ಸಿದ್ಧಸಿರಿ ಸಂಸ್ಥೆ ಬಗ್ಗೆ ಉದ್ದೇಶಪೂರ್ವಕ ಅಪಪ್ರಚಾರ

KannadaprabhaNewsNetwork |  
Published : Nov 18, 2026, 03:00 AM IST
ಸಿದ್ಧಸಿರಿ ಸಂಸ್ಥೆ ಸುಭದ್ರವಾಗಿದೆ, ಠೇವಣಿದಾರರು ಆತಂಕಪಡುವ ಅಗತ್ಯವಿಲ್ಲ: ಸತೀಶ್ಚಂದ್ರ ಕುಲಕರ್ಣಿ | Kannada Prabha

ಸಾರಾಂಶ

ನಗರದ ಶ್ರೀ ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿಗೆ ಸಂಬಂಧಿಸಿದಂತೆ ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುವ ಮೂಲಕ ಸಂಸ್ಥೆಯ ಹೆಸರಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸಂಸ್ಥೆಯ ಎಲ್ಲ ಠೇವಣಿದಾರರ ಹಣ ಸುರಕ್ಷಿತವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಸೊಸೈಟಿಯ ಕಾನೂನು ಸಲಹೆಗಾರ ಸತೀಶ್ಚಂದ್ರ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಶ್ರೀ ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಸೊಸೈಟಿಗೆ ಸಂಬಂಧಿಸಿದಂತೆ ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುವ ಮೂಲಕ ಸಂಸ್ಥೆಯ ಹೆಸರಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸಂಸ್ಥೆಯ ಎಲ್ಲ ಠೇವಣಿದಾರರ ಹಣ ಸುರಕ್ಷಿತವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಸೊಸೈಟಿಯ ಕಾನೂನು ಸಲಹೆಗಾರ ಸತೀಶ್ಚಂದ್ರ ಕುಲಕರ್ಣಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2026ರ ಆಗಸ್ಟ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ಪಿ.ಸುಧಾಮದಾಸ ಅವರು ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್‌(ಸಿಆರ್‌ಸಿಎಸ್) ಅವರಿಗೆ ಪತ್ರ ಬರೆದು ಸಿದ್ಧಸಿರಿ ಸಂಸ್ಥೆಯ ತಪಾಸಣೆ ನಡೆಸುವಂತೆ ಕೋರಿದ್ದರು. ಆದರೆ, ಅವರಿಗೂ ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಇದು ರಾಜಕೀಯ ದ್ವೇಷ ಸಾಧಿಸುವ ಉದ್ದೇಶದಿಂದ ಮಾಡಿರುವ ಪ್ರಯತ್ನವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು.

ಸಂಸ್ಥೆ ಸಲ್ಲಿಸಿರುವ ವರದಿಗಳಲ್ಲಿನ ಕೆಲವು ಸಣ್ಣಪುಟ್ಟ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹಣಕಾಸಿನ ವ್ಯವಹಾರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ ತನಿಖೆಗೆ ವಹಿಸುವಂತೆ ಕೋರಲಾಗಿತ್ತು. ಅದರಂತೆ, ಕೇಂದ್ರದ ಸಿಆರ್‌ಸಿಎಸ್ ಅಧಿಕಾರಿಗಳು ರಾಜ್ಯದ ಸಹಕಾರ ಇಲಾಖೆ ಅಧಿಕಾರಿಗಳಿಗೆ ತನಿಖೆ ನಡೆಸಲು ಅನುಮತಿ ನೀಡಿದ್ದರು. ಬೆಳಗಾವಿ ಸಹಕಾರಿ ಸಂಘಗಳ ಉಪನಿಬಂಧಕರು ಅಧಿಕಾರಿಗಳನ್ನು ನೇಮಿಸಿ, ಐದು ಪ್ರತಿಗಳಲ್ಲಿ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು. ಈ ಕ್ರಮ ರಾಜಕೀಯ ಪ್ರೇರಿತವಾಗಿದೆ ಎಂದು ಭಾವಿಸಿ ನಾವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಇದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ದೊರೆತಿದೆ. ಉದ್ಯಮವನ್ನು ವಿಸ್ತರಿಸುವ ಹಾಗೂ ರಾಜ್ಯದ ಆಡಳಿತಾತ್ಮಕ ಹಸ್ತಕ್ಷೇಪದಿಂದ ದೂರವಿರುವ ಉದ್ದೇಶದಿಂದ ಸಂಸ್ಥೆಯನ್ನು ಮಲ್ಟಿಸ್ಟೇಟ್ ಸಹಕಾರಿ ಸಂಸ್ಥೆಯನ್ನಾಗಿ ಪರಿವರ್ತಿಸಲಾಗಿದೆ. ಸಂಸ್ಥೆಗೆ ಧಕ್ಕೆ ತರುವ ಉದ್ದೇಶದಿಂದ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಸಿದ್ಧಸಿರಿ ಸಂಸ್ಥೆ ಆರ್ಥಿಕವಾಗಿ ಸದೃಢವಾಗಿದ್ದು, ಠೇವಣಿದಾರರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಸಿದ್ಧಸಿರಿ ಸಂಸ್ಥೆಯ ವಿರುದ್ಧ ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಗ್ರಾಹಕರ ಹಣ ಸಂಪೂರ್ಣ ಸುರಕ್ಷಿತವಾಗಿದೆ. ಸಂಸ್ಥಾಪಕ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಎಲ್ಲ ನಿರ್ದೇಶಕರು ಸಂಸ್ಥೆಯ ಪರವಾಗಿ ದೃಢವಾಗಿ ನಿಂತಿದ್ದೇವೆ. ಸಂಸ್ಥೆಯಲ್ಲಿ ಒಟ್ಟು ₹6,319 ಕೋಟಿ ಠೇವಣಿ ಇದ್ದು, ಜನರು ನಮ್ಮ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟಿದ್ದಾರೆ. ಸಿದ್ಧಸಿರಿ ಬ್ಯಾಂಕ್ ಅತ್ಯಂತ ಸುಭದ್ರವಾಗಿದೆ. ನಿಜವಾಗಿಯೂ ಯಾವುದೇ ಒಂದು ಅವ್ಯವಹಾರ ನಡೆದಿದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಲಿ. ಆಧಾರರಹಿತ ಆರೋಪಗಳನ್ನು ಮಾಡುವ ಬದಲು ಸೂಕ್ತ ದಾಖಲೆಗಳ ಮೂಲಕ ಅಕ್ರಮಗಳನ್ನು ಸಾಬೀತುಪಡಿಸಬೇಕು. ತನಿಖೆಗೆ ಸಂಬಂಧಿಸಿದಂತೆ ನೋಟಿಸ್ ಬಂದಿದ್ದು, ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ತಡೆಯಾಜ್ಞೆ ಪಡೆದಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಸಂ.ಗು.ಸಜ್ಜನ, ಜಗದೀಶ ಕ್ಷತ್ರಿ, ಬಸಯ್ಯ ಹಿರೇಮಠ ಹಾಗೂ ಲೆಕ್ಕ ಪರಿಶೋಧಕ ಶಿವಾನಂದ ಭುಸಾರಿ ಉಪಸ್ಥಿತರಿದ್ದರು.-----------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆನೀರು ಕಾಲುವೆಗೆ ಸಿಎಂ ಶಂಕುಸ್ಥಾಪನೆ
ಪ್ರೇಯಸಿ ಬಿಟ್ಟು ಹೋಗಿದ್ದಕ್ಕೆಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ