ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಾವಿರಾರು ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದು ನನಗೆ ಅಪಾರ ನೋವು ತಂದಿದೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.ತಾಲೂಕಿನ ಹೇಮಗಿರಿಯ ಬಿಜಿಎಸ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ವತಿಯಿಂದ ಆಯೋಜಿಸಿದ್ದ ಭೈರವೈಕ್ಯ ಜಗದ್ಗುರು ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 12 ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮುಂಬೈ ಮಹಾನಗರದಲ್ಲಿ ಉದ್ಯಮಿಯಾಗಿದ್ದ ನಾನು, ಡಾ.ಬಾಲಗಂಗಾಧರನಾಥ ಶ್ರೀಗಳ ಆಶೀರ್ವಾದದಿಂದ ಶಾಸಕನಾಗಿ ಮತ್ತು ಸಚಿವನಾಗಿ ಜನ ಸೇವೆ ಮಾಡಿದ್ದೇನೆ. ಸಚಿವನಾಗಿದ್ದಾಗ 1800 ಕೋಟಿ ರು. ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದೆ. ಆದರೂ ಸೋಲು ಅನುಭವಿಸಬೇಕಾಯಿತು ಎಂದರು.ನಾನು ಸೋಲು ಅನುಭವಿಸಿದ ಮಾತ್ರಕ್ಕೆ ರಾಜಕೀಯವಾಗಿ ವಿಚಲಿತನಾಗಿಲ್ಲ. ಆದರೆ, ಸಾವಿರಾರು ಕೋಟಿ ತಂದು ಅಭಿವೃದ್ಧಿ ಕೆಲಸ ಮಾಡಿದ್ದರೂ ಕ್ಷೇತ್ರದ ಜನ ನನ್ನನ್ನು ಸೋಲಿಸಿದ್ದಕ್ಕೆ ನೋವಿದೆ. ಮುಂದಿನ ದಿನಗಳಲ್ಲಿ ನಾನು ಕ್ಷೇತ್ರದ ಮನೆ ಮನೆಗೂ ಹೋಗಿ ಜನರ ಮನ ಗೆಲ್ಲುವ ಪ್ರಯತ್ನ ಮಾಡುತ್ತೇನೆ. ಜನರ ನಡುವೆ ಇದ್ದು ಮತ್ತೆ ಮುನ್ನೆಲೆಗೆ ಬರುತ್ತೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದರು.
ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ತಪೋಶಕ್ತಿಯಿಂದಲೇ ಆದಿಚುಂಚನಗಿರಿ ಮಠ ವಿಶ್ವಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ಗುರುಗಳ ಆಶೀರ್ವಾದ ನನಗೆ ರಾಜಕೀಯ ಮತ್ತು ಸಾಮಾಜಿಕ ಶಕ್ತಿ ನೀಡಿತು. ಶಿಕ್ಷಣ ಮತ್ತು ಆರೋಗ್ಯ ಸೇವೆ ಮೂಲಕ ಶ್ರೀಗಳು ಶ್ರೀಮಠದ ಕಾರ್ಯಶಕ್ತಿಯನ್ನು ವಿಸ್ತರಿಸಿದ್ದಾರೆ ಎಂದರು.ಚಿತ್ರನಟ ಡಾ.ಶ್ರೀಧರ್ ಮಾತನಾಡಿ, ಜೀವನದ ಮೌಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ನಾಡು ಕಟ್ಟುವ ಶಕ್ತಿಗಳಾಗಬೇಕು. ಮಕ್ಕಳ ಪ್ರತಿಭೆ ಅರಳಲು ಗುರುಗಳ ಪರಿಶ್ರಮವೇ ಮುಖ್ಯ ಕಾರಣ. ದೈವ ಮತ್ತು ಗುರುಭಕ್ತಿ ಇದ್ದವರಿಗೆ ಯಶಸ್ಸು ಖಚಿತ ಎಂದು ತಿಳಿಸಿದರು.
ಸಮಾಜವನ್ನು ಕಟ್ಟುವುದೇ ಶಾಲೆಗಳ ಮೂಲಕ. ಅಂಕಗಳಿಕೆಯೊಂದೇ ಶಿಕ್ಷಣವಲ್ಲ. ಜೀವನ ಮೌಲ್ಯಗಳನ್ನು ಕಲಿಯುವುದೇ ನಿಜವಾದ ಶಿಕ್ಷಣ. ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವಂತೆ ಶಿಕ್ಷಕರಿಗೆ ಕಿವಿಮಾತು ಹೇಳಿದರು.ದೊಡ್ಡವರನ್ನು ನೋಡಿದಾಗ ಅವರ ಪಾದ ಮುಟ್ಟಿ ನಮಸ್ಕರಿಸುವುದು ನಮ್ಮ ಸಂಸ್ಕೃತಿ. ಇದರಿಂದ ಒಂದು ದಿವ್ಯಶಕ್ತಿ ನಮ್ಮೊಳಗೆ ಪ್ರವೇಶವಾಗುತ್ತದೆ. ತಂದೆ-ತಾಯಿ ಮತ್ತು ಗುರು- ಹಿರಿಯರನ್ನು ಗೌರವಿಸುವುದನ್ನು ಚಿಕ್ಕವಯಸಿನಿಂದಲೇ ಮಕ್ಕಳಿಗೆ ಕಲಿಸಿದರೆ ನಮ್ಮ ನಾಡು ವೃದ್ಧಾಶ್ರಮಗಳಿಲ್ಲದ ಮತ್ತು ಸಾಂಸ್ಕೃತಿಕ ಸಿರಿವಂತಿಕೆಯ ಬೀಡಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೇಮಗಿರಿ ಶಾಖಾಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿದರು. ಚಿತ್ರನಟಿ ರೂಪಿಕಾ ಬಿಜಿಎಸ್ ಚಿಣ್ಣರ ಕುಂಚ ಬಿಡುಗಡೆ ಮಾಡಿದರು. ಚಿತ್ರ ನಿರ್ದೇಶಕ ಹಾಗೂ ನಟ ಎಸ್.ಮಹೇಂದರ್ ಬಿಜಿಎಸ್ ಜ್ಞಾನಸಿರಿ ಬಿಡುಗಡೆ ಮಾಡಿದರು. ತಾಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಡಾ.ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್ ಬಿಜಿಎಸ್ ಕ್ಯಾಲೆಂಡರ್ ಬಿಡುಗಡೆಯನ್ನು, ರಾಜ್ಯ ಆರ್.ಟಿ.ಒ ಸಂಘದ ಅದ್ಯಕ್ಷ ಮಲ್ಲಿಕಾರ್ಜುನ್ ಬಿಜಿಎಸ್ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಟಿ.ತಿಮ್ಮೇಗೌಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕೋಡಿಮಠದ ಉತ್ತರಾಧಿಕಾರಿ ಚೇತನ ದೇವರು, ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಪೀಠಾದ್ಯಕ್ಷ ಡಾ.ಫಕೀರ ಸಿದ್ಧರಾಮ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.