ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಕ್ಕಳು ಮೊಬೈಲ್, ಟಿವಿ ಗೀಳು ಹತ್ತದಂತೆ ನೋಡಿಕೊಂಡು ಪುಸ್ತಕ ಓದುವ, ಮಣ್ಣಿನಲ್ಲಿ ಆಡಲು, ಆಟದ ಮೈದಾನಗಳಲ್ಲಿ ತೊಡಗಿಸಿದರೆ ಮಕ್ಕಳ ಸೃಜನಶೀಲತೆ, ಕ್ರಿಯಾಶೀಲತೆ ಹೆಚ್ಚುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.ಇಲ್ಲಿನ ನವನಗರದಲ್ಲಿನ ಹೊಳೆ ಹುಚ್ಚೇಶ್ವರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಶಾಲೆಗಳ ವಾರ್ಷಿಕ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗಡಿಯಲ್ಲಿ ಸಿಗುವ ಪ್ಲಾಸ್ಟಿಕ್ ಆಟದ ವಸ್ತುಗಳಿಗೆ ಮಕ್ಕಳು ಅಂಟಿಕೊಂಡರೆ ಮಕ್ಕಳಲ್ಲಿ ಸೃಜನಶೀಲತೆ ಸತ್ತು ಹೋಗುತ್ತದೆ. ಮಕ್ಕಳು ತಮ್ಮ ಆಟದ ವಸ್ತುವನ್ನು ತಾವೇ ಸೃಷ್ಟಿಸಿಕೊಳ್ಳುವುದರಿಂದ ಸೃಜನಶೀಲತೆ ಚಿಗುರುತ್ತದೆ. ಸಮಾಜದಿಂದ ಬಂದಿದ್ದು ವಾಪಸ್ ಸಮಾಜಕ್ಕೆ ಹಂಚುವ ಕನಸು ಕಟ್ಟಿಕೊಂಡು ಶ್ಲಾಘಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಪಾರವಾಗಿ ಪ್ರೀತಿಸುವ, ಬೆಂಬಲಿಸುವ ಶರಣರ ಜಿಲ್ಲೆ ಬಾಗಲಕೋಟೆ ಅಂದರೆ ನನಗೆ ಅತೀವ ಪ್ರೀತಿ. ಈ ಜಿಲ್ಲೆಯ ಹೊಳೆ ಹುಚ್ಚೇಶ್ವರ ಸಂಸ್ಥೆ ಅನ್ನ, ಅಕ್ಷರ ದಾಸೋಹದಲ್ಲಿ ಅಪಾರ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಈಗ ಶಿಕ್ಷಣದ ಸವಾಲು ಹಾಗೂ ಸಾಧ್ಯತೆಗಳು ಅಪಾರ ಮರ್ಪಾಡು ಹೊಂದಿವೆ. ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆಯ ಬೆಳವಣಿಗೆ ಜ್ಞಾನದ ಹೊಳೆಯನ್ನೇ ಹರಿಸುತ್ತಿದೆ. ಇಂಥ ಸವಾಲಿನ ಹೊತ್ತಲ್ಲಿ ಮಕ್ಕಳಿಗೆ ಕ್ರಿಯಾಶೀಲ ಮತ್ತು ಮಾನವೀಯ ನೆಲೆಯ ಶಿಕ್ಷಣ ಒದಗಿಸಬೇಕಿದೆ. ಈ ದಿಕ್ಕಿನಲ್ಲಿ ಈ ಸಂಸ್ಥೆ ಶ್ರಮಿಸಲಿ ಎಂದು ಸಲಹೆ ನೀಡಿದರು.ಶಾಸಕ ಎಚ್.ವೈ. ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳೆಬಸು ಶೆಟ್ಟರ್, ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಜಿಲ್ಲಾ ರಕ್ಷಣಾಧಿಕಾರಿ ಅಮರನಾಥ ರೆಡ್ಡಿ, ಸಿಇಒ ಡಾ.ಶಶಿಧರ್ ಕುರೇರ್, ತೆಂಗು ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ನಟರಾಜ್ ಜಾನಕಿರಾಮ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಈಗ ಶಿಕ್ಷಣದ ಸವಾಲು ಮತ್ತು ಸಾಧ್ಯತೆಗಳು ಅಪಾರ ಮರ್ಪಾಡು ಹೊಂದಿವೆ. ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆ ಬೆಳವಣಿಗೆ ಜ್ಞಾನದ ಹೊಳೆಯನ್ನೇ ಹರಿಸುತ್ತಿದೆ. ಇಂಥ ಸವಾಲಿನ ಹೊತ್ತಲ್ಲಿ ಮಕ್ಕಳಿಗೆ ಕ್ರಿಯಾಶೀಲ ಹಾಗೂ ಮಾನವೀಯ ನೆಲೆಯ ಶಿಕ್ಷಣ ಒದಗಿಸಬೇಕಿದೆ.
- ಕೆ.ವಿ. ಪ್ರಭಾಕರ್ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ