- ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿದ್ದೆ, ಯಾಕೆ ಕೈ ಬಿಟ್ಟರೆಂಬುದೇ ಪ್ರಶ್ನೆ ಎಂದು ಬೇಸರ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಕರ್ನಾಟಕ ವಿಧಾನ ಪರಿಷತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕುತಂತ್ರ, ತಂತ್ರಗಾರಿಕೆ ಮಧ್ಯೆ ನೈತಿಕತೆಗೆ ಸೋಲಾಗಿದೆ. ಸೋಲಿನ ಮಧ್ಯೆಯೂ ನನ್ನ ಆತ್ಮಸ್ಥೈರ್ಯ ಹೆಚ್ಚಾಗಿದೆ ಎಂದು ಕ್ಷೇತ್ರದ ಪರಾಜಿತ ಅಭ್ಯರ್ಥಿ, ವಿಪ ಮಾಜಿ ಮುಖ್ಯ ಸಚೇತಕ ಡಾ. ವೈ.ಎ. ನಾರಾಯಣಸ್ವಾಮಿ ಹೇಳಿದರು.ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶನಿವಾರ ಕ್ಷೇತ್ರದ ಮತದಾರರು, ಮುಖಂಡರು, ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲಿ ತಮಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಸೋಲಿನಿಂದ ನಾನು ಕಂಗಾಲಾಗಿಲ್ಲ. ಶಿಕ್ಷಕರ ಸೇವೆಯನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಹಿನ್ನಡೆಯಾಗಿ ಸೋತಿದ್ದೇನೆ. ಆದರೆ, ಸೋಲಿನಿಂದ ಧೃತಿಗೆಟ್ಟಿಲ್ಲ ಎಂದರು.
ಮೂರು ಅವಧಿಗೆ ವಿಪ ಸದಸ್ಯನಾಗಿ, ಒಂದು ಅವಧಿಗೆ ಶಾಸಕನಾಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಯಾರಿಂದಲೂ ನಾನು ಲಂಚ ಪಡೆದಿಲ್ಲ. ಯಾರಿಗೂ ಮೋಸವನ್ನೂ ಮಾಡಿಲ್ಲ. ಪರಿಷತ್ತು ಸದಸ್ಯನಾಗಿದ್ದ ಅವಧಿಯುದ್ದಕ್ಕೂ ಶಿಕ್ಷಕರ ಪರ ಕೆಲಸ ಮಾಡಿದ್ದೇನೆ. ಇಲಾಖೆಯಲ್ಲಿ ಶಿಕ್ಷಕರಿಗೆ ಗೌರವ ತರುವ ಕಾರ್ಯ ಮಾಡಿದ್ದೇನೆ. ಖಾಸಗಿ ಅನುದಾನಿತ ಶಾಲೆಗಳಿಗೆ ವಾಟರ್ ಫಿಲ್ಟರ್ ಕೊಡಿಸಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ, ನೆರವಾಗಿದ್ದೇನೆ. ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಹೋರಾಡುವ ಶಕ್ತಿ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ, ಕೆಲಸ ಮಾಡಿಸುವ ಶಕ್ತಿಯೂ ನನಗಿದೆ ಎಂದು ಹೇಳಿದರು.ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಶಿಕ್ಷಕರಿಗೂ ₹5 ಸಾವಿರ ಪರಿಹಾರ ಕೊಡಿಸಿದ್ದೇನೆ. ಕಡೆಗೆ ನನ್ನ ವೇತನವನ್ನು ಸಹ ಮನೆಗೆ ಕೊಂಡೊಯ್ಯದೇ, ಕಷ್ಟದಲ್ಲಿರುವ ಶಿಕ್ಷಕರ ಮಕ್ಕಳಿಗಾಗಿ ನೀಡಿದ್ದೇನೆ. ಶಿಕ್ಷಕರ ವೈದ್ಯಕೀಯ ವೆಚ್ಚಗಳಿಗೆ ಕೊಟ್ಟಿದ್ದೇನೆ. ಆದರೂ ಮತದಾರರು ಚುನಾವಣೆಯಲ್ಲಿ ಕೈ ಹಿಡಿಯಲಿಲ್ಲ. ಹೊಸ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದಲೋ ಅಥವಾ ಬೇರೆ ಅಭ್ಯರ್ಥಿಗಳ ಆಮಿಷಕ್ಕೆ ಮನಸೋತರೋ, ಗೊತ್ತಿಲ್ಲ. ಆದರೂ, ಗೆದ್ದ ಅಭ್ಯರ್ಥಿಗೆ ಶುಭ ಕೋರುತ್ತೇನೆ ಎಂದು ಡಾ. ನಾರಾಯಣ ಸ್ವಾಮಿ ತಿಳಿಸಿದರು.
ನಾರಾಯಣಸ್ವಾಮಿ ಅಭಿಮಾನಿ ಬಳಗದ ಪದಾಧಿಕಾರಿಗಳು, ರಾಮ ರೆಡ್ಡಿ, ಸಾಂಬಶಿವಯ್ಯ, ಕೆ.ಜಿ.ಸೌಭಾಗ್ಯಮ್ಮ, ಸುಮತಿ ಜಯಪ್ಪ ಸೇರಿದಂತೆ ಶಿಕ್ಷಕರು, ಬೆಂಬಲಿಗರು ಇದ್ದರು.- - -
ಕೋಟ್ ಕಳೆದ 18 ವರ್ಷಗಳ ನನ್ನ ಸೇವೆಯಲ್ಲಿ ಯಾರೊಬ್ಬರಿಗೂ ನಾನು ಮೋಸ ಮಾಡಿಲ್ಲ. ಯಾರನ್ನೂ ಕೆಟ್ಟದಾಗಿ ಮಾತನಾಡಿಲ್ಲ. ನನಗೆ ಬಂದ ವೇತನದಲ್ಲಿ ಒಂದು ನಯಾ ಪೈಸೆಯನ್ನೂ ಮನೆಗೆ ಒಯ್ದಿಲ್ಲ. ಆದರೂ, ಯಾಕೆ ಕ್ಷೇತ್ರದ ಶಿಕ್ಷಕ ಮತದಾರರು ನನ್ನನ್ನು ಸೋಲಿಸಿದರು ಎಂಬುದೇ ಅರ್ಥವಾಗುತ್ತಿಲ್ಲ. ಮತದಾರರ ತೀರ್ಪಿಗೆ ನಾನು ತಲೆ ಬಾಗುತ್ತೇನೆ- ಡಾ. ವೈ.ಎ. ನಾರಾಯಣಸ್ವಾಮಿ, ಪರಾಜಿತ ಅಭ್ಯರ್ಥಿ
- - - -15ಕೆಡಿವಿಜಿ1:ದಾವಣಗೆರೆ ಜಿಎಂಐಟಿ ಅತಿಥಿ ಗೃಹದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಾ. ವೈ.ಎ. ನಾರಾಯಣಸ್ವಾಮಿ ಕ್ಷೇತ್ರದ ಮತದಾರರು, ಮುಖಂಡರು, ಬೆಂಬಲಿಗರ ಸಭೆ ನಡೆಸಿ, ಕೃತಜ್ಞತೆ ಸಲ್ಲಿಸಿದರು.