ನೀರಿನ ಕರ ಮನ್ನಾ ಮಾಡಿಸಲು ನಿಯೋಗ ಕರೆದೊಯ್ಯುವೆ: ಇಕ್ಬಾಲ್ ಹುಸೇನ್

KannadaprabhaNewsNetwork |  
Published : Feb 11, 2025, 12:47 AM IST
10ಕೆಆರ್ ಎಂಎನ್ 6.ಜೆಪಿಜಿಕೊಳ್ಳಿಗನಹಳ್ಳಿ ರೈತ ಸೇವಾ ಸಹಕಾರ ಸಂಘದ ನೂತನ ನಿರ್ದೇಶಕರು ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಅಭಿನಂದಿಸಿದರು. | Kannada Prabha

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ, ಉದ್ಯಮಿಗಳ ಸಾವಿರಾರು ಕೋಟಿ ರುಪಾಯಿ ಸಾಲ ಮನ್ನಾ ಮಾಡಿರುವಾಗ ಬಡವರ ನೀರಿನ ಶುಲ್ಕ ಮನ್ನಾ ಮಾಡುವುದು ದೊಡ್ಡ ವಿಷಯವೇನೂ ಅಲ್ಲ. ನಗರಸಭೆ ಸದಸ್ಯರು, ಅಧಿಕಾರಿಗಳು ಒಟ್ಟಾಗಿ ಸೇರಿ ನಿರ್ಣಯ ಕೈಗೊಂಡು ಪ್ರಸ್ತಾವನೆ ಸಲ್ಲಿಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕು

ಕನ್ನಡಪ್ರಭ ವಾರ್ತೆ ರಾಮನಗರ

ಜಲ ಮಂಡಳಿಗೆ ಪಾವತಿಸಬೇಕಿರುವ 16 ಕೋಟಿ ರು. ನೀರಿನ ಶುಲ್ಕವನ್ನು ಮನ್ನಾ ಮಾಡುವಂತೆ ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳನ್ನು ಒಳಗೊಂಡ ನಿಯೋಗವನ್ನು ಕರೆದೊಯ್ದು ಸಚಿವರ ಮೇಲೆ ಒತ್ತಡ ಹೇರುವುದಾಗಿ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ತಾಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಿನ ಕರ ಮನ್ನಾ ಮಾಡುವಂತೆ ನಗರಸಭೆಯಲ್ಲಿ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗೆ ತಲುಪಿಸಬೇಕು. ಆನಂತರ ಸದಸ್ಯರು ನಿಯೋಗದಲ್ಲಿ ನನ್ನೊಂದಿಗೆ ಬಂದರೆ ಸಚಿವರೊಂದಿಗೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ನೀರಿನ ಕರ ಮನ್ನಾ ಮಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ, ಉದ್ಯಮಿಗಳ ಸಾವಿರಾರು ಕೋಟಿ ರುಪಾಯಿ ಸಾಲ ಮನ್ನಾ ಮಾಡಿರುವಾಗ ಬಡವರ ನೀರಿನ ಶುಲ್ಕ ಮನ್ನಾ ಮಾಡುವುದು ದೊಡ್ಡ ವಿಷಯವೇನೂ ಅಲ್ಲ. ನಗರಸಭೆ ಸದಸ್ಯರು, ಅಧಿಕಾರಿಗಳು ಒಟ್ಟಾಗಿ ಸೇರಿ ನಿರ್ಣಯ ಕೈಗೊಂಡು ಪ್ರಸ್ತಾವನೆ ಸಲ್ಲಿಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಗರಸಭೆಯಲ್ಲಿ ಮತ್ತೆ ಅಧಿಕಾರ ಹಿಡಿಯಬೇಕೆಂದರೆ ಈ ಕೆಲಸವನ್ನು ನಾವು ಮಾಡಬೇಕು. ಇಷ್ಟು ಚಿಕ್ಕ ವಿಷಯವನ್ನೂ ನಾನು ಹೇಳಿಕೊಡಬೇಕೇ ಎಂದು ಇಕ್ಬಾಲ್ ಹುಸೇನ್ ಪ್ರಶ್ನಿಸಿದರು.

ಈ ಹಿಂದೆ ತಿಂಗಳಿಗೆ ಮೂರು ನಾಲ್ಕು ಬಾರಿಯಷ್ಟೇ ನೀರು ಪೂರೈಕೆ ಆಗುತ್ತಿತ್ತು. ಕಳೆದ ಬೇಸಿಗೆಯಲ್ಲಿ ತಿಂಗಳಿಗೊಮ್ಮೆ ಮಾತ್ರವೇ ನೀರು ಪೂರೈಕೆ ಮಾಡಲಾಗಿದೆ. ಆದರೆ, ನೀರು ಪೂರೈಕೆ ಆಗದಿದ್ದರೂ ಜಲಮಂಡಳಿ ಅಧಿಕಾರಿಗಳು ಬಿಲ್ ಕಟ್ಟುವಂತೆ ಸಾರ್ವಜನಿಕರ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ನೀರು ಪೂರೈಸದೆ ಹಣ ಕೇಳುವುದು ಸರಿಯಲ್ಲ ಎಂದರು.

ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಯ ಪ್ರತಿ ಮನೆಗೆ ಕಾವೇರಿ ನೀರು ಪೂರೈಸಲು 300 ಕೋಟಿ ಯೋಜನೆ ರೂಪಿಸಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ರವರು ರಾಜ್ಯ ಸರ್ಕಾರದಿಂದ ಅನುದಾನ ತಂದಿದ್ದು, ಆ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಕೈಲಾಂಚ ಹೋಬಳಿಯಲ್ಲಿ ಹಲವಾರು ಏತ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ತೆಂಗಿನಕಲ್ಲು ಕೆರೆಗೆ ಈಗಾಗಲೇ ಕಾವೇರಿ ನೀರು ಹರಿದಿದ್ದು, ಅಲ್ಲಿಂದ ಅವ್ವೇರಹಳ್ಳಿ ಕೆರೆಗೆ ನೀರು ತರಲು ಕಾಮಗಾರಿ ನಡೆಯುತ್ತಿದೆ. ಜತೆಗೆ ಸುತ್ತಮುತ್ತಲಿನ 10- 20 ಕೆರೆ ತುಂಬಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ವಿವರಿಸಿದರು.

ಸುಮಾರು 20-25 ವರ್ಷಗಳಿಂದ ಇಲ್ಲಿ ಅಧಿಕಾರದಲ್ಲಿದ್ದವರ ನಿರ್ಲಕ್ಷ್ಯದಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ನಾನು ಶಾಸಕನಾದ ನಂತರ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ, ಜನರ ಕಷ್ಟ- ಸುಖ ವಿಚಾರಿಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಂಡಿದ್ದೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ತಾಲೂಕು ಅಧ್ಯಕ್ಷ ವಿ.ಎಚ್.ರಾಜು, ಕೈಲಾಂಚ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಮುಖಂಡರಾದ ದಿನೇಶ್ , ಸುಶೀಲ್ ಕುಮಾರ್ , ಬಸವರಾಜು, ರವಿ, ಕೆ.ಪಿ.ನಾಗರಾಜು, ಕೆ.ಪಿ.ಈರೇಗೌಡ, ವಿಜಯ್ ಕುಮಾರ್ , ಜಗದೀಶ್ , ದೇವರಾಜು, ಪುಟ್ಟಸ್ವಾಮಯ್ಯ, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

------------------------------

ಕೊಳ್ಳಿಗನಹಳ್ಳಿ ಕೃಷಿ ಸಂಘ ಕಾಂಗ್ರೆಸ್ ತೆಕ್ಕೆಗೆ

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಳ್ಳಿಗನಹಳ್ಳಿ ರೈತ ಸೇವಾ ಸಹಕಾರ ಸಂಘವನ್ನು 25 ವರ್ಷಗಳ ನಂತರ ಕಾಂಗ್ರೆಸ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸಂತಸ ವ್ಯಕ್ತಪಡಿಸಿದರು.

ರೈತರಿಗೆ ಪ್ರಾಥಮಿಕ ಹಂತದಲ್ಲಿ ಸಹಾಯ ಮಾಡಲು ರೈತ ಸೇವಾ ಸಹಕಾರ ಸಂಘ ತುಂಬಾ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರಮ ವಹಿಸಿ ಒಗ್ಗಟ್ಟಿನಿಂದ ಹೋರಾಡಿ ಸಂಘದಲ್ಲಿ ಕಾಂಗ್ರೆಸ್ ಬಾವುಟವನ್ನು ಹಾರಿಸಿದ್ದಾರೆ ಎಂದರು.

ನಮ್ಮ ಸರ್ಕಾರ ಇದೆ. ಡಿಸಿಎಂ, ಎಂಎಲ್ಎ, ಎಂಎಲ್ಸಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಹೆಚ್ಚಿನ ಅನುದಾನ ತಂದು ರೈತರ ಸೇವೆ ಮಾಡಲು ಇದೊಂದು ಉತ್ತಮ ಅವಕಾಶವಾಗಿದೆ. ಹೋರಾಟ ಮಾಡಿ ಪಕ್ಷದ ಗೆಲುವಿಗೆ ಕಾರಣರಾದ ಎಲ್ಲರಿಗೂ ನಮ್ಮ ಪಕ್ಷದ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ನಿರ್ದೇಶಕರಾದ ಜಿ.ರವಿ, ವೆಂಕಟೇಶ್ , ನಂಜೇಗೌಡ, ಕೆಂಪೇಗೌಡ, ಶಿವಕುಮಾರ್ , ಜಯಮ್ಮ, ಕೆಂಚಕಾಳಯ್ಯ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!