- ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕಿನ ಅಧ್ಯಕ್ಷೆ ಮಂಜುಳ ಮಾನಸ ಸಲಹೆ
- ದೀಪಾ ಕಾಲೇಜಿನಲ್ಲಿ ಸರಸ್ವತಿ ಶಾರದಾ ಪೂಜಾ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ----
ಕನ್ನಡಪ್ರಭ ವಾರ್ತೆ ಮೈಸೂರುಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಇರುವ ಮಿತ ಸವಲತ್ತುಗಳನ್ನು ಬಳಸಿಕೊಂಡು ಅಪರಿಮಿತ ಸಾಧನೆ ಮಾಡಬೇಕು ಎಂದು ಮೈಸೂರು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕಿನ ಅಧ್ಯಕ್ಷೆ ಹಾಗೂ ವಕೀಲೆ ಮಂಜುಳಾ ಮಾನಸ ಕರೆ ನೀಡಿದರು.
ರೂಪಾನಗರದ ದೀಪಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸರಸ್ವತಿ ಶಾರದಾ ಪೂಜಾ ಕಾರ್ಯಕ್ರಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 30 ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಓದಲು ಆಗದ ಪರಿಸ್ಥಿತಿಗಳಲ್ಲಿ ಶ್ರದ್ಧೆಯಿಂದ ಕಲಿತವರು ಮುಂದೆ ಬಂದಿದ್ದಾರೆ, ಅದಕ್ಕೆ ನಮ್ಮಂತೆ ಇರುವ ಅನೇಕ ನಿದರ್ಶನಗಳಿವೆ ಎಂದರು.ವಿನಯದಿಂದ ಶ್ರದ್ಧೆಯಿಂದ ಕಲಿಯದೇ ಉಳಿದವರ ಬದುಕು ಇತರರಿಗೆ ಹೇಗೆ ಪಾಠವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಿಮ್ಮ ಜೊತೆ ನೀವು ಮಾತನಾಡಬೇಕು, ಅದಕ್ಕೆ ದಿನದಲ್ಲಿ ಒಂದಷ್ಟು ಸಮಯವನ್ನು ಮೀಸಲಿಡಬೇಕು, ಆಗ ಮಾತ್ರ ನಿಮ್ಮೊಳಗಿನ ಅಂತರಂಗವು ಬಾಹ್ಯ ಪ್ರಪಂಚದಲ್ಲಿ ಲೀನವಾಗುತ್ತದೆ. ಈ ಅಭ್ಯಾಸ ಮೊದಲಿಗೆ ಕಷ್ಟವಾದರೂ ನಂತರ ರೂಢಿಯಾಗುತ್ತದೆ. ಹೀಗೆ ಏಕಾಗ್ರತೆಯಿಂದ ಸಾಧಿಸಿದರೆ ನಿಮ್ಮನ್ನು ತಡೆಯುವವರು ಯಾರು ಎಂದು ತಿಳಿಸಿದರು. ನಾವು ಪ್ರತಿದಿನ ಬೆಳಗ್ಗೆ ಬೇಗ ಎದ್ದು, ನಿನ್ನೆ ಕಳೆದು ಹೋಯಿತು, ನಾಳೆ ಹೇಗೋ ಗೊತ್ತಿಲ್ಲ, ಇಂದು ಮಾತ್ರ ನಮ್ಮದು ಎಂದು ಪ್ರಾರ್ಥನೆ ಸಲ್ಲಿಸಿ ಧನಾತ್ಮಕವಾಗಿ ಯೋಚಿಸಿ ಮುಂದೆ ಗುರುತರ ಸಾಧನೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದೀಪಾ ಶಿಕ್ಷಣ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ಎಂ. ರಾಮಪ್ಪ ಮಾತನಾಡಿ, ಈ ಮುನ್ನ ಸಾಧನೆ ಮಾಡಿರುವವರನ್ನು ಮಾದರಿಯಾಗಿಟ್ಟುಕೊಂಡು ನಾವು ಕಾರ್ಯೋನ್ಮುಖರಾಗಬೇಕು. ಪ್ರಸ್ತುತ ಸಂದರ್ಭದಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿರುವ ನಾವೇ ಪುಣ್ಯವಂತರು. ಅವುಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಮುಂದಿನ ವ್ಯಾಸಂಗಕ್ಕೆ ಸಿದ್ಧರಾಗಿ ಎಂದು ತಿಳಿಸಿದರು.ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜ್ಞಾನದ ಹಣತೆಯನ್ನು ಹಸ್ತಾಂತರ ಮಾಡಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ದೀಪಾ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಪೂಜಾರಿ, ನಿರ್ದೇಶಕರಾದ ಬಾಲಕೃಷ್ಣ ಹಾಗೂ ಡಾ. ನಿವೇದಿತಾ ಸುವರ್ಣ ಇದ್ದರು.ದೀಪಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರಣೀತ ಎರ್ಮಾಳ್, ದೀಪಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಎಚ್. ಗೀತಾ ಹಾಗೂ ದೀಪಾ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎ.ಕೆ. ಬಾಬು ಹಾಗೂ ದೀಪಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶಿಲ್ಪಾ ಭಾಗವಹಿಸಿದ್ದರು. ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.