ಮೈಸೂರು : ಟಿ. ನರಸೀಪುರ ತಾಲೂಕು ಕುರುಬೂರಿನ ಎಂ. ಪ್ರದೀಪ್ ಕಬ್ಬು ಹಾಗೂ ಭತ್ತ ಮಾತ್ರ ಬೆಳೆಯುತ್ತಿದ್ದು, ವಾರ್ಷಿಕ 2.30 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.ಅವರಿಗೆ ಆರು ಎಕರೆ ಜಮೀನಿದೆ. ನಾಲೆಯಿಂದ ನೀರಾವರಿ ಸೌಲಭ್ಯ.ವಿದೆ. ಜೊತೆಗೆ ಒಂದು ಕೊಳವೆ ಬಾವಿಯೂ ಇದೆ.
ನೀರಾವರಿ ಸೌಲಭ್ಯ ಚೆನ್ನಾಗಿರುವುದರಿಂದ ಅದಕ್ಕೆ ತಕ್ಕಂತೆ ಕಬ್ಬು ಮತ್ತು ಭತ್ತ ಮಾತ್ರ ಬೆಳೆಯುತ್ತಾರೆ. ಕಬ್ಬು 90-110 ಟನ್‌ವರೆಗೆ ಇಳುವರಿ ಬರುತ್ತದೆ. ಕುಂತೂರು ಕಾರ್ಖಾನೆಗೆ ಕಬ್ಬು ಪೂರೈಸುತ್ತಾರೆ. ಕಾರ್ಖಾನೆಯವರು ಸಕಾಲದಲ್ಲಿ ಕಬ್ಬು ಕಟಾವು ಮಾಡಲು ಒಪ್ಪಿಗೆ ಪತ್ರ ನೀಡುವುದಿಲ್ಲ. ಇದರಿಂದ ಕಟಾವಿಗೆ 16 ತಿಂಗಳು ದಾಟುತ್ತದೆ. ಇಳುವರಿ ಕೂಡ ಕಡಿಮೆಯಾಗುತ್ತದೆ.
ವರ್ಷಕ್ಕೆ ಒಂದು ಬೆಳೆ ಬದಲು ಮೂರು ವರ್ಷಕ್ಕೆ ಎರಡು ಬೆಳೆ ಲೆಕ್ಕ ಆಗುತ್ತದೆ. ಕಬ್ಬಿನಿಂದ ನಾಲ್ಕು ಲಕ್ಷ ರು. ಬರುತ್ತದೆ. ಆದರೆ ಬೆಳೆಗೆ ಎರಡು ಲಕ್ಷ ರು. ವೆಚ್ಚ ತಗುಲುವುದರಿಂದ ಎರಡು ಲಕ್ಷ ರು. ಮಾತ್ರ ಉಳಿತಾಯವಾಗುತ್ತದೆ.ಭತ್ತ ಮನೆ ಬಳಕೆಗೆ ಉಳಿಸಿ, ಮಾರಾಟ ಮಾಡುವದಿಂದ 30 ಸಾವಿರ ರು. ಲಾಭ ಸಿಗುತ್ತದೆ. ಭತ್ತ ಇಲ್ಲದ ವೇಳೆಯಲ್ಲಿ ಅಪ್ ಸೆಣಬು,. ಉದ್ದು, ಅಲಸಂದೆ ಬೆಳೆದು ನಂತರ ಅದನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ.
ಜಮೀನಿನಲ್ಲಿ 20-30 ತೆಂಗಿನ ಮರಗಳಿದ್ದು, ತೆಂಗಿನ ಕಾಯಿ ಮನೆ ಬಳಕೆಗೆ ಆಗುತ್ತವೆ.ಕೊಯ್ಲಿನ ಸಂದರ್ಭದಲ್ಲಿ ಹೆಚ್ಚು ಮಳೆಯಾದರೆ ಭತ್ತದ ಫಸಲು ಹಾಳಾಗುತ್ತದೆ. ಅದೇ ರೀತಿ ಕಬ್ಬಿಗೆ ಕಾಡು ಹಂದಿಗಳ ಕಾಟವಿದೆ. ಇದೆಲ್ಲವನ್ನು ಎದುರಿಸಿಕೊಂಡೆ ರೈತರು ವ್ಯವಸಾಯ ಮಾಡಬೇಕಾಗಿದೆ.ನಾಗನಹಳ್ಳಿಯ ಸಾವಯುವ ಕೃಷಿ ಸಂಶೋಧನಾ ಕೇಂದ್ರ, ವಿಸ್ತರಣಾ ಶಿಕ್ಷಣ ಘಟಕ, ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಮೊದಲಾದ ಕಡೆ ತರಬೇತಿ ಮತ್ತಿತರ ಕಾರ್ಯಕ್ರಮಗಳಿಗೆ ಪ್ರದೀಪ್ ಹಾಜರಾಗುತ್ತಾರೆ.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಟಿ. ನರಸೀಪುರ ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಪರ್ಕ ವಿಳಾಸ
ಎಂ. ಪ್ರದೀಪ್‌ಕುರುಬೂರು
ಟಿ, ನರಸೀಪುರ ತಾಲೂಕು
ಮೈಸೂರು ಜಿಲ್ಲೆ
ಮೊ.99007 18385
ಕೃಷಿ ಕಷ್ಟ ಏನಿಲ್ಲ. ಮಾಡಬಹುದು. ಆದರೆ ಖರ್ಚು ಕಡಿಮೆ ಮಾಡಿಕೊಳ್ಳಬೇಕು. ವೈಜ್ಞಾನಿಕ ಬೆಳೆ ಪದ್ಧತಿ ಅನುಸರಿಸಬೇಕು.
- ಎಂ. ಪ್ರದೀಪ್, ಕುರುಬೂರು