ಜಗಳೂರು ತಾಲೂಕಿನಲ್ಲಿ ತೀವ್ರ ಬರಗಾಲವಿದ್ದು, ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಭದ್ರಾ ಮೇಲ್ದಂಡೆ ಮತ್ತು ೫೭ ಕೆರೆ ತುಂಬಿಸುವ ಯೋಜನೆಯಲ್ಲಿ ಹಾಲಿ ಶಾಸಕರ ಪಾತ್ರವೇನು? ಜಗಳೂರು ಅಭಿವೃದ್ಧಿಗೆ ಶಾಸಕರ ಕೊಡುಗೆ ಶೂನ್ಯವಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ವಿರುದ್ಧ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ವಾಗ್ದಾಳಿ ಮಾಡಿದರು.
- ನಿಯೋಗದ ಜೊತೆ ಜಗಳೂರು ಶಾಸಕ ದೇವೇಂದ್ರಪ್ಪ ಕೂಡ ಬರಲಿ: ಶಾಸಕ ಎಸ್.ವಿ.ರಾಮಚಂದ್ರ ಆಹ್ವಾನ
- - -
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನಲ್ಲಿ ತೀವ್ರ ಬರಗಾಲವಿದ್ದು, ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದೆ. ಭದ್ರಾ ಮೇಲ್ದಂಡೆ ಮತ್ತು ೫೭ ಕೆರೆ ತುಂಬಿಸುವ ಯೋಜನೆಯಲ್ಲಿ ಹಾಲಿ ಶಾಸಕರ ಪಾತ್ರವೇನು? ಜಗಳೂರು ಅಭಿವೃದ್ಧಿಗೆ ಶಾಸಕರ ಕೊಡುಗೆ ಶೂನ್ಯವಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ವಿರುದ್ಧ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ವಾಗ್ದಾಳಿ ಮಾಡಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕರ ವಿರುದ್ಧ ಹರಿಹಾಯ್ದ ಅವರು, ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹೫,೩೦೦ ಕೋಟಿ ಅನುದಾನ ಪಡೆದುಕೊಳ್ಳಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲು ದೆಹಲಿಗೆ ನಿಯೋಗ ತೆರಳಲಾಗುತ್ತಿದೆ. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ಜಗಳೂರಿನ ಬಿಜೆಪಿ ನಾಯಕರ ನಿಯೋಗ ತೆರಳುತ್ತಿದ್ದು, ಶಾಸಕ ಬಿ.ದೇವೇಂದ್ರಪ್ಪ ಕೂಡ ಈ ನಿಯೋಗದ ಜೊತೆ ಬರಲಿ ಎಂದು ಆಹ್ವಾನ ನೀಡಿದರು. ಜಗಳೂರು ತಾಲೂಕಿಗೆ ಭದ್ರಾ ನೀರು ಹರಿಸುವುದು ನನ್ನ ಕನಸು, ಅದನ್ನು ಈಡೇರಿಸುವುದು ಶತಸಿದ್ಧ, ಎಂದು ಆಶ್ವಾಸನೆ ನೀಡಿದರು.
ಜಗಳೂರು ತಾಲೂಕಿನ ಪ್ರಚಲಿತ ಸಮಸ್ಯೆಗಳನ್ನು ಸುದ್ದಿಗೋಷ್ಠಿಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟ ಎಸ್‌ವಿಆರ್ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯ ರೂಪಿಸಲು ಮತ್ತು ಬರ ಪರಿಹಾರಕ್ಕಾಗಿ ಪ್ರತಿಭಟಿಸುವುದು ಪಕ್ಷದ ಹಕ್ಕು. ತಾಲೂಕನ್ನು ಬರದ ಪಟ್ಟಿಗೆ ಸೇರಿಸದಿದ್ದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರೆ, ಹಾಲಿ ಶಾಸಕ ಬಿ.ದೇವೇಂದ್ರಪ್ಪ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ನಿಮ್ಮ ಮೂರೂವರೆ ವರ್ಷಗಳ ಆಡಳಿತಾವಧಿಯಲ್ಲಿ ಜಗಳೂರಿಗೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಬಡವರಿಗೆ ಮನೆಯಿಲ್ಲ, ನೀರಿಗೆ ಹಾಹಾಕಾರ:
ನನ್ನ ಆಡಳಿತ ಅವಧಿಯಲ್ಲಿ ತಾಲೂಕಿಗೆ ೧೨,೦೦೦ ಮನೆಗಳನ್ನು ಮಂಜೂರು ಮಾಡಿಸಲಾಗಿತ್ತು. ಆದರೆ, ಹಾಲಿ ಶಾಸಕರು ಎಷ್ಟು ಮನೆ ತಂದಿದ್ದಾರೆ? ರಸ್ತೆ ಅಗಲೀಕರಣ, ''''ವಿಬಿ ಜಿ ರಾಮ್ ಜಿ ಯೋಜನೆ ಹಣ ಬಾಕಿ ಬಿಡುಗಡೆಯಾಗಿಲ್ಲ. ಭ್ರಷ್ಟಾಚಾರದಿಂದಾಗಿ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ನಡೆಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ವಸತಿ ನಿಲಯಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ:
ತಾಲೂಕಿನ ಬಿದರಕೆರೆ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಜಗಳೂರು ಪಟ್ಟಣದ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಹೊಸಹಟ್ಟಿ ಅಂಬೇಡ್ಕರ್ ವಸತಿ ಶಾಲೆ, ಮೆದಗಿನಕೆರೆ ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಅನೇಕ ವಸತಿ ಶಾಲೆಗಳಲ್ಲಿ ಉಪಕರಣ ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದ ಅವರು, ಶಾಸಕ ದೇವೇಂದ್ರಪ್ಪ ಅವರು ಈ ಬಗ್ಗೆ ತಕ್ಷಣ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ. ಮರುಳಾರಾಧ್ಯ, ಗಡಿಮಾಕುಂಟೆ ಸಿದ್ದೇಶ್, ಉಪಾಧ್ಯಕ್ಷ ರಘು ಜಾಗ್ವಾರ್, ಕಾರ್ಯದರ್ಶಿ ಧರ್ಮಾನಾಯ್ಕ್, ಶಿವಕುಮಾರ ಸ್ವಾಮಿ, ಬಿಸ್ತುವಳ್ಳಿ ಬಾಬು, ಸಾಗರ ಅಂಜಿನಪ್ಪ, ಕಟ್ಟಿಗೆಹಳ್ಳಿ ಮಂಜುನಾಥ್ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ರೂಪವತಿ ಉಪಸ್ಥಿತರಿದ್ದರು.
- - -
-03ಜೆ.ಜಿ.ಎಲ್.1:
ಜಗಳೂರು ಪಟ್ಟಣದ ತಮ್ಮ ನಿವಾಸದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.