ಮಕ್ಕಳ ಕಲಿಕೆಗೆ ಕೃತಜ್ಞತಾ ಟ್ರಸ್ಟ್‌ ಉತ್ತಮ ಕಾರ್ಯ: ಆರ್.ಆರ್.ಮಠ

KannadaprabhaNewsNetwork | Published : Jun 30, 2025 1:47 AM

ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಹಾಗೂ ಉನ್ನತ ವಿದ್ಯಾಭ್ಯಾಸ ಹೊಂದಲು ಶ್ರಮಿಸುತ್ತಿರುವ ಬೆಂಗಳೂರಿನ ಕೃತಜ್ಞತಾ ಟ್ರಸ್ಟ್ ಉತ್ತಮದಲ್ಲಿ ಅತ್ಯುತ್ತಮ ಕಾರ್ಯ ಎಂದು ಬಡ್ತಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಆರ್.ಆರ್.ಮಠ ನುಡಿದರು.

ಕನ್ನಡಪ್ರಭ ವಾರ್ತೆ ಹರಿಹರ

ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಹಾಗೂ ಉನ್ನತ ವಿದ್ಯಾಭ್ಯಾಸ ಹೊಂದಲು ಶ್ರಮಿಸುತ್ತಿರುವ ಬೆಂಗಳೂರಿನ ಕೃತಜ್ಞತಾ ಟ್ರಸ್ಟ್ ಉತ್ತಮದಲ್ಲಿ ಅತ್ಯುತ್ತಮ ಕಾರ್ಯ ಎಂದು ಬಡ್ತಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಆರ್.ಆರ್.ಮಠ ನುಡಿದರು.

ಕೃತಜ್ಞತಾ ಟ್ರಸ್ಟ್ ಅವರು ಶಾಲೆ ಹಾಗೂ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್‌, ಕ್ರೀಡಾ ಸಾಮಗ್ರಿಗಳು ಹಾಗೂ ಇತರೆ ಉಪಕರಣಗಳನ್ನು ನಗರದ ಹರ್ಲಾಪುರ ಬಡಾವಣೆಯ ಸರ್ಕಾರಿ ಉರ್ದು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನೆರವಿಗಾಗಿ ಕೈಚಾಚಿರುವ ಬೆಂಗಳೂರಿನ ಕೃತಜ್ಞತಾ ಟ್ರಸ್ಟ್‍ನವರು ನೀಡಿರುವ ಈ ಸಾಮಾಗ್ರಿಗಳನ್ನು ಅಭ್ಯಾಸದಲ್ಲಿ ನಿರತರಾಗಿ ಬಳಸಿ ನಾಡಿನ ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.

ಈ ವರ್ಷ ಟ್ರಸ್ಟ್‌ನವರು ತಾಲೂಕಿನ ಅನೇಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ 15,000 ನೋಟ್ ಪುಸ್ತಕ, ಲೇಖನ ಸಾಮಗ್ರಿಗಳು, 1,000ಕ್ಕೂ ಹೆಚ್ಚು ಶಾಲಾ ಬ್ಯಾಗ್‍ಗಳು, 10 ಶಾಲೆಗಳಿಗೆ ವಿಜ್ಞಾನ ಉಪಕರಣಗಳು ಮತ್ತು 4 ಶಾಲೆಗಳಿಗೆ ಕಂಪ್ಯೂಟರ್‍ಗಳನ್ನು ವಿತರಣೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ, ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಕಂಪ್ಯೂಟರ್‍ಗಳ ಬಳಕೆ ಕಲಿತಲ್ಲಿ ನಿಮ್ಮ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ದಾನಗಳಲ್ಲಿ ವಿದ್ಯಾದಾನ ಅತ್ಯಂತ ಶ್ರೇಷ್ಠ. ಕೃತಜ್ಞತಾ ಟ್ರಸ್ಟ್ ಕಳೆದ 4-5 ವರ್ಷಗಳಿಂದ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ನೆರವು ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಅಷ್ಪಾಕ್‌ ಅಹಮದ್, ಜಂಟಿ ಕಾರ್ಯದರ್ಶಿಗಳಾದ ಪೀರುನಾಯಕ್, ಆನಂದ್ ಭೂತಾ ರೆಡ್ಡಿ, ಪತ್ತಿನ ಸಹಕಾರ ಸಂಘದ ನಿರ್ದೇಶಕ ರಾಘವೇಂದ್ರ, ಪ್ರವೀಣ್ ಕುಮಾರ್ ಎಂ.ಪಿ., ಅಧ್ಯಕ್ಷ ಪರಶುರಾಮ್ ಗೋಪನಾಳ, ಮಾಧ್ಯಮ ಸಲಹೆಗಾರ ಶಶಿಕುಮಾರ್ ಜಿ, ಮಾಜಿ ಕಾರ್ಯದರ್ಶಿ ಮಂಜಪ್ಪ ಬಿದರಿ, ಬಿ.ಎನ್.ವೀರಪ್ಪ, ಜಿಲ್ಲಾ ಎನ್.ಪಿ.ಎಸ್.ಕಾರ್ಯದರ್ಶಿ ಆರ್.ಬಿ. ಮಲ್ಲಿಕಾರ್ಜುನ್, ಮೌನೇಶ್, ಮುಸ್ತಾಖ್ ಅಹಮದ್, ಶರಣ ಕುಮಾರ್ ಹೆಗಡೆ, ದೈಹಿಕ ಶಿಕ್ಷಕಿ ಪರಿಮಳ ಇತರರು ಭಾಗವಹಿಸಿದ್ದರು.