ಪಂ. ದೀನದಯಾಳ ಉಪಾಧ್ಯಾಯರು ತತ್ವನಿಷ್ಠರು: ಅರುಣಕುಮಾರ ಪೂಜಾರ

KannadaprabhaNewsNetwork |  
Published : Sep 26, 2024, 11:41 AM IST
ಹಾವೇರಿ ನಗರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪಂ. ದೀನದಯಾಳ ಉಪಾಧ್ಯಾಯರ ಜಯಂತಿ ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ಹಾವೇರಿ ನಗರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪಂ. ದೀನದಯಾಳ ಉಪಾಧ್ಯಾಯರ ಜಯಂತಿ ಆಚರಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು.

ಹಾವೇರಿ: ಪಂ. ದೀನದಯಾಳ ಉಪಾಧ್ಯಾಯ ಅವರು ಕೈಗೊಂಡ ಕಾರ್ಯ ವ್ಯಕ್ತಿ ನಿಷ್ಠವಾಗಿರದೇ ತತ್ವನಿಷ್ಠವಾಗಿತ್ತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.

ನಗರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪಂ. ದೀನದಯಾಳ ಉಪಾಧ್ಯಾಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆದರ್ಶಗಳಿಗೆ ಪ್ರಾಮುಖ್ಯ ಕೊಟ್ಟು, ತಾವು ಅದಕ್ಕೆ ತಕ್ಕಂತೆ ಜೀವಿಸಿ, ತತ್ವ-ಸಿದ್ಧಾಂತಗಳಿಗಾಗಿ ಜೀವಿಸುವುದನ್ನು ಕಲಿಸಿಕೊಟ್ಟ ದೀನದಯಾಳರ ಉತ್ತಾರಿಧಿಕಾರಿಗಳಾಗಿ ನಾವು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಪಂ. ದೀನದಯಾಳ ಉಪಾಧ್ಯಾಯರು ರಾಜಕೀಯ ಮುಖಂಡರು ಎನ್ನುವುದಕ್ಕಿಂತ ಹೆಚ್ಚಾಗಿ ಓರ್ವ ತತ್ವಜ್ಞಾನಿ, ಮೇಧಾವಿ, ಅರ್ಥಶಾಸ್ತ್ರಜ್ಞ, ಕುಶಲ ಸಂಘಟಕ. ಪ್ರಭಾವಿ ವಕ್ತಾರ ಹಾಗೂ ಸಮರ್ಥ ಲೇಖಕ, ಅವರೊಬ್ಬ ಆದರ್ಶ ರಾಷ್ಟ್ರಸೇವಕ, ಜೀವನದ ಸರ್ವಸ್ವವನ್ನೂ ಸಮರ್ಪಿಸಿಕೊಂಡು ಭಾರತಾಂಬೆಯ ಅನನ್ಯ ಆರಾಧಕ. ದೇಶ ಸೇವೆಗೆ ಬದ್ಧರಾದ ಎಲ್ಲ ಪಕ್ಷ-ಪಂಗಡಗಳ ಮುಖಂಡರಿಗೆ ಅವರ ಜೀವನ ಮಾರ್ಗದರ್ಶಕವಾಗಿದೆ ಎಂದರು.

ಜನಸಂಘ ಒಂದು ಅಪ್ಪಟ ಭಾರತೀಯ ಪಕ್ಷವಾಗಬೇಕು ಎಂಬುದು ದೀನದಯಾಳಜೀ ಅವರ ಇಚ್ಛೆಯಾಗಿತ್ತು. ರಾಜಕೀಯ ಕ್ಷೇತ್ರದ ಕಾರ್ಯಕರ್ತರಿಗೂ ಜನಸಂಘದ ವಿಚಾರಧಾರೆ ಮತ್ತು ಕಾರ್ಯ ಪದ್ಧತಿಯನ್ನು ಹೇಳಿಕೊಡುವ ದೃಷ್ಟಿಯಿಂದ ಅಭ್ಯಾಸ ವರ್ಗದ ಅವಶ್ಯಕತೆಯಿದೆ ಎಂದು ಯೋಚಿಸಿ ಅದನ್ನು ಪಕ್ಷದಲ್ಲೂ ಜಾರಿಗೆ ತಂದರು. ಈ ಅಭ್ಯಾಸ ವರ್ಗಗಳಲ್ಲಿ ಕಾರ್ಯಕರ್ತರಿಗೆ ಅತ್ಯಂತ ಗಹನವಾದ ವಿಷಯವನ್ನು ಅತ್ಯಂತ ಸರಳ ರೀತಿಯಲ್ಲಿ ಹೇಳಿಕೊಡುತ್ತಿದ್ದರು ಎಂದರು.

ಪಾಕಿಸ್ಥಾನ-ಭಾರತದ ನಡುವಿನ ಸಮಸ್ಯೆಯ ವಿಷಯದಲ್ಲಿ ಭಾರತ ತಪ್ಪು ಹೆಜ್ಜೆ ಇಡುತ್ತಿದ್ದಂತೆ ಎಚ್ಚರಿಸುವ ಕೆಲಸವನ್ನು ದೀನದಯಾಳಜೀ ಮಾಡುತ್ತಿದ್ದರು. ೧೯೬೫ರಲ್ಲಿ ಕಛ್ ಒಪ್ಪಂದಕ್ಕೆ ಭಾರತ-ಪಾಕಿಸ್ಥಾನ ಸಹಿ ಹಾಕುತ್ತಿದ್ದಂತೆ ಈ ಒಪ್ಪಂದವನ್ನು ರದ್ದುಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ೧೯೬೫ ಆ. ೧೬ರಂದು ದೆಹಲಿಯ ಬೀದಿಗಳಲ್ಲಿ ೫ ಲಕ್ಷ ಜನರನ್ನು ಸೇರಿಸಿ ಕಛ್ ಒಪ್ಪಂದದ ವಿರುದ್ಧ ಪ್ರತಿಭಟನೆ ನಡೆಸಿದರು ಎಂದು ಹೇಳಿದರು.

ರಾಜ್ಯ ವಕ್ತಾರರಾದ ಎಚ್.ಎ. ಚಂದ್ರಶೇಖರ, ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಪ್ರಕಾಶ ಉಜನಿಕೊಪ್ಪ, ಶಿವಯೋಗಿ ಹುಲಿಂತಿಮಠ, ಲತಾ ಬಡ್ನಿಮಠ, ಚನ್ನಮ್ಮ ಪಾಟೀಲ, ದೀಪಕ್ ಮಡಿವಾಳರ, ಜಗದೀಶ ಮಲಗೋಡ, ಕೃಷ್ಣಾಜಿ ಮಾನೆ ಹಾಗೂ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ