ದೆಹಲಿ ಸ್ಫೋಟ: ಉಗ್ರರ ದಮನಕ್ಕೆ ದಾವಣಗೆರೆಯಲ್ಲಿ ಕಾಂಗ್ರೆಸ್‌ ಆಗ್ರಹ

KannadaprabhaNewsNetwork |  
Published : Nov 16, 2025, 01:30 AM IST
15ಕೆಡಿವಿಜಿ2-ದೆಹಲಿ ಬಾಂಬ್ ಸ್ಪೋಟ ಖಂಡಿಸಿ, ಉಗ್ರರನ್ನು, ಪಾಕಿಸ್ಥಾನವನ್ನು ಸದೆ ಬಡಿಯುವಂತೆ ಒತ್ತಾಯಿಸಿ ದಾವಣಗೆರೆ ಅಮರ್ ಜವಾನ್ ಸ್ಮಾರಕದ ಎದುರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ನೇತೃತ್ವದಲ್ಲಿ ಶನಿವಾರ ಪ್ರತಿಭಟಿಸಲಾಯಿತು. | Kannada Prabha

ಸಾರಾಂಶ

ದೇಶದ ಶಕ್ತಿ ಕೇಂದ್ರವಾದ ದೆಹಲಿಯ ಬಾಂಬ್ ಸ್ಫೋಟ ಖಂಡಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದ ಶಕ್ತಿ ಕೇಂದ್ರವಾದ ದೆಹಲಿಯ ಬಾಂಬ್ ಸ್ಫೋಟ ಖಂಡಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಎಸ್‌.ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್‌ ಸ್ಮಾರಕದ ಎದುರು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ನೇತೃತ್ವದಲ್ಲಿ ದೆಹಲಿ ಬಾಂಬ್ ಸ್ಪೋಟ ಖಂಡಿಸಿ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಘೋಷಣೆ ಕೂಗುವ ಮೂಲಕ ಉಗ್ರರ ದಮನಕ್ಕೆ ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ದಿನೇಶ ಕೆ.ಶೆಟ್ಟಿ, ದೆಹಲಿ ಬಾಂಬ್ ಸ್ಫೋಟದಲ್ಲಿ 13 ಜನ ಸಾವಿಗೆ ಕಾರಣರಾದ ಉಗ್ರರು, ಅದಕ್ಕೆ ಕಾರಣರಾದವರು ಯಾರೇ ಆಗಿದ್ದರೂ ಕೇಂದ್ರ ಸರ್ಕಾರ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕು. 56 ಇಂಚಿನ ಎದೆಯ ಪ್ರಧಾನಿ ನರೇಂದ್ರ ಮೋದಿ ನಿಜವಾಗಲೂ ದೇಶದ ರಕ್ಷಣೆಗೆ ಪಣ ತೊಟ್ಟಿದ್ದರೆ ಮೊದಲು ಪಾಕಿಸ್ತಾನವನ್ನು ವಿಶ್ವ ಭೂಪಟದಲ್ಲೇ ಇಲ್ಲದಂತೆ ಮಾಡಿ ತೋರಿಸಲಿ ಎಂದರು.

ಗುಜರಾತ್ ಮುಖ್ಯಮಂತ್ರಿ ಇದ್ದಾಗ ನರೇಂದ್ರ ಮೋದಿ ಹೇಳಿದ್ದ ಹೇಳಿಕೆಗಳ ಬಗ್ಗೆ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಪಾಕಿಸ್ತಾನದ ವಿರುದ್ಧ ಇಂದಿರಾ ಗಾಂಧಿ ಹೇಗೆ ಯುದ್ಧ ಸಾರಿ, ಇಡೀ ಪಾಕಿಸ್ಥಾನದ ಮಗ್ಗಲು ಮುರಿದಿದ್ದರೋ ಅಂತಹ ಕೆಲಸವನ್ನು ಈಗ ಮೋದಿ ಮಾಡಲಿ. ವಿಶ್ವಭೂಪಟದಲ್ಲಿ ಪಾಕಿಸ್ತಾನದ ನಾಮಾವಶೇಷ ಇಲ್ಲದಂತೆ ಮಾಡಿ ತೋರಸಲಿ. ಇನ್ನಾದರೂ ಪಾಕ್‌ನ್ನು ಮೋದಿ ಸರ್ಕಾರ ಮಟ್ಟ ಹಾಕಲಿ ಎಂದು ಹೇಳಿದರು.

ಕಳೆದೊಂದು ದಶಕದಲ್ಲಿ 25 ಬಾಂಬ್ ಸ್ಪೋಟ ಆಗಿದ್ದು, ಪುಲ್ವಾಮಾ, ಪೆಹಲ್ಗಾಂ ಸೇರಿದಂತೆ ಅನೇಕ ದೊಡ್ಡ ಮಟ್ಟದ ದಾಳಿ, ಸ್ಪೋಟಗಳಾದಾಗಲೂ ನಾವು ಕೇಂದ್ರ ಸರ್ಕಾರದ ಜತೆಗೆ ಇದ್ದೆವು. ಈಗಲೂ ನಾವು ಕೇಂದ್ರದ ಜತೆ ಇದ್ದೇವೆ. ಉಗ್ರರನ್ನು ಬಳಸಿಕೊಂಡು, ಭಾರತದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ. ಅಂತಹ ಪಾಕಿಸ್ತಾನ ಮತ್ತೆ ತಲೆ ಎತ್ತದಂತೆ ಬಗ್ಗು ಬಡಿಸುವ ಕೆಲಸ ಕೇಂದ್ರ ಮಾಡಲಿ ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಾತನಾಡಿ, ದೇಶ ಮತ್ತು ದೇಶ ವಾಸಿಗಳ ರಕ್ಷಣೆ, ಭದ್ರತೆ ವಿಚಾರದಲ್ಲಿ ನಾವ್ಯಾರೂ ಎಂದಿಗೂ ರಾಜಕೀಯ ಮಾಡುವುದಿಲ್ಲ. ದೇಶ, ಜನರ ರಕ್ಷಣೆಗೆ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ. ದೆಹಲಿಯಲ್ಲಿ ಸ್ಪೋಟ ಸಂಭವಿಸಿದ್ದು, 13 ಜನರು ಸಾವನ್ನಪ್ಪಿದ್ದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್‌.ನಾಗಭೂಷಣ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಅನಿತಾ ಬಾಯಿ ಮಾಲತೇಶ, ಪಾಲಿಕೆ ಮಾಜಿ ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಎಲ್.ಡಿ.ಗೋಣೆಪ್ಪ, ಎಸ್.ಮಲ್ಲಿಕಾರ್ಜುನ, ಉದಯಕುಮಾರ, ಗೋಪಿನಾಯ್ಕ, ಜಾಕೀರ್, ಕೊಡಪಾನ ದಾದಾಪೀರ್‌, ರಂಗಸ್ವಾಮಿ, ದೇವರಹಟ್ಟಿ ಸಮೀವುಲ್ಲಾ, ಟಿ.ರಮೇಶ, ವಿನಾಯಕ, ಅಕ್ಬರ್ ಬಾಷಾ, ಆರೋಗ್ಯ ಸ್ವಾಮಿ, ಕೇರಂ ವಿ.ಗಣೇಶ, ಮಾಜಿ ಸೈನಿಕ ಸುರೇಶ ರಾವ್, ಕವಿತಾ ಚಂದ್ರಶೇಖರ, ಮಂಜಮ್ಮ ಹನುಮಂತಪ್ಪ, ದಾಕ್ಷಾಯಣಮ್ಮ, ಶುಭಮಂಗಳ, ರಾಜೇಶ್ವರಿ, ಸಲ್ಮಾಬಾನು, ಮಂಗಳಮ್ಮ ಇತರರು ಇದ್ದರು.

PREV

Recommended Stories

ಡಾ. ವಿ.ಎಸ್.ವಿ. ಪ್ರಸಾದರ ಸಮಾಜ ಸೇವೆ ಅವಿಸ್ಮರಣೀಯ
ಮಕ್ಕಳು ದೇಶದ ಆಸ್ತಿ: ಆಹಾರ ಸಚಿವ ಮುನಿಯಪ್ಪ