ಚಂದ್ರು ಕೊಂಚಿಗೇರಿ
ಹೌದು, ಈ ಬಾರಿ ಮಳೆ ಕೊರತೆಯಿಂದ ತುಂಗಭದ್ರಾ ನದಿ ಸಂಪೂರ್ಣ ಖಾಲಿಯಾಗಿದೆ. ಕೆಲವು ಕಡೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಇತ್ತ ನದಿ ತೀರದ ರೈತರು ಮೈಲಾರ ಜಾತ್ರೆಗೆ ಭದ್ರಾ ಡ್ಯಾಂನಿಂದ ಬಿಡುಗಡೆಯಾಗುವ ನೀರನ್ನು ನಂಬಿಕೊಂಡು ಭತ್ತದ ನಾಟಿ ಮಾಡಿದ್ದಾರೆ.
ಮಳೆ ಇಲ್ಲದೇ ನದಿಯಲ್ಲಿ ನೀರು ಕಡಿಮೆ ಇದೆ. ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಆದ್ದರಿಂದ ರೈತರು 2ನೇ ಬೆಳೆಯನ್ನು ತುಂಗಭದ್ರಾ ನದಿ ನೀರನ್ನು ಬಳಸಿಕೊಂಡು ಬೆಳೆಯಬಾರದೆಂದು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.ಈ ಬಾರಿ ಭತ್ತಕ್ಕೆ ಬಂಪರ್ ಬೆಲೆ ಸಿಕ್ಕಿರುವ ಹಿನ್ನೆಲೆ ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ನದಿ ತೀರದ ಎಲ್ಲ ಗ್ರಾಮಗಳ ರೈತರು ಭತ್ತ ನಾಟಿ ಮಾಡಿದ್ದಾರೆ. ನಾಟಿ ಮಾಡಿ ತಿಂಗಳು ಕಳೆಯುತ್ತಾ ಬಂದಿದೆ. ಆದರೆ ನದಿಯಲ್ಲಿ ನೀರು ದಿನದಿಂದ ದಿನಕ್ಕೆ 5- 6 ಅಡಿಯಷ್ಟು ಖಾಲಿಯಾಗುತ್ತಿದೆ. ಅಲ್ಲದೇ ಪಂಪ್‌ಸೆಟ್ ಮೂಲಕ ಪೈಪ್‌ಲೈನ್ ಹಾಕಿಕೊಂಡು ತಮ್ಮ ಜಮೀನುಗಳಿಗೆ ನೀರನ್ನು ಹಾಯಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ನದಿಯ ನೀರಿನ ತೀವ್ರ ಇಳಿಕೆ ಕಂಡಿದೆ. ಹೀಗಾಗಿ ರೈತರು ಬೆಳೆ ಉಳಿಸಿಕೊಳ್ಳಲು ನಿತ್ಯ ಹರಸಾಹಸ ಪಡುತ್ತಿದ್ದಾರೆ.
ಪ್ರತಿವರ್ಷ ಮೈಲಾರ ಜಾತ್ರೆ ಸಂದರ್ಭದಲ್ಲಿ ಭದ್ರಾ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡುತ್ತಾರೆ. ಫೆ. 26ರಂದು ಮೈಲಾರಲಿಂಗೇಶ್ವರ ಕಾರ್ಣಿಕ ಇರುವ ಹಿನ್ನೆಲೆ ಫೆ. 5ರ ರಾತ್ರಿಯಿಂದ 6 ದಿನಗಳ ಕಾಲ ತುಂಗಭದ್ರಾ ನದಿಗೆ 1 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಈವರೆಗೂ ಭದ್ರಾ ನೀರು ಮೈಲಾರ ತಲುಪಿಲ್ಲ. ಈ ನೀರನ್ನೇ ನೆಚ್ಚಿಕೊಂಡು ರೈತರು ಭತ್ತದ ನಾಟಿ ಮಾಡಿದ್ದಾರೆ. ನಿತ್ಯ ನೀರಿನದ್ದೇ ಚಿಂತೆ ಕಾಡುತ್ತಿದೆ. ಭದ್ರಾ ಜಲಾಶಯದಿಂದ ಬಿಡುಗಡೆಯಾಗುವ ನೀರು ನದಿಗೆ ಯಾವಾಗ ಬರುತ್ತೋ ಎಂದು ಚಾತಕ ಪಕ್ಷಿಯಂತೆ ನದಿ ದಡದಲ್ಲಿ ರೈತರು ಕಾಯುತ್ತಿದ್ದಾರೆ.
ರೈತರಿಗೆ ತೊಂದರೆ: ನದಿಯಲ್ಲಿ ನಿತ್ಯ ನೀರು ಕಡಿಮೆಯಾಗುತ್ತಿದೆ. ಭದ್ರಾ ಜಲಾಶಯದ ನೀರನ್ನು ನಂಬಿಕೊಂಡು ಭತ್ತ ನಾಟಿ ಮಾಡಿದ್ದೇವೆ. ಮಳೆ ಕೊರತೆಯಿಂದ ನೀರು ಕಡಿಮೆಯಾಗಿದೆ. ನೀರು ಹಿಂದಕ್ಕೆ ಹೊಂದಂತೆಲ್ಲ ರೈತರು ಸಾಲ ಮಾಡಿ ನಿತ್ಯ ಪೈಪ್ ಹಾಗೂ ವೈರ್ ಖರೀದಿ ಮಾಡುತ್ತಿದ್ದಾರೆ. ರೈತರು ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ನದಿ ತೀರದ ರೈತರು.