ಸಮಾಜದ ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ಸರ್ಕಾರದ 5 ಗ್ಯಾರೆಂಟಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಮಾಜದ ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ಸರ್ಕಾರದ 5 ಗ್ಯಾರಂಟಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿ.ಪಂ.ಕಚೇರಿಯಲ್ಲಿ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ಯಾರೆಂಟಿ ಯೋಜನೆಗಳು ಜನರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಹೆಚ್ಚಿನ ಶಕ್ತಿ ತುಂಬಿದೆ ಎಂದರು.
ಜಿಲ್ಲಾ ಮಟ್ಟದ ಸಮಿತಿ ಸದಸ್ಯರಾದ ಶಶಿಧರ್ ಅವರು ಮಾತನಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಮಟ್ಟದ ಸಭೆಗಳಿಗೆ ಶಕ್ತಿ ಯೋಜನೆಯ ಕುರಿತು ಚರ್ಚಿಸಲು ಡಿಪೋ ಮ್ಯಾನೇಜರ್ ಅಥವಾ ಎಟಿಎಸ್ ಅವರನ್ನು ಕಳುಹಿಸಬೇಕು. ಅದನ್ನು ಹೊರತುಪಡಿಸಿ ಟಿ.ಸಿ ಗಳನ್ನು ಕಳುಹಿಸುತ್ತಾರೆ. ಅವರಿಗೆ ಶಕ್ತಿ ಯೋಜನೆಯ ಕುರಿತಾಗಿ ಮಾಹಿತಿ ಇರುವುದಿಲ್ಲ. ಮುಂದಿನ ಸಭೆಗಳಲ್ಲಿ ಇಂತಹ ಪರಿಸ್ಥಿತಿ ಉಂಟಾಗಬಾರದು ಎಂದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ, ಈಗಾಗಲೇ 5 ಇಲಾಖೆಗಳ ಮುಖ್ಯಸ್ಥರಿಗೂ ಸಭೆಯ ಮಾಹಿತಿ ನೀಡಲಾಗಿದೆ. ಪೂರ್ವಾನುಮತಿ ಪಡೆಯದೆ ಸಭೆಗೆ ಗೈರು ಹಾಜರಾಗುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸು ನೀಡಲಾಗುವುದು ಎಂದು ತಿಳಿಸಿದರು.ಸದಸ್ಯರಾದ ಕಾಂತರಾಜು ಮಾತನಾಡಿ, ಅನ್ನಭಾಗ್ಯ ಯೋಜನೆಯಡಿಯಲ್ಲಿ ನೀಡುತ್ತಿರುವ ಅಕ್ಕಿಯನ್ನು ಫಲಾನುಭವಿಗಳೇ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು, ಆಹಾರ ಸರಬರಾಜು ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸುವಂತೆ ತಿಳಿಸಿದರು.
ಕುಶಾಲನಗರ ವೃತ್ತ ನಿರೀಕ್ಷಕರಾದ ಸ್ವಾತಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಾಳಸಂತೆಕೋರರ ವಿರುದ್ಧ ಕ್ರಮ ಕೈಗೊಂಡಿದ್ದು ಅವರಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಅಭಿನಂದನೆಗಳನ್ನು ಸಲ್ಲಿದರು.
ಸದಸ್ಯರಾದ ಶಶಿಧರ್ ಮಾತನಾಡಿ, ಜಿಲ್ಲೆಯಲ್ಲಿ ಯುವನಿಧಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇದ್ದು, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿಗಳು ಮತ್ತಷ್ಟು ಮುತುವರ್ಜಿಯಿಂದ ಕೆಲಸ ನಿರ್ವಹಿಸುವಂತೆ ತಿಳಿಸಿದರು. ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿ ಮಂಜುನಾಥ್ ಮಾತನಾಡಿ, ಜಿಲ್ಲೆಯ ಪ್ರತಿ ಪದವಿ ಕಾಲೇಜಿನಲ್ಲಿಯೂ ವಿಶೇಷ ಅಭಿಯಾನ ಮತ್ತು ಬ್ಯಾನರ್ ಅಳವಡಿಸಿ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಪ್ರಚಾರ ಕಾರ್ಯ ಕೈಗೊಳ್ಳಲಾಗುವುದು ಎಂದರು. ಸಮಿತಿ ಸದಸ್ಯರಾದ ಮಂದ್ರೀರ ಮೋಹನ್ ದಾಸ್ ಮಾತನಾಡಿ, ಕೊಡಗು ಮಾತ್ರವಲ್ಲದೆ ಕೊಡಗಿನ ಮೂಲದ ವಿದ್ಯಾರ್ಥಿಗಳು ಬೇರೆ ಜಿಲ್ಲೆಯಲ್ಲಿ ಪದವಿ ಮುಗಿಸಿರುತ್ತಾರೆ. ಅಂತಹ ವಿದ್ಯಾರ್ಥಿಗಳ ಮಾಹಿತಿಯನ್ನು ಸಹ ಕಲೆ ಹಾಕಿ ಅವರಿಗೂ ಯೋಜನೆಯ ಲಾಭ ತಲುಪುವಂತೆ ಕ್ರಮ ವಹಿಸಬೇಕು ಎಂದರು. ಸಭೆಯಲ್ಲಿ ಉಪಾಧ್ಯಕ್ಷರಾದ ಶರಿ ಗಿರೀಶ್, ಕೆ.ಸಿ.ಭೀಮಯ್ಯ, ನಾಸೀರ್, ಪಂಕಜ, ಸದಸ್ಯರಾದ ಎಸ್.ಕೆ.ಸುಂದರ, ಕೆ.ಎಂ.ಬಶೀರ್, ಮುಸ್ತಫ, ಪಿ.ಎಲ್. ಸುರೇಶ್, ಧನ್ಯ ರವೀಂದ್ರ, ಕೆ.ಜಿ.ಪೀಟರ್, ಕಾಂತರಾಜು, ಕಾಳಿಮಾಡ ಪ್ರಶಾಂತ್, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.