ಮಂಟೇಸ್ವಾಮಿ ಪುಣ್ಯಕ್ಷೇತ್ರದಲ್ಲಿ ದೀಪಾವಳಿಯ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Nov 12, 2026, 01:45 AM IST
11ಕೆಎಂಎನ್ ಡಿ14 | Kannada Prabha

ಸಾರಾಂಶ

ದೊಡ್ಡರೆಕೆರೆ ಸಮೀಪದ ರಂಗ ಮಂದಿರದಲ್ಲಿ ಮಂಟೇಸ್ವಾಮಿ ಕಂಡಾಯ ಹಾಗೂ ಬಸವಪ್ಪನ ಹೂವು ಹೊಂಬಾಳೆ ಪೂಜಾ ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಜಾತ್ರೆ ಪ್ರಮುಖ ಆಕರ್ಷಣೆಯಾಗಿ ಮಠಾಧಿಪತಿಗಳ ನೇತೃತ್ವದಲ್ಲಿ ಸೂರ್ಯಪಾಣಿ, ಚಂದ್ರಪಾಣಿ, ಸತ್ತಿಗೆ, ದೊಡ್ಡ ಸತ್ತಿಗೆ ಸೇರಿದಂತೆ ವಿವಿಧ ಬಿಂಕು-ಬಿರುದುಗಳೊಂದಿಗೆ ದೇವರ ಉತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಆದಿ ಹೊನ್ನಾಯಕನಹಳ್ಳಿಯ ಧರೆಗೆದೊಡ್ಡವರು ಮಂಟೇಸ್ವಾಮಿ ಪುಣ್ಯಕ್ಷೇತ್ರದಲ್ಲಿ ದೀಪಾವಳಿ ಅಂಗವಾಗಿ ಮಂಟೇಸ್ವಾಮಿ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆ, ಸಡಗರ ಹಾಗೂ ಭಕ್ತಿ ಭಾವದಿಂದ ನೆರವೇರಿತು.

ಮಂಟೇಸ್ವಾಮಿ ಮಠ ಹಾಗೂ ಕಪ್ಪಡಿರಾಚಪ್ಪಾಜಿ ಮಠದ ಮಠಾಧಿಪತಿ ಎಂ.ಎಲ್.ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸು ಅವರ ದಿವ್ಯ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

ಗ್ರಾಮದ ದೊಡ್ಡರೆಕೆರೆ ಸಮೀಪದ ರಂಗ ಮಂದಿರದಲ್ಲಿ ಮಂಟೇಸ್ವಾಮಿ ಕಂಡಾಯ ಹಾಗೂ ಬಸವಪ್ಪನ ಹೂವು ಹೊಂಬಾಳೆ ಪೂಜಾ ಕಾರ್ಯಗಳು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಜಾತ್ರೆ ಪ್ರಮುಖ ಆಕರ್ಷಣೆಯಾಗಿ ಮಠಾಧಿಪತಿಗಳ ನೇತೃತ್ವದಲ್ಲಿ ಸೂರ್ಯಪಾಣಿ, ಚಂದ್ರಪಾಣಿ, ಸತ್ತಿಗೆ, ದೊಡ್ಡ ಸತ್ತಿಗೆ ಸೇರಿದಂತೆ ವಿವಿಧ ಬಿಂಕು-ಬಿರುದುಗಳೊಂದಿಗೆ ದೇವರ ಉತ್ಸವ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಗ್ರಾಮದ ಪ್ರತಿ ಬೀದಿಯಲ್ಲಿಯೂ ದೇವರ ಉತ್ಸವ ಸಾಗುತ್ತಿದ್ದಂತೆ ಭಕ್ತರು ಮನೆಗಳ ಮುಂದೆ ನಿಂತು ಪೂಜೆ ಸಲ್ಲಿಸಿ, ಹೂವು, ಹಣ್ಣು ಅರ್ಪಿಸಿ ಭಕ್ತಿಭಾವ ಮೆರೆದು ಮೆರವಣಿಗೆ ಯುದ್ದಕ್ಕೂ ಮಂಟೇಸ್ವಾಮಿ ನಾಮಸ್ಮರಣೆ ಹಾಗೂ ಧಾರ್ಮಿಕ ಉತ್ಸಾಹ ಮನೆ ಮಾಡಿತ್ತು. ಮಂಗಳವಾರ ಮುಂಜಾನೆ 6 ಗಂಟೆಗೆ ಜಗನ್ಮಾತೆ ಜ್ಯೋತಿ ಬೆಳಗಿಸುವ ಮೂಲಕ ಜಾತ್ರೆ ಧಾರ್ಮಿಕ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಲಾಯಿತು.

ಜ್ಯೋತಿ ಬೆಳಗಿದಾಗ ಭಕ್ತರು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ, ತಮ್ಮ ಕುಟುಂಬಗಳ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಿದರು. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಂಟೇಸ್ವಾಮಿ ಹಾಗೂ ಬಸವಪ್ಪನ ದರ್ಶನ ಪಡೆದು ಪುನೀತರಾದರು.

ವಿಶೇಷವಾಗಿ ಮಂಟೇಸ್ವಾಮಿ ಬಸವಪ್ಪನಿಗೆ ಭಕ್ತರು ಕಾಣಿಕೆಯಾಗಿ ನೀಡಿದ ಐನೂರು ಹಾಗೂ ನೂರು ರುಪಾಯಿ ನೋಟ್‌ಗಳಿಂದ ಅಲಂಕರಿಸಿರುವುದು ಜಾತ್ರೆಯ ಮತ್ತೊಂದು ವಿಶೇಷವಾಗಿದೆ. ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದ ಸಾವಿರಾರು ಭಕ್ತರು ಮಠದ ವತಿಯಿಂದ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ನೀಲಗಾರರ ಪರಂಪರ ಆರಂಭಿಸಿದ ಮಂಟೇಸ್ವಾಮಿ:

ಈ ವೇಳೆ ಮಠಾಧಿಪತಿ ಎಂ.ಎಲ್ ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸು ಮಾತನಾಡಿ, ಸಮಾಜಕ್ಕೆ ಬೆಳಕು ನೀಡಲು ಮಂಟೇಸ್ವಾಮಿ ಪರಂಜ್ಯೋತಿಯಾಗಿ ಉತ್ತರದೇಶದಿಂದ ದಕ್ಷಿಣ ಪ್ರಾಂತ್ಯಕ್ಕೆ ಬಂದು ಶಿಶು ಮಕ್ಕಳನ್ನು ಪಡೆದು ಪವಿತ್ರಗೊಳಿಸಿ ನೀಲಗಾರರನ್ನಾಗಿ ಮಾಡುವ ಮೂಲಕ ನೀಲಗಾರರ ಪರಂಪರೆ ಆರಂಭಿಸಿದ್ದರು ಎಂದರು.

12 ನೇ ಶತಮಾನದಿಂದ ನೀಲಗಾರರ ಪರಂಪರೆ ಮುಂದುವರೆಸಿಕೊಂಡು ಬರಲಾಗುತ್ತಿದೆ. ಮಂಟೇಸ್ವಾಮಿ ರಾಚಪ್ಪಾಜಿ ಮಠ ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಕೂಡ ಸಕ್ರಿಯವಾಗಿ ಸೇವೆ ಮುಂದುವರಿಸಿಕೊಂಡು ಬರಲಾಗುತ್ತಿದೆ. ಮಂಟೇಸ್ವಾಮಿ, ಸಿದ್ದಪ್ಪಾಜಿ ಜಾತ್ರೆಗೆ ಲಕ್ಷಾಂತರ ಭಕ್ತರು ಭಾಗವಹಿಸಿ ಭಕ್ತಿಗೆ ಸಾಕ್ಷಿಯಾಗಿದೆ ಎಂದರು.

ಜಾತ್ರಾ ಮಹೋತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಬನ್ನಹಳ್ಳಿ ವಿಶ್ವಕರ್ಮ ಸಮುದಾಯದ ಮುಖಂಡರು ವಹಿಸಿಕೊಂಡು, ಯಾವುದೇ ಲೋಪದೋಷಗಳಿಲ್ಲದೆ ಸುಗಮವಾಗಿ ನಡೆಯುವಂತೆ ಶ್ರಮಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌