ಕನ್ನಡಪ್ರಭ ವಾರ್ತೆ ಗುಡಿಬಂಡೆ
ಸರ್ಕಾರದಿಂದ ಜನರಿಗೆ ಅನೇಕ ಸೌಲಭ್ಯಗಳು ಸಿಗಲಿದ್ದು, ಅವುಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ಹಾಗೂ ಅರ್ಹರಿಗೆ ದೊರಕಿಸಿ ಕೊಡಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಶಾಸಕ ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕ ಸುಬ್ಬಾರೆಡ್ಡಿಯವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇಂದು ಸರ್ಕಾರದಿಂದ ರೈತರು ಹಾಗೂ ಜನಸಾಮಾನ್ಯರಿಗೆ ಅನೇಕ ಸೌಲಭ್ಯಗಳು ಬರುತ್ತಿವೆ. ಆದರೆ ಅವುಗಳು ಮಾಹಿತಿಯ ಕೊರತೆಯಿಂದ ಕೇವಲ ಪ್ರಭಾವಿಗಳು ಹಾಗೂ ದಲ್ಲಾಳಿಗಳ ಪಾಲಾಗುತ್ತಿವೆ. ಇದರಿಂದ ಅರ್ಹರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ನಂತರ ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಪಟ್ಟಿಯನ್ನು ತಿಂಗಳೊಳಗಾಗಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಏನಾದರೂ ಸಮಸ್ಯೆಗಳಿದ್ದರೆ ನನಗೆ ತಿಳಿಸಿ, ಅದನ್ನು ನಾವು ಬಗೆಹರಿಸುತ್ತೇವೆ. ನನ್ನ ತಾಲೂಕಿನ ವ್ಯಾಪ್ತಿಯಲ್ಲಿ ಯಾರೂ ನಿವೇಶನವಿಲ್ಲದೇ ಇರಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತ ಗತಿಯಲ್ಲಿ ಕೆಲಸ ಮಾಡಬೇಕೆಂದು ತಾಪಂ ಇಒ ನಾಗಮಣಿ ಹಾಗೂ ಪಿಡಿಒಗಳಿಗೆ ಸೂಚನೆ ನೀಡಿದರು.ನಂತರ ಸಾಮಾಜಿಕ ಹಾಗೂ ವಲಯ ಅರಣ್ಯ ಇಲಾಖೆಗಳ ಪ್ರಗತಿಯನ್ನು ಪರಿಶೀಲನೆ ಮಾಡಿ, ಶಾಲಾ ಆವರಣ, ಕಾಲೇಜುಗಳ ಬಳಿ ಸೇರಿದಂತೆ ಸರ್ಕಾರದ ಜಾಗದಲ್ಲಿ ಸಸಿಗಳನ್ನು ನೆಟ್ಟಾಗ ಅನುಕೂಲವಾಗುತ್ತದೆ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದರೆ ಅಂತಹವರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಬ್ಬಾಳಿಕೆ ಮಾಡಬಾರದು ಎಂದು ತಿಳಿಸಿದರು.
ಇನ್ನೂ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚೆಗೆ ರಾಜಕೀಯ ಹೆಚ್ಚಾಗಿದ್ದು, ಆಸ್ಪತ್ರೆಯ ಹೆಸರು ಹಾಳಾಗುತ್ತಿದೆ. 24 ಗಂಟೆಗಳಿಗೆ ಒಬ್ಬ ವೈದ್ಯರಂತೆ ಕೆಲಸ ಮಾಡುತ್ತಾರೆ. ಆಸ್ಪತ್ರೆಯಲ್ಲಿ 10 ಮಂದಿ ವೈದ್ಯರಿದ್ದರೂ ಸಮಸ್ಯೆ ಏಕೆ ಆಗುತ್ತದೆ ಎಂಬುದು ತಿಳಿದಿಲ್ಲ. ಇತ್ತೀಚಿಗಷ್ಟೇ ರಾತ್ರಿ ಸಮಯದಲ್ಲಿ ವೈದ್ಯರ ಸಮಸ್ಯೆಯಿಂದ ಓರ್ವ ಮೃತಪಟ್ಟಿದ್ದ ಎಂಬ ದೂರು ನನಗೂ ಬಂದಿದೆ. ಕರ್ತವ್ಯವನ್ನು ನಿರ್ಲಕ್ಷಿಸುವ ವೈದ್ಯರು ಕೆಲಸ ಬಿಟ್ಟು ಬೇರೆ ಕಡೆಗೆ ಹೋಗಲಿ ಎಂದು ತಾಕೀತು ಮಾಡಿ, ಶೀಘ್ರದಲ್ಲೇ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಲಾಗುತ್ತದೆ, ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.ತಾಲೂಕಿನ ಹಲವು ರಸ್ತೆಗಳು ಟಿಪ್ಪರ್ ಗಳ ಹಾವಳಿಯಿಂದ ಹಾಳಾಗುತ್ತಿವೆ. ಕ್ವಾರಿ, ಕ್ರಷರ್ ಗಳಲ್ಲಿ ಬ್ಲಾಸ್ಟ್ ಮಾಡುವುದು ಸಹ ಜಾಸ್ತಿಯಾಗಿದೆ. ಆದ್ದರಿಂದ ತಹಸೀಲ್ದಾರ್ ರವರು ಕೂಡಲೇ ತಾಲೂಕಿನ ವ್ಯಾಪ್ತಿಯಲ್ಲಿ ಕ್ರಷರ್ ಹಾಗೂ ಕ್ವಾರಿಗಳ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದರು. ಉಳಿದಂತೆ ಕೃಷಿ, ತೋಟಗಾರಿಕೆ, ಬೆಸ್ಕಾಂ, ಸಮಾಜ ಕಲ್ಯಾಣ, ಬಿಸಿಎಂ, ನೀರಾವರಿ, ಪಿಡ್ಬ್ಲ್ಯೂಡಿ, ಶಿಕ್ಷಣ ಸೇರಿ ಹಲವು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಇನ್ನೂ ಸಭೆಗೆ ಗೈರಾದ ಮೀನುಗಾರಿಕೆ, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ, ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯ ನೋಟಿಸ್ ನೀಡುವಂತೆ ತಾಪಂ ಇಒ ನಾಗಮಣಿಯವರಿಗೆ ತಿಳಿಸಿದರು.ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾಪಂ ಇಒ ನಾಗಮಣಿ, ಸರ್ಕಲ್ ಇನ್ಸ್ ಪೆಕ್ಟರ್ ನಯಾಜ್ ಸೇರಿದಂತೆ ಕೆಡಿಪಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.