ಹನುಮಸಾಗರ: ಪಟ್ಟಣದಲ್ಲಿ ಕೃಷ್ಣಾ ಬಿ ಸ್ಕೀಂ ಹಾಗೂ ಕೊಪ್ಪಳ ಏತ ನೀರಾವರಿ ಯೋಜನೆಯಡಿ ಹನುಮಸಾಗರ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆ ನಿರಂತರ ವಿಳಂಬವಾಗುತ್ತಿರುವುದು ವಿಷಾದನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ ಹೇಳಿದರು.
ರೈತ ಮುಖಂಡ ಬಸವರಾಜ ಹಳ್ಳೂರ ಮಾತನಾಡಿ, ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.
ರೈತ ಮುಖಂಡ ಸೂಚಪ್ಪ ಭೋವಿ ಮಾತನಾಡಿ, ನೀರನ್ನು ಕೆಲವರು ಅಕ್ರಮವಾಗಿ ತಮ್ಮ ಹೊಲಗಳಿಗೆ ಹರಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಕೆರೆಗಳಿಗೆ ನೀರು ತಲುಪುವುದಿಲ್ಲ. ಅಕ್ರಮವಾಗಿ ನೀರು ಬಳಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ರೈತ ಮುಖಂಡ ವಿಶ್ವನಾಥ ಕನ್ನೂರು ಮಾತನಾಡಿ, ಜಾನುವಾರುಗಳಿಗೆ ಕೂಡ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಕೂಡಲೇ ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ಮಹಾಂತೇಶ ಅಗಸಿಮುಂದಿನ, ವಕೀಲ ಮಹಾಂತೇಶ ಕುಷ್ಟಗಿ ಮಾತನಾಡಿದರು.
ಪ್ರತಿಭಟನೆಯ ಬಳಿಕ ರೈತ ಮುಖಂಡರು ಹಾಗೂ ಪ್ರಮುಖರು ತಹಸೀಲ್ದಾರ್ ಕಾಂತರಾಜ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿ, ಹನುಮಸಾಗರ ವ್ಯಾಪ್ತಿಯ ಕೆರೆಗಳಿಗೆ ತಕ್ಷಣ ನೀರು ಹರಿಸುವಂತೆ ಹಾಗೂ ಕೆರೆ ಜಾಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ದೇವೇಂದ್ರಪ್ಪ, ಕೆಲವು ಕಡೆ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಈ ವೇಳೆ ಮಾತಿನ ಚಕಮಕಿಯೂ ನಡೆಯಿತು. ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ಹೋಬಳಿ ಅಧ್ಯಕ್ಷ ಯಮನೂರಪ್ಪ ಮಡಿವಾಳರ, ಜಿಲ್ಲಾಧ್ಯಕ್ಷ ಗಣೇಶರೆಡ್ಡಿ, ಕುಷ್ಟಗಿ ತಾಲೂಕಾಧ್ಯಕ್ಷ ಶರಣಪ್ಪ ಕಮತರ, ತಾಲೂಕು ಪ್ರಧಾನ ಕಾರ್ಯದರ್ಶಿ ಶರಣಪ್ಪ ಬಾಚಲಾಪುರ, ಉಮೇಶ ಬಾಚಲಾಪುರ, ಉಪಾಧ್ಯಕ್ಷ ಬಸವರಾಜ ಮೈಟರಿನ, ಇಸ್ಮಾಯಿಲ್‌ಸಾಬ್ ತಹಸೀಲ್ದಾರ್, ರೈತ ಮುಖಂಡರಾದ ದಾಮೋದರ ಹಯಗ್ರೀವ್, ಶಿವಪುತ್ರಪ್ಪ ಕೋಳೂರ, ಹನುಮಂತಪ್ಪ ಹಲಕೂಲಿ, ಚಂದಾಲಿಂಗಪ್ಪ ಕಟಗಿ, ಶರಣಪ್ಪ ಪಲ್ಲೇದ, ಶರಣಪ್ಪ ಹಡಪದ, ರುದ್ರಗೌಡ ಗೌಡಪ್ಪನವರ, ಆರ್.ಕೆ. ದೇಸಾಯಿ, ಅಕ್ಕಮ್ಮ ಮರೇಗೌಡ್ರ, ಸಂಗಮ್ಮ ಕುಳಗೌಡ್ರ, ಶಂಕ್ರಗೌಡ ಪೊಲೀಸ್‌ಪಾಟೀಲ್ ಹಾಗೂ ನೂರಾರು ರೈತರು ಭಾಗವಹಿಸಿದ್ದರು.