ಎಸ್ಸಿ ಪಟ್ಟಿಯಿಂದ ಬೇಡ ಜಂಗಮ ಪದ ತೆಗೆಯುವಂತೆ ಸಿಎಂ ಬಳಿ ನಿಯೋಗ: ಎಚ್‌. ಆಂಜನೇಯ

KannadaprabhaNewsNetwork |  
Published : Jun 08, 2025, 01:58 AM IST
7ಎಚ್‌ಪಿಟಿ1- ಹೊಸಪೇಟೆಯ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಚ್‌. ಆಂಜನೇಯ ಮಾತನಾಡಿದರು. | Kannada Prabha

ಸಾರಾಂಶ

ವೀರಶೈವ ಲಿಂಗಾಯತ ಸಮಾಜದ ಬೇಡ ಜಂಗಮ ಸಮಾಜದವರು ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮಾಹಿತಿ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವೀರಶೈವ ಲಿಂಗಾಯತ ಸಮಾಜದ ಬೇಡ ಜಂಗಮ ಸಮಾಜದವರು ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಮಾಹಿತಿ ನೀಡುತ್ತಿದ್ದಾರೆ. ಶಾಲೆಗಳಲ್ಲೂ ಬೇಡ ಜಂಗಮ ಎಂದು ಬರೆಸುತ್ತಿದ್ದಾರೆ. ಆದರೆ, ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ಪದವನ್ನೇ ತೆಗೆದು ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಲಾಗುವುದು ಎಂದು ಮಾಜಿ ಸಚಿವ ಎಚ್‌. ಆಂಜನೇಯ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಡ್ಗ ಜಂಗಮ ಸಮಾಜದವರು ಆಂಧ್ರಪ್ರದೇಶದಿಂದ ಬಂದವರು. ಇವರು ಮಾಂಸ ತಿನ್ನುತ್ತಾರೆ. ಮಾದಿಗರ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಇವರು ಪರಿಶಿಷ್ಟ ಜಾತಿಯಲ್ಲಿ ಇರುವುದರಲ್ಲಿ ಯಾವ ತಪ್ಪೂ ಇಲ್ಲ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬರುವ 101 ಜಾತಿಗಳು ಕೂಡ ಮಾಂಸಹಾರಿಗಳೇ ಆಗಿದ್ದಾರೆ ಎಂದರು.

ಆದರೆ, ವೀರಶೈವ ಜಂಗಮರು ಗುರು ಸ್ಥಾನದಲ್ಲಿ ಇದ್ದವರು. ಮೇಲಾಗಿ ಸಸ್ಯಾಹಾರಿಗಳು. ಅದು ಹೇಗೆ ಪರಿಶಿಷ್ಟ ಜಾತಿಯಲ್ಲಿ ಬರುತ್ತಾರೆ? ಜಂಗಮರು ಪರಿಶಿಷ್ಟ ಜಾತಿಯ ನಮ್ಮನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಈಗ ಅದ್ಹೇಗೆ ಮೀಸಲಾತಿ ಸೌಲಭ್ಯ ಪಡೆಯುತ್ತಾರೆ? ಈಗಾಗಲೇ ಬೇಡ ಜಂಗಮ ಪ್ರಮಾಣಪತ್ರ ಪಡೆದವರ ಬಗ್ಗೆಯೂ ಮಾಹಿತಿ ಪಡೆಯುತ್ತೇವೆ. ಅಲ್ಲದೇ ಪರಿಶಿಷ್ಟ ಜಾತಿಯಲ್ಲಿ ಬೇಡ ಜಂಗಮ ಪ್ರಮಾಣಪತ್ರದ ಅಡಿಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಉದ್ಯೋಗ ಪಡೆದವರ ಮಾಹಿತಿಯೂ ಪಡೆಯುತ್ತೇವೆ. ಈ ನಕಲಿ ಪ್ರಮಾಣಪತ್ರ ನೀಡಿದ ತಹಸೀಲ್ದಾರ್‌ಗಳು ಜೈಲಿಗೆ ಹೋಗಬೇಕು. ಆ ರೀತಿ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.

ಅರ್ಹರ ಸೌಲಭ್ಯ ಇನ್ನೊಬ್ಬರಿಗೆ ಹೋಗಬಾರದು. ಈ ಕುರಿತು ಪರಿಶಿಷ್ಟ ಜಾತಿಯ ಎಲ್ಲಾ ಸಮಾಜದ ಮುಖಂಡರು ನಿಯೋಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತೇವೆ. ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ಪದವನ್ನೇ ತೆಗೆಸಲಾಗುವುದು ಎಂದರು.

ಮಾದಿಗ ಸಮಾಜ ಒಳ ಮೀಸಲಾತಿ ಹೋರಾಟವನ್ನು ದಶಕಗಳಿಂದ ನಡೆಸುತ್ತಾ ಬಂದಿದೆ. ಆಂಧ್ರಪ್ರದೇಶದ ಮಂದಕೃಷ್ಣ ಅವರ ಹೋರಾಟ ನಾವು ಮರೆಯುವಂತಿಲ್ಲ. ಸುಪ್ರೀಂ ಕೋರ್ಟ್‌ ಒಳ ಮೀಸಲಾತಿ ಜಾರಿಗೊಳಿಸಲು ಆದೇಶ ನೀಡಿದ ಬಳಿಕ ರಾಜ್ಯದಲ್ಲಿ ನ್ಯಾ. ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗ ಸಮೀಕ್ಷೆ ನಡೆಸುತ್ತಿದೆ. ಈಗಾಗಲೇ 1 ಕೋಟಿ 5 ಲಕ್ಷ ಜನರನ್ನು ಗುರುತಿಸಲಾಗಿದೆ. ಬೆಂಗಳೂರು ಭಾಗದಲ್ಲಿ ಸರ್ಕಾರಿ ಶಾಲೆಗಳು ಕಡಿಮೆ ಇರುವ ಹಿನ್ನೆಲೆ ಸಮೀಕ್ಷೆಗೆ ಹಿನ್ನಡೆ ಆಗಿದೆ. ಅಲ್ಲೂ ಸಮೀಕ್ಷೆ ಪೂರ್ಣಗೊಳಿಸಲು ಸರ್ಕಾರ ಕ್ರಮ ವಹಿಸಿದೆ ಎಂದರು.

ಸಿದ್ದು ನಮ್ಮ ಪಾಲಿನ ಅಂಬೇಡ್ಕರ್‌:

ಭಾರತ ದೇಶಕ್ಕೆ ಅಂಬೇಡ್ಕರ್‌ ಸಂವಿಧಾನ ಕೊಟ್ಟಿದ್ದಾರೆ. ಅಲ್ಲದೇ, ಮೀಸಲಾತಿ ಸೌಲಭ್ಯ ಒದಗಿಸಿದ್ದಾರೆ. ಅಂಬೇಡ್ಕರ್‌ ನಮಗೆ ಮೀಸಲಾತಿ ನೀಡಿದರೆ, ಈಗ ಸಿದ್ದರಾಮಯ್ಯನವರು ಒಳಮೀಸಲಾತಿ ನೀಡುವ ಮೂಲಕ ನಮ್ಮ ಪಾಲಿನ ಅಂಬೇಡ್ಕರ್‌ ಆಗಿದ್ದಾರೆ. ಹಾಗಾಗಿ ಒಳಮೀಸಲಾತಿ ಜಾರಿ ಆದ ಬಳಿಕ ರಾಯಚೂರಿನಲ್ಲಿ ‌ವಿಜಯೋತ್ಸವ ಸಮಾರಂಭ ಆಯೋಜನೆ ಮಾಡಲಾಗುವುದು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ಸಮರ್ಪಣೆ ನೆರವೇರಿಸಲಾಗುವುದು ಎಂದರು.

ಮುಖಂಡರಾದ ವೀರಸ್ವಾಮಿ, ಕೊಗಿನಹಾಳು ಮಲ್ಲಿಕಾರ್ಜುನ, ಲಕ್ಷ್ಮಣ, ನಿಂಬಗಲ್‌ ರಾಮಕೃಷ್ಣ, ಮಾರೆಣ್ಣ, ಸಣ್ಣಮಾರೆಪ್ಪ, ಸೋಮಶೇಖರ, ಎಚ್‌. ಶೇಷು, ಎ. ಬಸವರಾಜ ಮತ್ತಿತರರಿದ್ದರು.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ