ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪಟ್ಟಣದ ಬೂದಿಕೋಟೆ ವೃತ್ತದಿಂದ ಹುಣಸನಹಳ್ಳಿ ರೈಲ್ವೇ ಮೇಲ್ಸೇತುವೆ ವರೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ 2 ವರ್ಷ ಕಳೆದರೂ ಪೂರ್ಣಗೊಳ್ಳದೆ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಪ್ರತಿನಿತ್ಯ ವಾಹನ ಸವಾರರು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.ಕಾಮಗಾರಿ ವಿಳಂಬದಿಂದಾಗಿ ಬಂಗಾರಪೇಟೆ- ಬೂದಿಕೋಟೆ , ಹೊಸಕೋಟೆ ಮತ್ತು ವಿ ಕೋಟೆ ನಡುವೆ ಸಂಚಾರಿಸುವವರು ವಾಹನಗಳ ಸಂಚಾರ ದಟ್ಟಣೆಯು ಅಧಿಕವಾಗಿದ್ದು ಮುಖ್ಯ ರಸ್ತೆಯನ್ನು ಹಾಗೂ ಬಸ್ ನಿಲ್ದಾಣ ತಲುಪಲು ಸುತ್ತಿಕೊಂಡು ಬರಬೇಕಾಗಿದೆ. ಇದರಿಂದ ಸಮಯ ವ್ಯರ್ಥವಾಗುಗುತ್ತಿದೆ. 25 ಮೀಟರ್ ಅಂತರ ಇರುವ ರಸ್ತೆಯು ಒಂದು ಕಿಲೋ ಮೀಟರ್ ದೂರ ಸುತ್ತಿಕೊಂಡು ಬರುವಂತಹ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ವ್ಯಾಪಾರ ವಹಿವಾಟಿಗೆ ಧಕ್ಕೆಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡು ಸ್ಥಳೀಯ ಪ್ರದೇಶದ ನಿವಾಸಿಗಳು ಕಳೆದ ಎರಡು ವರ್ಷಗಳಿಂದ ವರ್ಷಗಳಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಅಂಗಡಿ- ಮುಂಗಟ್ಟು ಹೊಂದಿರುವ ವ್ಯಾಪಾರಸ್ಥರು, ವರ್ತಕರ ಸ್ಥಿತಿ ಹೇಳತೀರದಾಗಿದೆ. ವ್ಯಾಪಾರ, ವಹಿವಾಟು ನಡೆಯದೇ ಅವರೆಲ್ಲ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಇದು ಮಾಜಿ ಸಂಸದರಾದ ಎಸ್. ಮುನಿಸ್ವಾಮಿ ರವರು ಕನಸಿನ ಯೋಜನೆ. ಬೂದಿಕೋಟೆ ರಸ್ತೆ ಅಗಲೀಕರಣ ಮಾಡಲು ಮತ್ತು ರೈಲ್ವೇ ಕ್ರಾಸಿಂಗ್ ಗೆ ರೈಲ್ವೆ ಮೇಲ್ಸೇತುವೆ ಯನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನು ಹಾಕಿ ರೈಲ್ವೇ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲು ಅಮೃತ ಯೋಜನೆ ಅಡಿಯಲ್ಲಿ 37 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿಸಿದ್ದರು. ಮತ್ತು ಕಾಮಗಾರಿಯನ್ನು ಅವರ ಅವಧಿಯಲ್ಲಿ ಪ್ರಾರಂಭಿಸಿದ್ದರು. ಆದರೆ ಗುತ್ತಿಗೆದಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಕುಂಟುತ್ತಿರುವ ಕಾಮಗಾರಿ
ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಆಂಧ್ರಪ್ರದೇಶದ ಕಡಪ ಸೂರ್ಯ ನಾರಾಯಣರೆಡ್ಡಿ ಪ್ರೈವೇಟ್ ಲಿಮಿಟೆಡ್ ಕಂಪನಿ ನಡೆಸುತ್ತಿದೆ. ಆರಂಭದಲ್ಲಿ ಚುರುಕುಗೊಂಡಿದ್ದ ಕಾಮಗಾರಿ ಈಗ ಮಂದಗತಿಯಲ್ಲಿ ನಡೆಯುತ್ತಿದೆ. ಮಾಜಿ ಸಂಸದ ಎಸ್ ಮುನಿಸ್ವಾಮಿ ಮತ್ತು ಸಂಸದ ಮಲ್ಲೇಶ್ ಬಾಬು ರೈಲ್ವೆ ಇಲಾಖೆ ಎಂಜಿನಿಯರ್, ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಎರಡು- ಮೂರು ಬಾರಿ ಖುದ್ದಾಗಿ ಬಂದು ಈ ಮೇಲ್ಸೇತುವೆಯ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕಾಮಗಾರಿ ಮಾತ್ರ ವೇಗ ಪಡೆಯುತ್ತಿಲ್ಲ.ಸೇತುವೆ ಕಾಮಗಾರಿ ಆರಂಭಗೊಂಡಾಗಿನಿಂದ ರಸ್ತೆಯಲ್ಲಿ ಜನರ ಓಡಾಟವಿಲ್ಲದೇ ವಹಿವಾಟು ಸಂಪೂರ್ಣ ಕುಸಿದಿದೆ. ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಕಾಮಗಾರಿ ಯಾವಾಗ ಮುಗಿಯುವುದೋ ಗೊತ್ತಿಲ್ಲ. ಇಲ್ಲಿ ವ್ಯಾಪಾರ ಆಗದ ಕಾರಣ ಬಾಡಿಗೆಗೆ ಇದ್ದವರು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದಾರೆ. ಪಟ್ಟಣದ ತಲುಪಲು 1 ಕಿ.ಮೀ ಸುತ್ತಿಕೊಂಡು ಹೋಗಬೇಕಾಗಿದೆ. ಕಾಮಗಾರಿ ವಿಳಂಬದ ಬಗ್ಗೆ ಪ್ರಶ್ನಿಸುವವರು ಯಾರು ಇಲ್ಲದಂತಾಗಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
ಕೋಟ್.................ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಲೋಕೋಪಯೋಗಿ ಇಲಾಖೆಯವರು ಒಳಚರಂಡಿ ನಿರ್ಮಾಣ ಮಾಡಬೇಕಾಗಿದೆ. ಈ ಬಗ್ಗೆ ರೈಲ್ವೆ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
- ಮಲ್ಲೇಶ್ ಬಾಬು, ಸಂಸದರು..