ಸಮರ್ಪಣಾ ಭಾವವೇ ಜೀವನದಲ್ಲಿ ಸರ್ವಶ್ರೇಷ್ಠ: ಶಿವಾನಂದ ಹೆಗಡೆ

KannadaprabhaNewsNetwork |  
Published : May 31, 2024, 02:17 AM IST
 ಉಮೇಶ ಭಟ್ಟ ಬಾಡ ದಂಪತಿಗಳನ್ನು ಸನ್ಮಾನಿಸಿರುವುದು | Kannada Prabha

ಸಾರಾಂಶ

ಹೊನ್ನಾವರ ತಾಲೂಕಿನ ಕುಂಬಾರಮಕ್ಕಿಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಶ್ರೀ ಸದ್ಗುರು ಸಭಾಭವನದಲ್ಲಿ ಚಿಣ್ಣರ ಮೇಳದ ರಜತೋತ್ಸವ ಸಮಾರಂಭ ನಡೆಯಿತು.

ಹೊನ್ನಾವರ: ಪುಟ್ಟ ಹೆಜ್ಜೆಗೆ ಗೆಜ್ಜೆ ಕಟ್ಟಿಸಿ, ರಂಗದಲ್ಲಿ ಯಕ್ಷಗಾನದ ಹೆಜ್ಜೆ ಹಾಕಿಸಿದ ಯಕ್ಷಗುರು ಉಮೇಶ ಭಟ್ಟ ಬಾಡ ಅವರದ್ದು ಸಾರ್ಥಕ ಯಕ್ಷಸೇವೆ ಎಂದು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಅಭಿಪ್ರಾಯಪಟ್ಟರು.‌

ತಾಲೂಕಿನ ಕುಂಬಾರಮಕ್ಕಿಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಶ್ರೀ ಸದ್ಗುರು ಸಭಾಭವನದಲ್ಲಿ ನಡೆದ ಚಿಣ್ಣರ ಮೇಳದ ರಜತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಉತ್ತರ ಕನ್ನಡದ ಅನೇಕ ಕಡೆಗಳಲ್ಲಿ ಚಿಣ್ಣರಿಗೆ ಹೆಜ್ಜೆ ಕಲಿಸಿ, ಮುಂದಿನ ಕಲಾಸಕ್ತ ಸಮುದಾಯದ ಉಳಿವಿನಲ್ಲಿ ಮಹತ್ತರ ಪಾತ್ರ ವಹಿಸಿದ ಉಮೇಶ ಭಟ್ಟ ಬಾಡ ಅವರು ನಿಜಾರ್ಥದಲ್ಲಿ ತ್ಯಾಗದ ಜೀವನ ನಡೆಸಿದವರು. ಸಮರ್ಪಣಾ ಭಾವವೇ ಜೀವನದಲ್ಲಿ ಸರ್ವಶ್ರೇಷ್ಠವಾದದ್ದು. ಯಕ್ಷಗಾನ ಕಲೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಂತೆ ಬದುಕಿದ ಹಾಗೂ ವ್ಯಾಪಾರೀಕರಣದ ಯಾವುದೇ ಗೋಜಿಗೆ ಹೋಗದೇ ಕಲೆಯನ್ನು ಆರಾಧಿಸಿಕೊಂಡು, ವಿದ್ಯಾರ್ಥಿಗಳಿಗೆ 30 ವರ್ಷಗಳಿಂದ ಯಕ್ಷಗಾನದ ಗುರುವಾಗಿರುವ ಉಮೇಶ ಭಟ್ಟ ಬಾಡ ಅವರ ಕಾರ್ಯ ಅನನ್ಯವಾದದ್ದು ಎಂದು ಬಣ್ಣಿಸಿದರು.

ಉಮೇಶ ಭಟ್ಟ ಬಾಡ ಹಾಗೂ ಅವರ ಪತ್ನಿ ಮಹಾಲಕ್ಷ್ಮಿ ಭಟ್ಟ ಅವರನ್ನು ಅಭಿನಂದಿಸಿದ ಅಭಿಮಾನಿಗಳು ''''''''ಯಕ್ಷ ದ್ರೋಣ'''''''' ಬಿರುದು ನೀಡಿ ಸನ್ಮಾನಿಸಿದರು. ಜತೆಗೆ ಬೆಳ್ಳಿಯ ತಾಳದ ಕೊಡುಗೆ ನೀಡಿದರು. ಚಿಣ್ಣರ ಮೇಳಕ್ಕೆ ಬೆನ್ನೆಲುಬಾಗಿ ಸಹಕಾರ ನೀಡಿದ ೧೫ ಜನರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ‌ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಮಾತನಾಡಿ, ಉತ್ತರ ಕನ್ನಡದವರು ತಮ್ಮ ಸಾಧನೆಯನ್ನು ಎಲ್ಲಿಯೂ ಹೇಳಿಕೊಂಡವರಲ್ಲ. ಸಾಧನೆಯ ಬಗ್ಗೆ ದಾಖಲೆಯನ್ನು ಸಂಗ್ರಹಿಸಿ ಇಟ್ಟವರಲ್ಲ. ನಮ್ಮ ಕೆಲಸ ನಾವು ಪ್ರಾಮಾಣಿಕತೆಯಿಂದ ಮಾಡಿದ್ದೇವೆ. ಆದರೆ ಉ.ಕ.ದವರನ್ನು ಗುರುತಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಬೇಸರಿಸಿದರು.

ಹಿರಿಯ ಕಲಾವಿದ ಕಡತೋಕಾ ಶಂಭು ಭಟ್ಟ ಮಾತನಾಡಿ, ಕಲೆಯನ್ನು ಉಳಿಸಲು ತ್ಯಾಗದ ಭಾವ ಬೇಕು. ಮಕ್ಕಳಿಗೆ ಯಕ್ಷಗಾನದ ಹೆಜ್ಜೆಯನ್ನು ಕಲಿಸಿ ಅದರಲ್ಲಿಯೇ ಸಾರ್ಥಕತೆಯ ಭಾವವನ್ನು ಹೊಂದಿದ ಉಮೇಶ ಭಟ್ಟ ಬಾಡ ಅವರ ಸೇವೆ ಇಂದು ಕಲಾವಿದರ ರೂಪದಲ್ಲಿ ಅರಳಿದೆ ಎಂದರು.

ಗ್ರಾಪಂ ಉಪಾಧ್ಯಕ್ಷ ಅಜಿತ್ ನಾಯ್ಕ ಮಾತನಾಡಿ, ತನಗಾಗಿ ಏನನ್ನೂ ಬಯಸದೆ, ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ಎಲ್ಲರಿಗೂ ಯಕ್ಷಗಾನ ಕಲಿಸಿದ ಉಮೇಶ ಭಟ್ಟ ಅವರ ಭಾವಚಿತ್ರಕ್ಕೆ ಪ್ರತಿದಿನ ಬೆಳಗ್ಗೆ ನಮಸ್ಕರಿಸುತ್ತೇನೆ ಎಂದು ಭಾವುಕರಾಗಿ ನುಡಿದರು.

ಯಕ್ಷಗುರು ಉಮೇಶ ಭಟ್ಟ ಬಾಡ, ಯಕ್ಷಗಾನ ಸಂಶೋಧನಾ ಕೇಂದ್ರದ ಅಧ್ಯಕ್ಷ ಮಂಜುನಾಥ ಭಟ್ಟ, ಕಾರ್ಯದರ್ಶಿ ವಸಂತ ಭಟ್ಟ, ನವೀನ ನಾಯ್ಕ ಇದ್ದರು.

ಗೋಪಾಲಕೃಷ್ಣ ಭಾಗವತ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಭಟ್ಟ ಉಳ್ಗೆರೆ ಅಭಿನಂದನಾ ನುಡಿಗಳನ್ನಾಡಿದರು. ಎಂ.ಆರ್. ನಾಯಕ ವಂದಿಸಿದರು. ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರೂಪಿಸಿದರು. ಚಿಣ್ಣರ ಮೇಳದ ಕಿರಿಯ ಹಾಗೂ ಹಿರಿಯ ಕಲಾವಿದರಿಂದ ನಡೆದ ಅನಲ ಹಸ್ತ ಹಾಗೂ ಸಮಗ್ರ ಕಂಸ ಯಕ್ಷಗಾನ ಆಖ್ಯಾನ ಜನಮೆಚ್ಚುಗೆ ಪಡೆಯಿತು.

PREV

Recommended Stories

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : 3 ಜಿಲ್ಲೆಗಳಿಗೆ 3 ದಿನ ಯೆಲ್ಲೋ, 2 ದಿನ ಆರೆಂಜ್‌ ಅಲರ್ಟ್‌
ಅಲೆಮಾರಿಗಳಿಗೆ 6 ನಿರ್ಣಯ ಜಾರಿ ಮಾಡಿ ವಿಶೇಷ ಪ್ಯಾಕೇಜ್‌ಗೆ ಸಮಾಜ ಆಗ್ರಹ