ಅಮೆರಿಕದ ಬೋಸ್ಟನ್‌ ಶೃಂಗಸಭೆಗೆ ಹೊರಟ್ಟಿ ನಿಯೋಗ

KannadaprabhaNewsNetwork |  
Published : Aug 08, 2025, 01:01 AM ISTUpdated : Aug 08, 2025, 07:10 AM IST
U S MEET 1 | Kannada Prabha

ಸಾರಾಂಶ

ಅಮೆರಿಕದಲ್ಲಿರುವ ಉತ್ತಮ ಶಿಕ್ಷಣ, ವೈದ್ಯಕೀಯ ಮತ್ತು ಆರೋಗ್ಯ ಸೇವಾ ವ್ಯವಸ್ಥೆಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಕರ್ನಾಟಕದಲ್ಲೂ ಅಗತ್ಯಾನುಸಾರ ಮಾರ್ಪಾಡುಗಳೊಂದಿಗೆ ಸಂಯೋಜಿಸುವುದರಿಂದ ಎರಡೂ ಕ್ಷೇತ್ರದಲ್ಲಿ ನಮ್ಮ ರಾಜ್ಯ ಮತ್ತಷ್ಟು ಸುಧಾರಣೆ ತರಲು ಸಾಧ್ಯವಾಗಲಿದೆ -  ಬಸವರಾಜ ಹೊರಟ್ಟಿ ಪ್ರತಿಪಾದಿಸಿದರು.

  ಬೆಂಗಳೂರು :  ಅಮೆರಿಕದಲ್ಲಿರುವ ಉತ್ತಮ ಶಿಕ್ಷಣ, ವೈದ್ಯಕೀಯ ಮತ್ತು ಆರೋಗ್ಯ ಸೇವಾ ವ್ಯವಸ್ಥೆಯನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಕರ್ನಾಟಕದಲ್ಲೂ ಅಗತ್ಯಾನುಸಾರ ಮಾರ್ಪಾಡುಗಳೊಂದಿಗೆ ಸಂಯೋಜಿಸುವುದರಿಂದ ಎರಡೂ ಕ್ಷೇತ್ರದಲ್ಲಿ ನಮ್ಮ ರಾಜ್ಯ ಮತ್ತಷ್ಟು ಸುಧಾರಣೆ ತರಲು ಸಾಧ್ಯವಾಗಲಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಾದಿಸಿದರು. ಅಮೆರಿಕದ ಬೋಸ್ಟನ್‌ ನಗರದಲ್ಲಿ ನಡೆಯುತ್ತಿರುವ ‘ಶಾಸಕಾಂಗ ಶೃಂಗಸಭೆ-2025’ರಲ್ಲಿ ಗುರುವಾರ ಎರಡನೇ ದಿನ ನಡೆದ ‘ಅಮೆರಿಕ ಮತ್ತು ಭಾರತದಲ್ಲಿನ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ’ ಕುರಿತ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಅನೇಕ ರಾಷ್ಟ್ರಗಳಿವೆ. ಒಂದೊಂದು ಕ್ಷೇತ್ರದಲ್ಲಿ ಒಂದೊಂದು ದೇಶ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಮುಂಚೂಣಿಯಲ್ಲಿರುತ್ತದೆ. ಅಂತಹ ಅಂಶಗಳನ್ನು ಇತರೆ ದೇಶಗಳು ಅಧ್ಯಯನ ನಡೆಸಿ ತಮಗೂ ಸರಿ ಎನಿಸುವುದಾದರೆ ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಈ ನಿಟ್ಟಿನಲ್ಲಿ ಅಮೆರಿಕದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಬಹಳ ಉತ್ತಮವಾಗಿದೆ. ಇಲ್ಲಿನ ಕೆಲವು ಅಂಶಗಳನ್ನು ಕರ್ನಾಟಕದ ಶಿಕ್ಷಣ, ಆರೋಗ್ಯ, ವೈದ್ಯಕೀಯ ಸೇವಾ ವ್ಯವಸ್ಥೆಯಲ್ಲಿ ಸಂಯೋಜಿಸಲು ಸಾಧ್ಯವಾಗುವುದಾದರೆ ಸರ್ಕಾರ ಪರಿಶೀಲಿಸಲಿ. ಇದರಿಂದ ಈ ಕ್ಷೇತ್ರಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು, ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡಲು ಸಾಧ್ಯವಾಗಲಿದೆ ಎಂದರು.

ಈ ಎರಡೂ ವಿಚಾರಗಳು ತಮಗೆ ಹೆಚ್ಚಿನ ಗಮನ ಸೆಳೆದಿದ್ದು, ಘಾನಾ ಮತ್ತು ಅಮೆರಿಕದ ಸೆನೆಟರ್‌ಗಳೊಂದಿಗೆ (ಪ್ರತಿನಿಧಿಗಳು) ಈ ವಿಚಾರದ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಅಲ್ಲಿನ ಮೂಲಭೂತ ಸೇವೆಗಳ ಬಗ್ಗೆ ನಮ್ಮ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ರಾಜ್ಯದ ಜನರಿಗೆ ಮೂಲಸೌಕರ್ಯಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಬಗ್ಗೆ ಬೆಳಕು ಚೆಲ್ಲಲು ವಿಶೇಷವಾಗಿ ಬರುವ ಮಳೆಗಾಲದ ಅಧಿವೇಶನದ ಸಂದರ್ಭದಲ್ಲೂ ಈ ಬಗ್ಗೆ ಚರ್ಚಿಸಿ ಸದನದ ಗಮನ ಸೆಳೆಯುವುದಾಗಿ ಹೇಳಿದರು.

ಯುಎಸ್‌ನಲ್ಲಿರುವ ವಿಶ್ವದ ಶ್ರೇಷ್ಠ ಶಿಕ್ಷಣ ಸಂಸ್ಥೆಗಳಾದ ಮೆಸಾಚುಸೆಟ್ಸ್‌ ಆಫ್ ಟೆಕ್ನಾಲಜಿ (ಎಂಐಟಿ), ಹಾರ್ವರ್ಡ್ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ಅಲ್ಲಿರುವ ಸೌಲಭ್ಯಗಳನ್ನು ರಾಜ್ಯದಲ್ಲಿ ಹಂತಹಂತವಾಗಿ ಅಳವಡಿಸಲು ಸರ್ಕಾರದ ಗಮನ ಸೆಳೆಯಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಪ್ರಜಾಪ್ರಭುತ್ವ ರಾಷ್ಟ್ರಗಳ ಸರ್ವಾಂಗೀಣ ಅಭ್ಯುದಯದಲ್ಲಿ ಅಲ್ಲಿನ ಶಾಸನ ಸಭೆಗಳು ಹಾಗೂ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ತರವಾದುದು. ಶಾಸನಸಭೆಗಳಲ್ಲಿ ಕ್ರಿಯಾಶೀಲತೆ ಹಾಗೂ ಪಕ್ಷಭೇದವಿಲ್ಲದ ಅಭಿವೃದ್ಧಿಪರ ಚಿಂತನೆಯಿಂದ ಮಾತ್ರ ರಾಷ್ಟ್ರದ ಭವಿಷ್ಯ ಉಜ್ವಲವಾಗಬಲ್ಲದು ಎಂದರು.

ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಶಾಸಕರಾದ ಅರವಿಂದ್‌ ಬೆಲ್ಲದ್‌, ಬಿ.ಆರ್‌.ಪಾಟೀಲ್‌, ಭೀಮಣ್ಣ ನಾಯಕ್‌, ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್‌, ಸದಸ್ಯರಾದ ದಿನೇಶ್‌ ಗೂಳಿಗೌಡ, ಎನ್‌.ರವಿಕುಮಾರ್‌, ಭಾರತಿ ಶೆಟ್ಟಿ, ಟಿ.ಎ.ಶರವಣ, ಅಶೋಕ್‌ ಪಟ್ಟಣ್‌, ಹೇಮಲತಾ ನಾಯಕ್‌ ಸೇರಿದಂತೆ ಹಲವು ಜನಪ್ರತಿನಿಧಿಗಳ ನಿಯೋಗ ಭಾಗವಹಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ