ ಹೂಗಳು, ಅಂಗಳದ ಅಂದ ಹೆಚ್ಚಿಸುವ ವಿವಿಧ ವಿನ್ಯಾಸದ ರಂಗೋಲಿಯ ಅಚ್ಚುಗಳು, ಬಣ್ಣಬಣ್ಣದ ರಂಗೋಲಿ ಹೀಗೆ ಮನೆಯ ಅಂದವನ್ನು ಹೆಚ್ಚಿಸುವ ಅಲಂಕಾರಿಕ ವಸ್ತುಗಳು ಜನರನ್ನು ಕೈಬೀಸಿ ಕರೆಯುತ್ತಿವೆ.
₹50 ಪುಟ್ಟ ಶಿವನಬುಟ್ಟಿಯಿಂದ ಹಿಡಿದು ₹3500ರ ವರೆಗಿನ ದೊಡ್ಡ ಶಿವನಬುಟ್ಟಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಖರೀದಿಗೆ ಉತ್ಸುಕತೆಯಿಂದ ಜನ ಆಗಮಿಸುತ್ತಿದ್ದಾರೆ. ಮನೆಯ ಅಂದವನ್ನು ಹೆಚ್ಚಿಸುವ ಬಾಗಿಲು ತೋರಣಗಳ ವಿಚಾರಕ್ಕೆ ಬಂದಾಗ ₹80ರಿಂದ ₹450ರ ವರೆಗಿನ ಪ್ಲಾಸ್ಟಿಕ್ ತೋರಣಗಳ ಜತೆಗೆ ಗುಣಮಟ್ಟದ ಮುತ್ತಿನ ತೋರಣ ಹಾಗೂ ಹಾರಗಳು ₹900ರ ವರೆಗೂ ತಮ್ಮ ಬೆಲೆ ಹೊಂದಿದ್ದರೂ ಅವುಗಳನ್ನು ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ. ತೂಗಾಡುವ ಕ್ಯಾಂಡೆಲ್ ದೀಪಗಳು ₹60, ₹100ರಿಂದ ₹120 ಮಣ್ಣಿನ ಹಣತೆ. ₹30-40 ರಂಗೋಲಿ ಅಚ್ಚು ಹೀಗೆ ಮನೆಯ ಅಲಂಕಾರಿಕ ವಸ್ತುಗಳಿಂದ ಹುಬ್ಬಳ್ಳಿಯ ಮಾರುಕಟ್ಟೆ ತುಂಬಿಹೋಗಿದೆ. ಇವುಗಳನ್ನು ಕೊಳ್ಳಲು ಬರುವ ಗ್ರಾಹಕರಿಗೇನೂ ಕೊರತೆಯಿಲ್ಲ. ಹಬ್ಬ ಸಮೀಪಿಸುತ್ತಿದ್ದಂತೆ ಮಹಿಳೆಯರು ಹಾಗೂ ಮಕ್ಕಳಿಂದ ಮಾರುಕಟ್ಟೆ ತುಂಬಿ ತುಳುಕುತ್ತಿದೆ.ವಿಶೇಷವಾಗಿ ಲಕ್ಷ್ಮೀ ಪೂಜೆಗಾಗಿ ಬೆಳ್ಳಿಯ ಪೂಜಾ ಸಾಮಗ್ರಿಗಳು, ಮುಗುತಿ, ಕಿವಿಯೋಲೆ, ದೇವಿಯ ಮೂರ್ತಿ, ಬೆಳ್ಳಿಯ ದೀಪ ನಾನಾ ಬಗೆಯ ಸಾಮಗ್ರಿಗಳ ಖರೀದಿಗೆ ಜನ ಮುಂದಾಗಿದ್ದಾರೆ. ವಿಶೇಷ
ಶಿವನಬುಟ್ಟಿ, ಕ್ಯಾಂಡಲ್ ದೀಪ, ಹಣತೆ, ತೋರಣ ಹೀಗೆ ಹಲವಾರು ಅಲಂಕಾರಿಕ ವಸ್ತುಗಳು ದೀಪಾವಳಿಗಾಗಿಯೇ ಮಾರುಕಟ್ಟೆಗೆ ಬಂದಿವೆ. ಬಿದಿರು, ಶ್ರೀರಾಮನಚಿತ್ರ ಹೊಂದಿರುವ ಆಕಾಶ ಬುಟ್ಟಿಗಳು ಈ ವರ್ಷದ ದೀಪಾವಳಿಯ ವಿಶೇಷವಾಗಿವೆ.ವಿನೋದ, ಸ್ಥಳೀಯ ವ್ಯಾಪಾರಿ
ಖುಷಿಯಾಗತ್ತೆಹಬ್ಬಅಲ್ವಾ, ತೋರಣ ಎಲ್ಲ ಖರೀದಿಸಬೇಕಿತ್ತು. ಬೆಲೆ ಜಾಸ್ತಿನೇ ಇದೆ. ಹಬ್ಬ ವರ್ಷಕ್ಕೆ ಒಂದೇ ಸಾರಿ ಬರುತ್ತೆ. ಹಬ್ಬ ಚೆನ್ನಾಗಿ ಮಾಡಿದರೆ ಮಕ್ಕಳಿಗೂ ಖುಷಿಯಾಗುತ್ತೆ, ನಮಗೂ ಖುಷಿಯಾಗುತ್ತೆ. ಮನೆ ಮಂದಿ ಎಲ್ಲರೂ ಸೇರಿ ಹಬ್ಬಆಚರಿಸುತ್ತೇವೆ.
ಕಾವ್ಯಾ ಎಸ್. ಸ್ಥಳೀಯರು