ಸರ್ಕಾರದ ಸವಲತ್ತನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿ

KannadaprabhaNewsNetwork |  
Published : Sep 03, 2024, 01:36 AM IST
ಹೊಸದುರ್ಗ ಪಟ್ಟಣದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆ ಹಾಗೂ ಕಾರ್ಯಾಗಾರವನ್ನು ಶಾಸಕ ಬಿಜಿ ಗೋವಿಂದಪ್ಪ  ಉದ್ಘಾಟಿಸಿದರು.  | Kannada Prabha

ಸಾರಾಂಶ

ಸರ್ಕಾರದ ಸವಲತ್ತುಗಳನ್ನ ಜನಸಾಮಾನ್ಯರಿಗೆ ಪ್ರಾಮಾಣಿಕವಾಗಿ ತಲುಪಿಸಿ, 7ನೇ ವೇತನ ಆಯೋಗಕ್ಕೆ ನೀವು ಪ್ರತಿಫಲ ನೀಡಿ ಎಂದು ಶಾಸಕ ಬಿಜಿ ಗೋವಿಂದಪ್ಪ ಅಧಿಕಾರಿಗಳಿಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ : ಸರ್ಕಾರದ ಸವಲತ್ತುಗಳನ್ನ ಜನಸಾಮಾನ್ಯರಿಗೆ ಪ್ರಾಮಾಣಿಕವಾಗಿ ತಲುಪಿಸಿ, 7ನೇ ವೇತನ ಆಯೋಗಕ್ಕೆ ನೀವು ಪ್ರತಿಫಲ ನೀಡಿ ಎಂದು ಶಾಸಕ ಬಿಜಿ ಗೋವಿಂದಪ್ಪ ಅಧಿಕಾರಿಗಳಿಗೆ ಹೇಳಿದರು.

ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ವಾರ್ಷಿಕ ಮಹಾಸಭೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರು ತಮ್ಮ ವ್ಯಾಪ್ತಿಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ, ಜನ ಸಾಮಾನ್ಯರು ಅರ್ಜಿ ಹಿಡಿದು, ಚುನಾಯಿತ ಪ್ರತಿನಿಧಿಗಳ ಬಳಿ ಬರುವುದಿಲ್ಲ. ತಾಲೂಕಿನ ಇಲಾಖೆಗಳು ಅಭಿವೃದ್ಧಿ ಕಾರ್ಯದಲ್ಲಿ ಹಿಂದುಳಿದಿವೆ. ಹಲವು ಬಾರಿ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ಕರೆದು, ಪ್ರಗತಿ ಪರಿಶೀಲನೆ ನಡೆಸಲಾಗಿದೆಯಾದರೂ ಪ್ರಗತಿ ಕಾಣುತ್ತಿಲ್ಲ. ಇನ್ನು ಮುಂದಾದರು ನೌಕರರು ಮೇಲಾಧಿಕಾರಿಗಳ ಮಾತಿಗೆ ಮನ್ನಣೆ ಕೊಟ್ಟು, ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿ. ಪ್ರತಿಯೊಬ್ಬರಿಗೂ ಎಲ್ಲಾ ಸೌಲಭ್ಯಗಳು ಸಿಗುವಂತೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮಾತನಾಡಿ ನೌಕರರನ್ನು ಸಂಘಟಿಸುವ ಕಾರ್ಯವನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಮಾಡುತ್ತಿದೆ. ರಾಜ್ಯದಲ್ಲಿ ಮೂರುವರೆ ಲಕ್ಷ ಮಹಿಳಾ ನೌಕರರಿದ್ದು, ಅವರಿಗೆ ಹೆರಿಗೆ ಭತ್ಯೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಸರ್ಕಾರದ ಮೇಲೆ ಒತ್ತಡ ಹಾಕಿ, ಜಾರಿಗೆ ತರುವಂತಹ ಕೆಲಸವನ್ನು ನಮ್ಮ ಸಂಘ ಮಾಡುತ್ತಿದೆ. ಸಂಘಕ್ಕೆ ಒಳ್ಳೆಯಾದಾಗುವುದಾದರೆ, ನಾನು ಯಾವುದೇ ತೀರ್ಮಾನಕ್ಕೂ ಬದ್ಧ ಎಂದರು.

ನಾನು ಸಂಘಕ್ಕೆ ಅಧ್ಯಕ್ಷನಾದ ಮೇಲೆ 26 ಆದೇಶಗಳನ್ನು ಮಾಡಿಸಿದ ತೃಪ್ತಿಯಿದೆ. 7ನೇ ವೇತನ ಆಯೋಗದ ಯಶಸ್ಸು ಎಲ್ಲರಿಗೂ ಸಲ್ಲುತ್ತದೆ. ಸಂಘದ ಸಂಘಟನೆ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿ. ಎನ್.ಪಿ.ಎಸ್, ಒ.ಪಿ.ಎಸ್ ಆಗುವ ಕೆಲಸವನ್ನ ನೂರಕ್ಕೆ ನೂರರಷ್ಟು ಮಾಡಿಸುತ್ತೇನೆ. ನೌಕರರ ಕುಟುಂಬಕ್ಕೆ ಉಚಿತ ಚಿಕಿತ್ಸೆ ನೀಡಬೇಕು. ಮುಂದಿನ ದಿನಗಳಲ್ಲಿ ಕೇಂದ್ರ ಮಾದರಿಯ ವೇತನ ಆಯೋಗ ಪಡೆಯಲು ಕಟಿ ಬದ್ಧರಾಗೋಣ. ಎಲ್ಲಾ ನೌಕರರಿಗೂ ಸಿಗುವಂತಹ ಗೌರವ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿಗಬೇಕೆಂದು ಹೇಳಿದರು.ಪ್ರೊ .ಕೃಷ್ಣೇಗೌಡ ಮಾತನಾಡಿ, ವೇದಿಕೆ ಮೇಲೆ ಮಾತನಾಡುವ ಮಾತಿಗೂ ಬೇರೆ ಕಡೆಗಳಲ್ಲಿ ಹಾಡುವ ಮಾತಿಗೂ ಬಹಳ ವ್ಯತ್ಯಾಸವಿದೆ. ಮಾತಿಗೆ ಬಹಳ ಮಹತ್ವ ಇರಬೇಕು. ಇಲ್ಲವಾದರೆ, ಮಾತುಗಳು ಶಕ್ತಿ ಕಳೆದುಕೊಳ್ಳುತ್ತವೆ. ನಾವಾಡುವ ಮಾತುಗಳು ಪರಿಣಾಮಕಾರಿಯಾಗಿರಬೇಕು. ಗಾಂಧೀಜಿಯವರ "ಮಾಡು ಇಲ್ಲವೇ ಮಾಡಿ " ಎಂಬ ಮಾತಿಗೆ ದೇಶವೇ ಬ್ರಿಟಿಷರ ವಿರುದ್ಧ ಒಂದೂಗೂಡಿತು. ಮಾತುಗಳು ಆ ಮಟ್ಟಿಗೆ ಗಟ್ಟಿಯಾಗಿರಬೇಕು. ಶಿಕ್ಷಕರಿಗೆ ಭವಿಷ್ಯವಿಲ್ಲ, ಮುಂದೆ ಆನ್ಲೈನ್ ಮೂಲಕ ಪಾಠ ಬೋಧಿಸುವ ಪದ್ಧತಿ ಬಂದರೆ, ಅಚ್ಚರಿ ಪಡಬೇಕಿಲ್ಲ. ತಂತ್ರಜ್ಞಾನ ಮನುಷ್ಯನನ್ನು ಕೈಕಟ್ಟಿಕೂರಿಸುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗಂಗಾಧರಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಚ್.ಎಸ್. ನವೀನ್ ಕುಮಾರ್, ಡಾ. ರಾಘವೇಂದ್ರ ಪ್ರಸಾದ್, ತಹಶೀಲ್ದಾರ್ ತಿರುಪತಿ ಪಾಟೀಲ್, ಕಾರ್ಯಾಪಾಲಕ ಅಭಿಯಂತರ ಪ್ರಕಾಶ್ ಎಂ, ಸಹಾಯಕ ಕಾರ್ಯಪಾಲಕ ಸುರೇಶ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಮಹಾಂತೇಶ್ ಕ್ರೀಡಾಧಿಕಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಕೆ.ಆರ್., ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುನೀಲ್ ಕುಮಾರ್, ಮಾಜಿ ಅಧ್ಯಕ್ಷರಾದ ಶಾಂತಪ್ಪ, ಜಯಣ್ಣ, ಉಪಾಧ್ಯಕ್ಷ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶಶಿಧರ್, ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತು ಮಾಜಿ ಅಧ್ಯಕ್ಷ ಆರ್. ಲಕ್ಷ್ಮಯ್ಯ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ನೌಕರರು ಪಾಲ್ಗೊಂಡಿದ್ದರು.

PREV

Recommended Stories

ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ