ಐಸಿಸ್‌ ಉಗ್ರ ನಂಟು ಆರೋಪ: ಉಮ್ಮರ್‌ ಅಬ್ದುಲ್‌ ರೆಹಮಾನ್‌ಗೆ ದೆಹಲಿ ಹೈಕೋರ್ಟ್‌ ಜಾಮೀನು

KannadaprabhaNewsNetwork | Published : May 17, 2024 12:39 AM

ಸಾರಾಂಶ

ಜಾಮೀನು‌ ನಿರಾಕರಿಸಿದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಪೂರಕ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ದೆಹಲಿ ಹೈ ಕೋರ್ಟ್ ಜಾಮೀನು ನೀಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಉಗ್ರರ ನಂಟು, ಪ್ರಚೋದನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ)ನಿಂದ ಬಂಧಿತ ಉಳ್ಳಾಲ ಮಾಜಿ ಶಾಸಕ ಇದಿನಬ್ಬ ಅವರ ಮೊಮ್ಮಗ ಉಮ್ಮರ್‌ ಅಬ್ದುಲ್‌ ರೆಹಮಾನ್‌ಗೆ ದೆಹಲಿಯ ಉಚ್ಛ ನ್ಯಾಯಾಲಯ ಜಾಮೀನು ನೀಡಿದೆ.

ಆಗಸ್ಟ್ 21, 2021ರಂದು ಐಸಿಸ್ ನಂಟಿನ ಆರೋಪದಡಿ ಉಮ್ಮರ್ ಅಬ್ದುಲ್ ರೆಹಮಾನ್ ಬಂಧನವಾಗಿತ್ತು. ಯುಎಪಿಎ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ಈ ಬಂಧನ ಪ್ರಶ್ನಿಸಿ ವಿಚಾರಣಾಧೀನ ಕೋರ್ಟ್​ನಲ್ಲಿ ಜಾಮೀನಿಗೆ ರೆಹಮಾನ್​ ಅರ್ಜಿ ಸಲ್ಲಿಸಿದ್ದನು. ಆದರೆ ಜಾಮೀನು‌ ನಿರಾಕರಿಸಿದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸುದೀರ್ಘ ವಿಚಾರಣೆ ಬಳಿಕ ಪೂರಕ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ದೆಹಲಿ ಹೈ ಕೋರ್ಟ್ ಜಾಮೀನು ನೀಡಿದೆ.

ಭಯೋತ್ಪಾದಕ ಸಂಘಟನೆ ಐಸಿಸ್‌ ಲಿಂಕ್‌ ಪ್ರಕರಣದಲ್ಲಿ ಉಮ್ಮರ್‌ ಅಬ್ದುಲ್‌ ರಹಮಾನ್‌ಗೆ ಜಾಮೀನು ದೊರೆತಿದೆ. ಐಸಿಸ್ ಬಾವುಟ, ಕರಪತ್ರ ಮೊಬೈಲ್‌ನಲ್ಲಿದ್ದರೆ ಆತ ಉಗ್ರ ಎನ್ನಲು ಪೂರಕ ಸಾಕ್ಷ್ಯವಲ್ಲ ಎಂದು ಜಾಮೀನು ನೀಡಿದ ಹೈ ಕೋರ್ಟ್ ಹೇಳಿದೆ. ನ್ಯಾಯಪೀಠದ ಪ್ರಕಾರ, ಉಗ್ರ ಸಂಘಟನೆ ಬಗೆಗಿನ ಆಕರ್ಷಣೆಯನ್ನು ಉಗ್ರ ನಂಟು ಎನ್ನಲು ಆಗುವುದಿಲ್ಲ. ಐಸಿಸ್ ಪರ ವಿಡಿಯೋ ಡೌನ್‌ಲೋಡ್ ಮಾಡುವುದು, ಭಾಷಣ ಆಲಿಸುವುದನ್ನು ಯುಎಪಿಎ ಕಾಯಿದೆಯಡಿ ತರಲು ಆಗುವುದಿಲ್ಲ. ಈ ಸಾಕ್ಷ್ಯ ಬಳಸಿ ಯುಎಪಿಎ ಸೆಕ್ಷನ್ 38 ಮತ್ತು 39ರಡಿ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದಿದೆ.ಈಗಾಗಲೇ ಪ್ರಕರಣ ಸಂಬಂಧ ಹಲವು ಮಂದಿ ವಿರುದ್ಧ ಎನ್​ಐಎ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಉಮ್ಮರ್ ಅಬ್ದುಲ್ ರೆಹಮಾನ್ ಜೊತೆಗೆ ದಿ.ಇದಿನಬ್ಬರ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂನ್ನೂ ಎನ್‌ಐಎ ಬಂಧಿಸಿತ್ತು. ಇದೀಗ ಉಮ್ಮರ್ ಅಬ್ದುಲ್ ರೆಹಮಾನ್​​ಗೆ ದೆಹಲಿ ಕೋರ್ಟ್ ಜಾಮೀನು ನೀಡಿದೆ.

ಆರೋಪಿಯ ಮೊಬೈಲ್‌ನಲ್ಲಿ ಉಗ್ರ ಒಸಾಮಾ ಬಿನ್‌ ಲಾಡೆನ್, ಐಸಿಸ್ ಬಾವುಟಗಳ ಚಿತ್ರ, ಐಸಿಸ್ ಪರ ಭಾಷಣಗಳ ತುಣುಕು ಸಿಕ್ಕಿದೆ ಎಂದು ಎನ್‌ಐಎ ವಾದಿಸಿದರೆ, ಇದೆಲ್ಲದರ ಮೂಲಕ ಆತನಿಗೆ ಐಸಿಸ್ ನಂಟಿದೆ ಎನ್ನಲು‌ ಆಗುವುದಿಲ್ಲ. ಯಾಕೆಂದರೆ ಇವುಗಳು ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್‌ನೆಟ್‌ನಲ್ಲಿ ಸಿಗುತ್ತವೆ. ಕುತೂಹಲ ಇರುವ ಯಾರು ಬೇಕಾದರೂ ‌ಮೊಬೈಲ್, ಕಂಪ್ಯೂಟರ್‌ನಲ್ಲಿ ಇದನ್ನು ಡೌನ್‌ಲೋಡ್ ಮಾಡಬಹುದು. ಹಾಗಾಗಿ ಇದನ್ನು ಇಟ್ಟುಕೊಂಡು ಐಸಿಸ್ ನಂಟನ್ನು ಸಾಬೀತು ಪಡಿಸಲು ಆಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.ದೀಪ್ತಿ ಅಲಿಯಾಸ್ ಮರಿಯಂ, ಕ್ರೋನಿಕಲ್ ಪೌಂಡೇಶನ್ ಎಂಬ ಇನ್‌​ಸ್ಟಾಗ್ರಾಂ​ ಪೇಜ್ ಮೂಲಕ ಐಸಿಸ್​ ಕೆಲಸ ಮಾಡಲು ಶುರು ಮಾಡಿದ್ದಳು. ನಂತರ ಪತಿ ಅನಾಸ್ ಅಬ್ದುಲ್ ರೆಹಮಾನ್, ಸಂಬಂಧಿ ಉಮ್ಮರ್ ಅಬ್ದುಲ್ ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ‌ ಮಾಡುತ್ತಿದ್ದಳು. ಸುಮಾರು 15 ನಕಲಿ‌ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹೊಂದಿದ್ದಾಳೆ. ಈ ಹಿಂದೆ ಎನ್ಐಎನಿಂದ ಬಂಧಿತನಾಗಿದ್ದ ಮಾದೇಶ ಪೆರುಮಾಳ್‌ನ​ನ್ನು ಮತಾಂತರ ಮಾಡಿ ಐಸಿಸ್​ಗೆ ಕೆಲಸ ಮಾಡುವಂತೆ ಮಾಡಿದ್ದಳು. ಇದುವರೆಗೂ ಸುಮಾರು 10 ಯುವಕರನ್ನು ಮತಾಂತರಗೊಳಿಸಿ ಐಸಿಸ್​ಗೆ ಸೇರಿಸಿದ್ದಾಳೆ ಎಂದು ಎನ್ಐಎ ದೂರಿತ್ತು.

ಈ ಆರೋಪಗಳ ಹಿನ್ನೆಲೆಯಲ್ಲಿ ಆರೋಪಿಗಳಾದ ದೀಪ್ತಿ ಮಾರ್ಲ, ಇದಿನಬ್ಬ ಮೊಮ್ಮಗ ಅಮ್ಮರ್ ಅಬ್ದುಲ್ ರಹಿಮಾನ್, ಮೊಹಮ್ಮದ್ ವಕಾರ್ ಲಾನ್ ಯಾನೆ ವಿಲ್ಸನ್ ಕಾಶ್ಮೀರಿ, ಮಿಜಾ ಸಿದ್ದೀಕ್, ಶಿಫಾ ಹಾರೀಸ್ ಯಾನೆ ಆಯಿಷಾ, ಒಬೈದ್ ಹಮೀದ್ ಮಟ್ಟಾ, ಮಾದೇಶ್ ಶಂಕರ್ ಯಾನೆ ಅಬ್ದುಲ್ಲಾ, ಮುಜಾಮಿಲ್ ಹಸನ್ ಭಟ್ ವಿರುದ್ಧ ಈ ದೋಷಾರೋಪಣ ಪಟ್ಟಿಯನ್ನು ಎನ್ಐಎ ಸಲ್ಲಿಕೆ ಮಾಡಿತ್ತು.

Share this article