ರಾಮನಗರ: ನಾಗರಿಕರ ಆಶೋತ್ತರಗಳಿಗೆ ಸ್ಪಂದಿಸುತ್ತಾ ರಾಮನಗರವನ್ನು ಮಾದರಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಗರಸಭಾ ಅಧ್ಯಕ್ಷನಾಗಿ ಒಂದು ವರ್ಷ ಪೂರೈಸಿರುವ ಘಳಿಗೆಯನ್ನು ಸ್ಮರಣೀಯವಾಗಿಸಲು ಜ.21ರಂದು ದ್ಯಾವರಸೇಗೌಡನದೊಡ್ಡಿಯಲ್ಲಿ ಸಾರ್ಥಕ ಸೇವೆಯ ಸಮರ್ಪಣೆ ಕೃತಜ್ಞತಾ ಹಾಗೂ ಗೌರವಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರದ ಸಮಸ್ತ ನಾಗರಿಕರ ಆಶೀರ್ವಾದ ಹಾಗೂ ನಗರಸಭಾ ಸದಸ್ಯರ ಬೆಂಬಲದಿಂದ ಜನಸೇವೆಯೇ ಜನಾರ್ಧನ ಸೇವೆ ಎಂಬ ಸಂಕಲ್ಪದೊಂದಿಗೆ ನಾನು ನಗರಸಭೆ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ನಗರದ ಅಭಿವೃದ್ಧಿ, ನಾಗರಿಕರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ವಿಷಯಗಳಲ್ಲಿ ಮೈಲುಗಲ್ಲು ಸ್ಥಾಪಿಸಿದ್ದೇವೆ ಎಂದು ಹೇಳಿದರು.
ನಗರದ ನಾಗರಿಕರಿಗೆ ಪರಿಶುದ್ಧ ನೀರು, ಉತ್ತಮ ರಸ್ತೆ, ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣ, ಬಡಾವಣೆಗಳ ಸ್ವಚ್ಛತೆ, ಕೆರೆಗಳ ಅಭಿವೃದ್ಧಿ, ಉದ್ಯಾನವನ ನಿರ್ಮಾಣ, ಖಾಲಿ ನಿವೇಶನಗಳಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ನಗರದಲ್ಲಿ 100 ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆ ನಿರ್ಮಾಣದ ಜೊತೆಗೆ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಮುಖ್ಯರಸ್ತೆಗಳನ್ನು ಧೂಳು ಮುಕ್ತಗೊಳಿಸಲು ನೀರು ಸಿಂಪಡಿಸುವುದು, ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ನಿಗಾ ಇಡಲು ಸಿಸಿ ಕ್ಯಾಮೆರಾ, ಕಮ್ಯುನಿಟಿ ಮೊಬಿಲೈಸರ್ ಗಳ ನಿಯೋಜನೆ ಮಾಡಲಾಗಿದೆ ಎಂದರು.ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ, ವೃತ್ತಿ ನಿರತ ಸವಿತಾ ಸಮಾಜ ಮತ್ತು ಮಡಿವಾಳ ಸಮುದಾಯಕ್ಕೆ ಟೂಲ್ ಕಿಟ್ ನೀಡಲಾಗಿದೆ. ಪೌರ ಕಾರ್ಮಿಕರ ಮನೆ ದುರಸ್ತಿಗೆ ಸಹಾಯಧನ, ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಸೇರಿ ಹಲವು ಸೌಲಭ್ಯ ವಿತರಿಸಲಾಗಿದೆ. ಮನೆಮನೆಗೆ ಇ - ಖಾತಾ ಅಭಿಯಾನ ಯಶಸ್ವಿಯಾಗಿ ಮುಂದುವರೆದಿದೆ. ನಗರಸಭೆ ಆವರಣದಲ್ಲಿ 3ಡಿ ರೂಪದಲ್ಲಿ ಸಂವಿಧಾನ ಪೀಠಿಕೆ ಅನಾವರಣ, ಕನ್ನಡ ರಾಜ್ಯೋತ್ಸವ ಪ್ರಯುಕ್ತ ರೇಷ್ಮೆನಾಡು ಕನ್ನಡ ಹಬ್ಬದಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ನಾಗರಿಕ ಸನ್ಮಾನ ಹಾಗೂ ಸಾಧಕರಿಗೆ ಶ್ರೀ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ಐತಿಹಾಸಿಕ ದಾಖಲೆಯಾಗಿದೆ ಎಂದರು.
ಯುವಜನರಿಗೆ ವೃತ್ತಿಪರ ಶಿಕ್ಷಣಕ್ಕೆ ನೆರವಾಗಲು ವೃತ್ತಿಪರ ಕೋರ್ಸ್ ಗಳ ಪರೀಕ್ಷೆಗಳಾದ ಸಿಇಟಿ, ಜೆಇಇ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗಿದೆ. ಕೋಮು ಸಾಮರಸ್ಯ ಬೆಸೆದು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಕಳೆದೊಂದು ವರ್ಷದಲ್ಲಿ ನಗರಸಭೆಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ಕಾರ್ಯಕ್ರಮಗಳಲ್ಲಿ ಶೇಕಡ 70ರಷ್ಟನ್ನು ಕಾರ್ಯಗತಗೊಳಿಸಿದ್ದೇವೆ ಎಂದರು.ಮಾದರಿ ನಗರ ನಿರ್ಮಾಣಕ್ಕೆ ನವಹೆಜ್ಜೆ:
ನಗರದ ಸುತ್ತಲೂ ರಿಂಗ್ (ಹೊರ ವರ್ತುಲ) ರಸ್ತೆ ನಿರ್ಮಾಣ ಆಗಬೇಕಿದೆ. ಸಾಹಿತ್ಯ ಸಾಂಸ್ಕೃತಿಕ ಸಮಾರಂಭಗಳಿಗಾಗಿ ಸಾಂಸ್ಕೃತಿಕ ಭವನ ನಿರ್ಮಾಣವಾಗಬೇಕು. ನಗರಸಭೆಯನ್ನು ಗ್ರೇಡ್ -2 ಹಂತದಿಂದ ಗ್ರೇಡ್ -1 ಆಗಿ ಮೇಲ್ದರ್ಜೆಗೇರಿಸಬೇಕು. ರಸ್ತೆಗಳ ಬದಿಯಲ್ಲಿ ಗಿಡ ನೆಟ್ಟು ನಗರವನ್ನು ಹಸಿರೀಕರಣ ಮಾಡಬೇಕಿದೆ. ಅಲ್ಲದೆ, ಸ್ವಚ್ಛ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಇಂಧೋರ್ ಗೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ ಎಂದರು.ನಗರದ ಜೀವನಾಡಿ ಅರ್ಕಾವತಿ ನದಿ ಶುದ್ಧೀಕರಣವಾಗಬೇಕು. ನಗರ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ಕಾಯಕಲ್ಪ, ಸರ್ವಿಸ್ ರಸ್ತೆಗಳ ದುರಸ್ತಿ, ವಾಹನಗಳಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಇ ಖಾತಾ ಅಭಿಯಾನ ಮುಂದುವರಿಸಬೇಕಿದೆ ಎಂದು ಶೇಷಾದ್ರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಆಯುಕ್ತ ಜಯಣ್ಣ ಇದ್ದರು.
ಕೋಟ್ ........ನಗರದ ಸಮಸ್ತ ನಾಗರಿಕರಿಗಾಗಿ ಒಂದಲ್ಲ ಒಂದು ಜನೋಪಯೋಗಿ ಕಾರ್ಯಕ್ರಮ ರೂಪಿಸಲಾಗಿದೆ. ಜನರ ಪ್ರೀತಿ ವಿಶ್ವಾಸದೊಂದಿಗೆ ಕ್ರಿಯಾಶೀಲವಾಗಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ನಗರದ ಪ್ರತಿ ಕುಟುಂಬಕ್ಕೂ ನಗರಸಭೆಯ ಎಲ್ಲಾ ಸೇವೆಗಳು ಪಾರದರ್ಶಕವಾಗಿ ಕಾಲಮಿತಿಯಲ್ಲಿ ತಲುಪುವಂತೆ ಮಾಡುವುದು ನಮ್ಮ ಗುರಿ.
-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ19ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.