ಧಾರವಾಡ: ತಂದೂರಿ ರೊಟ್ಟಿ ತಯಾರಿಸಿ ಕೊಡುವಲ್ಲಿ ವಿಳಂಬವಾದ ವಿಚಾರದಲ್ಲಿ ಸಪ್ಲಾಯರ್ ಮತ್ತು ರೊಟ್ಟಿ ತಯಾರಿಸುವಾತನ ನಡುವೆ ನಡೆದ ಜಗಳ ಕೊಲೆಯಲ್ಲಿ ಪರ್ಯಾವಸಾನವಾದ ಘಟನೆ ಇಲ್ಲಿಯ ಸಂಗಮ ವೃತ್ತದ ಬಳಿಯ ವಿಮಲ್ ಎಗ್‌ರೈಸ್ ಸೆಂಟರ್ ಬಿಲ್ಡಿಂಗ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಳ್ಳಿಯ ಫಕ್ಕಿರೇಶ ಪ್ಯಾಟಿ (40) ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ನತದೃಷ್ಟ.ಹೋಟೆಲ್ ನಲ್ಲಿ ಈತ ತಂದೂರಿ ರೊಟ್ಟಿ ತಯಾರಿಸಿ ಕೊಡುತ್ತಿದ್ದ. ದಾಂಡೇಲಿಯ ಕನ್ನಪ್ಪಯ್ಯ ಎಂಬಾತ ಅದೇ ಹೊಟೆಲ್‌ನಲ್ಲಿ ಸಪ್ಲಾಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಅದೇ ಹೊಟೆಲ್ ಬಿಲ್ಡಿಂಗ್‌ನಲ್ಲೇ ರೂಮೊಂದರಲ್ಲಿ ಇಬ್ಬರೂ ಜೊತೆಯಲ್ಲಿ ಇದ್ದರು.
ಮಂಗಳವಾರ ರಾತ್ರಿ ಹೋಟೆಲ್ ಗೆ ಬಂದ ಗ್ರಾಹಕರಿಗೆ ತಂದೂರಿ ರೋಟಿ ಕೊಡುವಲ್ಲಿ ಫಕ್ಕೀರೇಶ ತಡ ಮಾಡಿದ್ದಕ್ಕೆ ಈ ಗಲಾಟೆ ನಡೆದಿದೆ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಹೋಟೆಲ್ ಗೆ ಬಂದಿದ್ದ ಗ್ರಾಹಕರು ರೊಟ್ಟಿ ತಡವಾಗಿದ್ದಕ್ಕೆ ಸಪ್ಲೈಯರ್ ಕನ್ನಯ್ಯನಿಗೆ ಬೈಯ್ದಿದ್ದಾರೆ. ಗ್ರಾಹಕರು ತನ್ನನ್ನು ಬಯ್ಯಲು ಫಕ್ಕೀರೇಶನೇ ಕಾರಣ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿದೆ.ನಡು ರಾತ್ರಿ ತಮ್ಮ ರೂಮಿಗೆ ಹೋದ ಬಳಿಕವೂ ಇಬ್ಬರ ಮಧ್ಯೆ ಜಗಳ ಮುಂದುವರಿದಿದೆ. ಕೊನೆಗೆ ಕನ್ನಯ್ಯಪ್ಪ ಕಬ್ಬಿಣದ ರಾಡ್‌ನಿಂದ ಫಕ್ಕೀರೇಶನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಆ ಹೊಡೆತಕ್ಕೆ ಫಕ್ಕೀರೇಶ ಕುಸಿದುಬಿದ್ದು ಸ್ಥಳದಲ್ಲೇ ಅಸುನೀಗಿದ್ದಾನೆ. ಆರೋಪಿ ಕನ್ನಯಪ್ಪನನ್ನು ಶಹರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ರಾತ್ರಿ 2ರ ಸುಮಾರಿಗೆ ಫಕ್ಕೀರೇಶನ ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದ್ದು, ಆತನ ಕುಟುಂಬಸ್ಥರು ಜಿಲ್ಲಾಸ್ಪತ್ರೆ ಶವಾಗಾರದ ಮುಂದೆ ಬಂದು ನಿಂತು ಕಣ್ಣೀರು ಹಾಕುತ್ತಿದ್ದ ದೃಶ್ಯ ಮನಕಲಕುತ್ತಿತ್ತು.ಕಳೆದ ನಾಲ್ಕು ದಿನಗಳಿಂದ ಧಾರವಾಡ ನಗರದಲ್ಲಿ ನಾಲ್ಕು ಕೊಲೆಗಳು ನಡೆದಿವೆ. ಮಂಗಳವಾರ ಬೆಳಗ್ಗೆ ನವಲೂರಿನಲ್ಲಿ ಆಸ್ತಿಗಾಗಿ ಮಹಿಳೆಯ ಕೊಲೆಯಾಗಿದ್ದನ್ನು ಹೊರತು ಪಡಿಸಿ ಉಳಿದ ಮೂರು ಪ್ರಕರಣಗಳು ಸಣ್ಣ ಪುಟ್ಟ ಜಗಳ ಹಾಗೂ ಕ್ಷುಲ್ಲಕ ಕಾರಣಕ್ಕೆ ನಡೆದಿವೆ ಎನ್ನುವುದೇ ಬೇಸರದ ಸಂಗತಿ.