4 ತಿಂಗಳಾದ್ರೂ ಪದವಿ ಪ್ರವೇಶ ಆರಂಭವಿಲ್ಲ: ವಿಪ ಸದಸ್ಯ ಡಿ.ಎಸ್.ಅರುಣ್‌

KannadaprabhaNewsNetwork |  
Published : Aug 28, 2024, 12:50 AM IST
ಪೊಟೋ: 27ಎಸ್‌ಎಂಜಿಕೆಪಿ02ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿದರು.  | Kannada Prabha

ಸಾರಾಂಶ

ಕುವೆಂಪು ವಿವಿಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಅವ್ಯವಸ್ಥೆ ಆಗರವಾಗಿದೆ. ಏ.10ರಂದು ಪಿಯುಸಿ ಫಲಿತಾಂಶ ಬಂದಿದ್ದರೂ ಕೂಡ ಪದವಿ ತರಗತಿಗಳಿಗೆ ಇನ್ನೂ ಪ್ರವೇಶಾತಿ ಆರಂಭವಾಗಿಲ್ಲ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪಿಯುಸಿ ಫಲಿತಾಂಶ ಬಂದು 4 ತಿಂಗಳಾದರೂ ಇನ್ನೂ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭಿಸದ ಕುವೆಂಪು ವಿಶ್ವವಿದ್ಯಾಲಯವು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಗಂಭೀರ ಆರೋಪ ಮಾಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುವೆಂಪು ವಿವಿಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಅವ್ಯವಸ್ಥೆ ಆಗರವಾಗಿದೆ. ಏ.10ರಂದು ಪಿಯುಸಿ ಫಲಿತಾಂಶ ಬಂದಿದ್ದರೂ ಕೂಡ ಪದವಿ ತರಗತಿಗಳಿಗೆ ಇನ್ನೂ ಪ್ರವೇಶಾತಿ ಆರಂಭವಾಗಿಲ್ಲ. ಈಗಾಗಲೇ 4 ತಿಂಗಳ ಕಳೆದು ಹೋಗಿವೆ. ಕುವೆಂಪು ವಿವಿ ವ್ಯಾಪ್ತಿಯಲ್ಲಿ ಸುಮಾರು 84 ಕಾಲೇಜುಗಳು ಬರುತ್ತವೆ. ಈ ಎಲ್ಲಾ ಕಾಲೇಜುಗಳಲ್ಲಿಯೂ ಇಷ್ಟು ಹೊತ್ತಿಗೆ ಪ್ರವೇಶ ಆರಂಭವಾಗಿ ಪಾಠಗಳು ಆರಂಭವಾಗ ಬೇಕಿತ್ತು. ಆದರೆ, ಇದುವರೆಗೂ ಅಡ್ಮಿಷನ್ ಆಗಿಲ್ಲ ಎಂದು ದೂರಿದರು.

ಸ್ನಾತಕೋತ್ತರ ಕಾಲೇಜುಗಳು ಕೂಡ ಆರಂಭವಾಗಿಲ್ಲ. ಹೀಗಾದರೆ ಮಕ್ಕಳ ಗತಿಯೇನು ಎಂದು ಪ್ರಶ್ನಿಸಿದ ಅವರು, ಪೋಷಕರು ಆತಂಕಗೊಂಡಿದ್ದಾರೆ. ಕುವೆಂಪು ವಿವಿ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಅಲ್ಲದೆ, ಅತಿಥಿ ಉಪನ್ಯಾಸಕರಿಗೆ ವೇತನ ನೀಡಿಲ್ಲ. ಪರೀಕ್ಷೆ ಮಲ್ಯಮಾಪನ ಮಾಡಿದವರಿಗೆ ಹಣ ನೀಡಿಲ್ಲ, ಅತಿಥಿ ಉಪನ್ಯಾಸಕರನ್ನು ಕಡೆಗಾಣಿಸಲಾಗುತ್ತಿದೆ. ರಾಜ್ಯದಲ್ಲಿರುವ 41 ವಿವಿಗಳ ಪೈಕಿ ಕುವೆಂಪು ವಿವಿ ಕೊನೆಯ ಸ್ಥಾನದಲ್ಲಿದೆ ಎಂದು ಹರಿಹಾಯ್ದರು.

ಆರ್ಥಿಕ ಶಿಸ್ತು ತಪ್ಪಿದ ಸರ್ಕಾರ ವಜಾ ಮಾಡಿ:

ರಾಜ್ಯ ಸರ್ಕಾರ ಆರ್ಥಿಕ ಶಿಸ್ತನ್ನು ಮರೆತುಬಿಟ್ಟಿದೆ. ಅಸಂವಿಧಾನಿಕ ಆರ್ಥಿಕ ವ್ಯವಸ್ಥೆ ಇದೆ. ರಾಜ್ಯಪಾಲರು ತಕ್ಷಣವೇ ರಾಜ್ಯ ಸರ್ಕಾರವನ್ನು ವಜಾ ಮಾಡಿ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಅವ್ಯವಹಾರವಾಗಿರುವುದರಿಂದ ಕೂಡಲೇ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದರು.

ಜಿಪಂ, ತಾಪಂನಲ್ಲಿ 2022-23ರ ಅವಧಿಯಲ್ಲಿ ಬಳಕೆಯಾಗದ ಸುಮಾರು ₹1953 ಕೋಟಿ ಹಣವಿದೆ. ಈ ಹಣವನ್ನು ಎಲ್ಲಿ ಬಳಸಲಾಗಿದೆ ಮತ್ತು ಈ ಹಣ ಯಾವ ಖಾತೆಯಲ್ಲಿದೆ ಎಂಬ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ನಾನು ಪ್ರಶ್ನೆ ಮಾಡಿದ್ದೇನೆ, ಆಗ ಈ ಹಣ ಸಂಚಿತ ನಿಧಿಯಲ್ಲಿ ಇದೇ ಎಂಬ ಉತ್ತರವನ್ನು ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಅಧಿಕಾರಿಗಳು ಕೊಟ್ಟಿದ್ದರು. ಆದರೆ, ಈ ಉಳಿಕೆಯ ಹಣ ಸಂಚಿತ ನಿಧಿಯಲ್ಲೂ ಕೂಡ ಇರಲಿಲ್ಲ ಎಂದರು.

ಈ ಬಗ್ಗೆ ನಾನು ಮತ್ತೊಮ್ಮೆ ಬೆಂಗಳೂರಿನಲ್ಲಿ ನಡೆದ ವಿಧಾನ ಸಭಾ ಅಧಿವೇಶನದಲ್ಲಿ ಪ್ರಶ್ನೆ ಮಾಡಿದೆ. ಆದರೂ ಸಹ ಮುಖ್ಯಮಂತ್ರಿಗಳು ಸುಳ್ಳು ಹೇಳಿದರು. ಈ ಹಣ ಜಮಾವಾಗುತ್ತಿದೆ ಎಂದರು. ಆದರೆ, ಜಮಾ ಆಗಿಲ್ಲ, ಬುಕ್ ಅಡ್ಜಸ್ಟ್‌ಮೆಂಟ್ ಕೂಡ ಆಗಿಲ್ಲ. ಹಾಗಾದರೆ ₹1953 ಕೋಟಿ ಹಣ ಎಲ್ಲಿಗೆ ಹೋಗಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ ಅಸಮಾಧಾನ ವ್ಯಕ್ತಪಡಿಸಿದರು.

ಒಂದು ಪಕ್ಷ ಸಂಚಿತ ನಿಧಿಗೆ ಆ ಹಣ ಹೋಗಿದ್ದರೆ ಅದು ಮರುವರ್ಷ ಬಳಕೆಯಾಗಲೇಬೇಕು. ಹಾಗೆ ಬಳಕೆಯಾಗುವಾಗ ಸಭೆ ಅನುಮೋಧನೆ ಪಡೆಯಬೇಕು. ಸಭೆಯ ಅನುಮೋದನೆಯನ್ನು ಕೂಡ ಇವರು ಪಡೆದಿಲ್ಲ, ಶಾಸಕರ ಹಕ್ಕನ್ನು ಕೂಡ ಮೊಟಕುಗೊಳಿಸಲಾಗಿದೆ. ಈ ಹಣ ಎಲ್ಲಿಗೆ ಹೋಗಿದೆ ಎಂಬ ಬಗ್ಗೆ ಈಗಲೂ ಸರ್ಕಾರಕ್ಕೆ ಗೊತ್ತಿಲ್ಲ, ಆದ್ದರಿಂದ ಈ ಘಟನೆ ಸಂಪೂರ್ಣ ತನಿಖೆಗೆ ಒಳಪಡಿಸಲು ಆಗ್ರಹಪಡಿಸಿದರು.

ಈಗಾಗಲೇ ರಾಜ್ಯಪಾಲರಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮೂಲಕ ದೂರು ಸಲ್ಲಿಸಿದ್ದೇನೆ. ರಾಜ್ಯದ ಹಣಕಾಸು ವ್ಯವಸ್ಥೆ ಹೀಗೆ ದುರ್ಬಲ ವಾದರೆ ಆರ್ಥಿಕ ಶಿಸ್ತು ಎಲ್ಲಿರುತ್ತದೆ. ಮತ್ತು ಇಡೀ ಘಟನೆಗೆ ಮುಖ್ಯಮಂತ್ರಿಗಳು ಕೂಡ ಕಾರಣ ವಾಗುತ್ತಾರೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ಸರ್ಕಾರ ವಜಾ ಮಾಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ