ಉದ್ಘಾಟನಾ ಕಾರ್ಯಕ್ರಮ । ವೀರಶೈವ ಸಮಾಜದ ಮುಖಂಡ ಯಡೇಹಳ್ಳಿ ಮಂಜುನಾಥ್ ಮಾಹಿತಿ । 1 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ
ಸಮಾನತೆಯ ಹರಿಕಾರ, ಸಾಂಸ್ಕೃತಿಕ ನಾಯಕ, ವಿಶ್ವ ಗುರು ಬಸವೇಶ್ವರರ ಕಂಚಿನ ಪ್ರತಿಮೆಯ ಅನಾವರಣದ ಐತಿಹಾಸಿಕ ಕಾರ್ಯಕ್ರಮ ಗುರುವಾರ ಪಟ್ಟಣದಲ್ಲಿ ನಡೆಯಲಿದೆ ಎಂದು ವೀರಶೈವ ಸಮಾಜದ ಮುಖಂಡ ಯಡೇಹಳ್ಳಿ ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಲವು ದಶಕಗಳ ಹೋರಾಟದ ಫಲವಾಗಿ ಪಟ್ಟಣದಲ್ಲಿ ಮಲೆನಾಡು ವೀರಶೈವ ಸಮಾಜದ ವತಿಯಿಂದ ಎಲ್ಲಾ ಸಮಾಜದವರು ಹಾಗೂ ಸಂಘ ಸಂಸ್ಥೆಗಳ ನೆರವಿನಿಂದ ಸುಮಾರು ೧ ಕೋಟೆ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎರಡು ಸಾವಿರ ಕೆಜಿ ತೂಕದ ಅಶ್ವಾರೂಢ ಬಸವೇಶ್ವರರ ಮೂರ್ತಿಯನ್ನು ಜೂ.13 ರಂದು ಲೋಕಾರ್ಪಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗೆ 9 ಗಂಟೆಗೆ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಬಸವೇಶ್ವರ ಪುತ್ಥಳಿವರೆಗೆ ನಗರದ ರಾಜಬೀದಿಯಲ್ಲಿ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಬೃಹತ್ ಮೆರವಣಿಗೆ ಮಾಡಲಾಗುವುದು. ಮಧ್ಯಾಹ್ನ ೧೨ ಗಂಟೆಗೆ ಬಸವೇಶ್ವರ ಪುತ್ಥಳಿಯನ್ನು ಲೋಕಾರ್ಪಣೆ ಮಾಡಿ ಮಧ್ಯಾಹ್ನ ೧.೩೦ಕ್ಕೆ ಬ್ಯಾಕರವಳ್ಳಿ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಬೃಹತ್ ಧಾರ್ಮಿಕ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಧ್ಯಾಹ್ನ ೧೨.೩೦ರ ನಂತರ ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಸಮಾಜ ಸೇವಕ ಪುನೀತ್ ಬನ್ನಹಳ್ಳಿರವರು ಬಸವೇಶ್ವರ ಪುತ್ಥಳಿ ನಿರ್ಮಾಣದ ಹಾಗೂ ಧಾರ್ಮಿಕ ಕಾರ್ಯಕ್ರಮದ ವಿಶೇಷ ದಾಸೋಹ ದಾನಿಗಳು ಆಗಿರುತ್ತಾರೆ. ಹೀಗಾಗಿ ಇವರಿಗೆ ವಿಶೇಷ ಗುರುರಕ್ಷೆ ನೀಡಲಾಗುವುದು. ಹಾಸನದ ಕಡೆಯಿಂದ ಬರುವ ವಾಹನಗಳನ್ನು ಶ್ರೀನಿವಾಸ ಕಲ್ಯಾಣ ಮಂಟಪದ ಆವರಣದಲ್ಲಿ, ಹಾನುಬಾಳ್, ಮಾರನಹಳ್ಳಿ, ಹೆತ್ತೂರು ಕಡೆಯಿಂದ ಬರುವ ವಾಹನಗಳನ್ನು ಟಾಟಾ ಕಾಫಿ ಜಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಗಣ್ಯರ ವಾಹನಗಳ ನಿಲುಗಡೆಗೆ ಹಳೇ ಮಾಧ್ಯಮಿಕ ಪಾಠ ಶಾಲೆಯ ಆವರಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಜನಾಂಗದ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು.
ವೀರಶೈವ ಸಮಾಜದ ಮುಖಂಡರಾದ ಹುರುಡಿ ಅರುಕುಮಾರ್, ನರೇಶ್ ಎ.ವಿ., ಮಠಸಾಗರ ಶ್ರೀಧರ್, ಲೋಹಿತ್ ಜಂಬರ್ಡಿ, ಶಶಿಕುಮಾರ್, ಸಂಗಪ್ಪ, ನಾಗರ ಹಿತೇಶ್, ಶಶಿಕಲಾ ಲೋಕೇಶ್, ವಿಜಯ ಧನ್ಯಕುಮಾರ್ ಹಾಜರಿದ್ದರು.