ದೇವರಾಜ ಅರಸು ಪ್ರತಿಮೆ ಅನಾವರಣಕ್ಕೆ ವಿಳಂಬ ನೀತಿ: ಆರೋಪ

KannadaprabhaNewsNetwork |  
Published : Nov 02, 2025, 02:00 AM IST
10 | Kannada Prabha

ಸಾರಾಂಶ

ಡಿ. ದೇವರಾಜ್ ಅರಸು ಅವರು ಉಳುವವರಿಗೆ ಭೂಮಿ ಕೊಟ್ಟ ದೊರೆ. ಹುಣಸೂರನ್ನು ಬಿಟ್ಟರೆ ಮೈಸೂರು ಭಾಗದಲ್ಲಿ ಎಲ್ಲಿಯೂ ಅರಸು ಪ್ರತಿಮೆ ಇಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅರಸು ಪ್ರತಿಮೆ ನಿರ್ಮಾಣಕ್ಕೆ 92 ಲಕ್ಷ ರೂ. ಅನುದಾನ ಕೊಟ್ಟರು. ಪ್ರತಿಮೆಯೂ ನಿರ್ಮಾಣ ಕೂಡಾ ಆಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಪ್ರತಿಮೆ ಲೋಕಾರ್ಪಣೆ ಮಾಡಲು ರಾಜ್ಯ ಸರ್ಕಾರದಿಂದ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.

ಸಿದ್ದಾರ್ಥನಗರದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಕಾರರು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಕೆಲಕಾಲ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಅರಸು ಪ್ರತಿಮೆ ನಿರ್ಮಿಸಿ ತಿಂಗಳು ಕಳೆದರೂ ಲೋಕಾರ್ಪಣೆ ಮಾಡದ ಸರ್ಕಾರವು ವಿಳಂಬ ನೀತಿ ಅನುಸರಿಸುತ್ತಿದೆ. ಹೀಗಾಗಿ, ನಾವೇ ಪ್ರತಿಮೆಯನ್ನು ಅನಾವರಣಗೊಳಿಸುತ್ತವೆ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು.

ಸಿಎಂ ವಿರುದ್ಧ ಕಿಡಿ:

ಈ ವೇಳೆ ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಮಾತನಾಡಿ, ಡಿ. ದೇವರಾಜ್ ಅರಸು ಅವರು ಉಳುವವರಿಗೆ ಭೂಮಿ ಕೊಟ್ಟ ದೊರೆ. ಹುಣಸೂರನ್ನು ಬಿಟ್ಟರೆ ಮೈಸೂರು ಭಾಗದಲ್ಲಿ ಎಲ್ಲಿಯೂ ಅರಸು ಪ್ರತಿಮೆ ಇಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅರಸು ಪ್ರತಿಮೆ ನಿರ್ಮಾಣಕ್ಕೆ 92 ಲಕ್ಷ ರೂ. ಅನುದಾನ ಕೊಟ್ಟರು. ಪ್ರತಿಮೆಯೂ ನಿರ್ಮಾಣ ಕೂಡಾ ಆಗಿದೆ. ಆದರೆ, ಪ್ರತಿಮೆ ಉದ್ಘಾಟನೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಕಲಿ ಹಿಂದುಳಿದ ವರ್ಗದ ನಾಯಕರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಸಂವಿಧಾನ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ, ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಮಾಡಿದ್ದು ದೇವರಾಜ ಅರಸು ಮಾತ್ರ. ಮದುವೆ, ಬೀಗರ ಔತಣಕ್ಕೆ ಮೈಸೂರಿಗೆ ಬರುವ ಸಿದ್ದರಾಮಯ್ಯ ಅವರು ಪ್ರತಿಮೆ ಅನಾವರಣಕ್ಕೆ ಯಾಕೆ ಬರುವುದಿಲ್ಲ? ಈ ವಿಚಾರದಲ್ಲಿ ತಾತ್ಸಾರ ಇರಬಾರದು. ಕೂಡಲೇ ಅನಾವರಣ ಮಾಡಿದರೆ ಸರ್ಕಾರಕ್ಕೆ ಗೌರವ ಸಿಗುತ್ತದೆ. ಇಲ್ಲದಿದ್ದರೆ ಅಭಿಮಾನಿಗಳೇ ಅನಾವರಣ ಮಾಡುತ್ತೇವೆ ಎಂದು ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯಾಧ್ಯಕ್ಷ ಆರ್‌. ರಘು, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ತೇಜಸ್ ಲೋಕೇಶ್ ಗೌಡ, ರೇಣುಕಾ, ಪ್ರೇಮ್ ಕುಮಾರ್, ಹೇಮಂತ್ ಕುಮಾರ್, ಪ್ರಶಾಂತ್ ಗೌಡ, ರಾಕೇಶ್, ಡಾ. ಸುಶ್ರೂತ್‌ ಗೌಡ, ರಘು, ಹೇಮಾ ನಂದೀಶ್, ಮಹೇಶ್ ರಾಜೇ ಅರಸ್, ಗಿರಿಧರ್ ಮೊದಲಾದವರು ಇದ್ದರು.ನಾಳೆ ಉದ್ಘಾಟನೆ

ನ.3 ರಂದು ನೂತನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದೇವರಾಜು ಅರಸು ಪ್ರತಿಮೆ ಅನಾವರಣ ಮಾಡುತ್ತೇವೆ‌. ಸಿಎಂ ಕೈಯಲ್ಲೇ ಪ್ರತಿಮೆ ಅನಾವರಣ ಮಾಡಿಸುವ ಸಲುವಾಗಿ ವಿಳಂಬವಾಗಿತ್ತು‌. ನಾವೇ ಮಾಡಿದರೆ ಅಷ್ಟೊಂದು ಮಹತ್ವ ಬರುವುದಿಲ್ಲ. ಸಿಎಂ ಪ್ರತಿಮೆ ಅನಾವರಣ ಮಾಡಲಿ ಎಂಬುದು ನಮ್ಮ ಉದ್ದೇಶವಾಗಿತ್ತು.

- ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ