ದಿಲ್ಲಿ ಬಾಂಬ್‌ ಸ್ಫೋಟ: ರಾಜ್ಯಾದ್ಯಂತ ಕಟ್ಟೆಚ್ಚರ

KannadaprabhaNewsNetwork |  
Published : Nov 12, 2025, 02:15 AM IST
11ಎಚ್‌ಪಿಟಿ1- ಹೊಸಪೇಟೆ ತುಂಗಭದ್ರಾ ಜಲಾಶಯದಲ್ಲಿ ವಿಜಯನಗರ ಎಸ್ಪಿ ಎಸ್‌. ಜಾಹ್ನವಿ ನೇತೃತ್ವದಲ್ಲಿ ವಿಧ್ವಂಸಕ ಕೃತ್ಯ ತಡೆ ಪರಿಶೀಲನಾ ತಂಡದಿಂದ ಪರಿಶೀಲನೆ ನಡೆಸಲಾಯಿತು. | Kannada Prabha

ಸಾರಾಂಶ

ದೆಹಲಿಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಕಾರು ಬಾಂಬ್‌ ಸ್ಫೋಟ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೆಹಲಿಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಕಾರು ಬಾಂಬ್‌ ಸ್ಫೋಟ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಪ್ರಮುಖ ದೇವಸ್ಥಾನ, ಬೀಚ್, ಧಾರ್ಮಿಕ ಕೇಂದ್ರಗಳು, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ, ಏರ್‌ ಪೋರ್ಟ್‌ ಸೇರಿ ಜನದಟ್ಟಣೆ ಹೆಚ್ಚಿರುವ, ಪ್ರವಾಸಿಗರು ಹೆಚ್ಚು ಸೇರುವ ಕಡೆಗಳಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಅನುಮಾನಾಸ್ಪದ ವಾಹನಗಳು, ವ್ಯಕ್ತಿಗಳು ಮತ್ತು ವಸ್ತುಗಳನ್ನು ಪೊಲೀಸ್‌ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸೌಧ, ರಾಜಭವನ, ಮೆಜೆಸ್ಟಿಕ್‌, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಸೋಮವಾರ ರಾತ್ರಿಯಿಂದಲೇ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

ದೇಶ, ವಿದೇಶಿ ಪ್ರವಾಸಿಗರು ಭೇಟಿ ನೀಡುವ ವಿಜಯನಗರ ಜಿಲ್ಲೆಯ ಹಂಪಿ, ಉಚ್ಚಂಗಿದುರ್ಗ ದೇವಾಲಯ, ಮೈಸೂರು ಅರಮನೆ ಸೇರಿ ಪ್ರವಾಸಿ ಕೇಂದ್ರಗಳಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರವಾಸಿಗರ ಕಾರು ಹಾಗೂ ಬಸ್‌ಗಳನ್ನು ಕೂಡ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ರಾಜಾಸೀಟು ಸೇರಿದಂತೆ ಕೊಡಗಿನ ಎಲ್ಲಾ ಪ್ರವಾಸಿ ತಾಣಗಳಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ಮಾಡಲಾಗುತ್ತಿದೆ. ಮಡಿಕೇರಿ ಬಸ್ಸು ನಿಲ್ದಾಣದಲ್ಲಿದ್ದ ಅಸ್ಸಾಂ ಕಾರ್ಮಿಕರನ್ನು ಪರಿಶೀಲನೆ ಮಾಡಲಾಗಿದೆ. ಪ್ರವಾಸಿತಾಣಗಳ ವ್ಯಾಪ್ತಿಯ ಲಾಡ್ಜ್‌ ಗಳು, ಹೋಂ ಸ್ಟೇಗಳು ಹಾಗೂ ಅನುಮಾನಾಸ್ಪದ ವಾಹನಗಳು, ವ್ಯಕ್ತಿಗಳು ಮತ್ತು ವಸ್ತುಗಳನ್ನು ಪೊಲೀಸ್‌ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ.

ಯಾದಗಿರಿ ಜಿಲ್ಲೆಯ ನಾರಾಯಣಪುರ, ಕೆಆರ್‌ಎಸ್‌, ತುಂಗಭದ್ರಾ ಸೇರಿ ರಾಜ್ಯದ ಪ್ರಮುಖ ಜಲಾಶಯಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಏಷ್ಯಾದ ಅತಿ ದೊಡ್ಡ ಮೀನುಗಾರಿಕಾ ಬಂದರು, ಉಡುಪಿ ಜಿಲ್ಲೆ ಮಲ್ಪೆ ಸಮುದ್ರ ತೀರದಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸರು ಮಂಗಳವಾರ ವಿಶೇಷ ಗಸ್ತು ನಡೆಸಿದರು. ಆಳ ಸಮುದ್ರದಲ್ಲಿ ಹೊರರಾಜ್ಯದ ಕೆಲವು ಬೋಟುಗಳನ್ನು ಶಸ್ತ್ರಸಜ್ಜಿತ ಕರಾವಳಿ ಪೊಲೀಸರು ಪರಿಶೀಲಿಸಿದರು.

ಭಟ್ಕಳದಲ್ಲಿ ತಪಾಸಣೆ:

ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಬಾಂಬ್ ನಿಷ್ಕ್ರೀಯ ದಳದವರಿಂದ ತಪಾಸಣೆ ನಡೆಸಲಾಯಿತು. ಪಟ್ಟಣದ ರೈಲ್ವೆ ನಿಲ್ದಾಣ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ ಶ್ವಾನದಳ ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಹಾಯದಿಂದ ಭದ್ರತಾ ತಪಾಸಣೆ ನಡೆಯಿತು. ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗುಗಳು, ಲಗೇಜ್‌ಗಳು, ನಿಲ್ದಾಣದ ಪ್ಲಾಟ್‌ಫಾರ್ಮ್‌ ಹಾಗೂ ಪಾರ್ಕಿಂಗ್‌ ಪ್ರದೇಶಗಳಲ್ಲಿ ಪರಿಶೀಲಿಸಲಾಯಿತು. ಚನ್ನಪಟ್ಟಣ ಹನುಮಂತ ದೇವಾಲಯ ಮತ್ತು ಮುರ್ಡೇಶ್ವರ ದೇವಾಲಯಗಳಿಗೂ ಭೇಟಿ ನೀಡಿ, ದೇವಾಲಯದ ಒಳಭಾಗ, ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶ್ವಾನದಳದ ಸಹಕಾರದಿಂದ ಪರಿಶೀಲನೆ ನಡೆಸಲಾಯಿತು. ಮುರ್ಡೇಶ್ವರದಲ್ಲಿ ಶಿವನ ವಿಗ್ರಹದ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಶೋಧ ಕಾರ್ಯ ನಡೆಯಿತು.

ಗಾಂಜಾ ಪತ್ತೆ:

ಕೊಪ್ಪಳದ ಬಸ್‌ ನಿಲ್ದಾಣದಲ್ಲಿ ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿದೆ. ಪೊಲೀಸ್ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಸ್ ನಿಲ್ದಾಣದಲ್ಲಿದ್ದ ಬ್ಯಾಗ್‌ವೊಂದರಲ್ಲಿ ಪರಿಶೀಲನೆ ನಡೆಸಿದಾಗ ಅದರೊಳಗೆ ಎರಡು ಪ್ಯಾಕೆಟ್‌ಗಳಲ್ಲಿ ಗಾಂಜಾ ಪತ್ತೆಯಾಗಿದೆ. ಬ್ಯಾಗ್‌ ಜಾರ್ಖಂಡ್ ಮೂಲದ ಕಾರ್ಮಿಕರದ್ದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ, ತಪಾಸಣೆ ವೇಳೆ ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ