ಕನ್ನಡಪ್ರಭ ವಾರ್ತೆ ಚಾಮರಾಜನರನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಎಫ್‌ಐಆರ್ ನೆಪವೊಡ್ಡಿ ವಜಾಗೊಳಿಸಿರುವ 8 ಮಂದಿ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು, ಒಂದು ವಾರದೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ನೌಕರರ ಕುಟುಂಬ ಸಮೇತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುತ್ತದೆ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ಮೇಟಿ ಎಚ್ಚರಿಸಿದರು.ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಡೀನ್ ಸಂಜೀವರೆಡ್ಡಿ ಪ್ರಕರಣದಲ್ಲಿ ಸುಮಾರು ಸಿಬ್ಬಂದಿ ಮೇಲೆ ಎಫ್‌ಐಆರ್ ಹಾಕಿದ್ದು, ಅವರಲ್ಲಿ ಸಂಘದ ಮಂದಿಯನ್ನು ವಜಾಗೊಳಿಸಲಾಗಿದೆ. ಹೊರ ಗುತ್ತಿಗೆ ಏಜೆನ್ಸಿ ಬಂದ ಮೇಲೆ ಕೆಲವರನ್ನು ಮತ್ತೇ ತೆಗೆದುಕೊಳ್ಳಲಾಗಿದೆ, ಈ 8ಮಂದಿ ಒಳಗಡೆ ಬಂದರೆ ತಾವು ನಡೆಸುತ್ತಿರುವ ಭ್ರಷ್ಟಾಚಾರ ಬಯಲಾಗುತ್ತದೆ ಎಂಬ ಉದ್ದೇಶದಿಂದ ಇವರನ್ನು ಹೊರಗಿಡಲಾಗಿದೆ ಎಂದು ಆರೋಪಿಸಿದರು.
ಈಗ ಎಸ್‌ಎಸ್‌ಎಲ್‌ಸಿ ಪಾಸು ಎಂಬ ನಿಯಮ ಜಾರಿಗೊಳಿಸಿದ್ದಾರೆ, ಇದರ ಬಗ್ಗೆ ಸರ್ಕಾರದ ಆದೇಶದವಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು, ಈಗ ಡೀನ್ ಮಂಜುನಾಥ್ ಮತ್ತು ಸಿಬ್ಬಂದಿ ಮೇಲೆಯೇ ಎಫ್‌ಐಆರ್ ದಾಖಲಾಗಿದೆಯೆಲ್ಲಾ ಅವರೇನು ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಒಂದು ವಾರದೊಳಗೆ ವಜಾಗೊಂಡಿರುವ 8 ಮಂದಿಯನ್ನು ಮರು ನೇಮಕ ಮಾಡಿಕೊಳ್ಳದಿದ್ದರೆ ನೌಕರರ ಕುಟುಂಬ ಸಮೇತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಜನಾಂದೋಲನಗಳ ಮಹಾಮೈತ್ರಿಯ ರಾಜ್ಯ ಸಂಚಾಲಕ ಉಗ್ರನರಸಿಂಹೇಗೌಡ ಮಾತನಾಡಿ, ಸಿಮ್ಸ್ ಆಸ್ಪತ್ರೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ, ಇದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರೇ ಕಾರಣರಾಗಿದ್ದಾರೆ ಎಂದು ದೂರಿದರು.ಈ ವಿಷಯದ ಬಗ್ಗೆ 11 ಬಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರೂ, ಏನೂ ಕ್ರಮ ಕೈಗೊಂಡಿಲ್ಲ. ಲೋಕಸಭೆ ಚುನಾವಣೆಗೂ ಮುನ್ನ ಎಲ್ಲಾ ಕಡೆ ಸಂವಿಧಾನ ಪೀಠಿಕೆ ಓದಿಸಿ, ಈಗ ಮಗ ಗೆದ್ದ ಮೇಲೆ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು. ಸಚಿವ ಎಚ್.ಸಿ.ಮಹದೇವಪ್ಪ ತಮ್ಮ ಬಲಗೈ ಭಂಟನಾಗಿರುವ ಡೀನ್ ಮಂಜುನಾಥ್ ಅವರನ್ನು ಕರೆಯಿಸಿ ಈ ಸಮಸ್ಯೆ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಬಿ.ಮಹದೇವ, ಮಹೇಶ್, ಬೀರೇಗೌಡ, ಕುಮಾರ್, ಆದರ್ಶ ಇದ್ದರು.