ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸಿ: ಎಡಿಸಿ ಡಾ.ಎಚ್.ಎಲ್.ನಾಗರಾಜು

KannadaprabhaNewsNetwork | Published : Jun 28, 2024 12:56 AM

ಸಾರಾಂಶ

ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುವ ಕಾರ್‍ಯಕ್ರಮಗಳನ್ನು ಸಮುದಾಯದ ಕಟ್ಟ ಕಡೆಯ ಪ್ರಜೆಗೂ ತಲುಪಿಸುವಂತಾಗಲು ಹಲವಾರು ಮಾರ್ಗೋಪಾಯಗಳನ್ನು ನೀಡಿದೆ. ಗ್ರಾಮಗಳಲ್ಲಿನ ಸಿಎಸ್‌ಸಿ, ಗ್ರಾಮ ಒನ್ ಸೇರಿದಂತೆ ಇತರೆ ಸಂಸ್ಥೆಗಳು ಜವಾಬ್ದಾರಿಯುತವಾಗಿ ಕಾರ್‍ಯ ನಿರ್ವಹಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಸ್ವಯಂ ಸೇವಾ ಸಂಸ್ಥೆಗಳು ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ತಾಲೂಕಿನ ಮಂಗಲ ಗ್ರಾಮದಲ್ಲಿ ಭಾರತ ಸರ್ಕಾರದ ದತ್ತೋಪಂತ್ ತೆಂಗಡಿ, ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ, ಪರಿಸರ ರೂರಲ್ ಡವಲಪ್‌ಮೆಂಟ್ ಸೊಸೈಟಿ, ಗ್ರಾಪಂ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ನಡೆದ ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳ ಮೂರು ದಿನಗಳ ಜಾಗೃತಿ ಮತ್ತು ನೋಂದಣಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ತೊಡಗಿರುವ ಜಿಲ್ಲೆಯ ರೈತ ಬಂಧುಗಳಿಗೆ ಗ್ರಾಮದಲ್ಲಿಯೇ ಸರ್ಕಾರದ ವಿವಿಧ ಯೋಜನೆ ತಲುಪಿಸುವ ಕಾಯಕ ತುಂಬಾ ಉತ್ತಮವಾಗಿದೆ ಎಂದರು.

ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುವ ಕಾರ್‍ಯಕ್ರಮಗಳನ್ನು ಸಮುದಾಯದ ಕಟ್ಟ ಕಡೆಯ ಪ್ರಜೆಗೂ ತಲುಪಿಸುವಂತಾಗಲು ಹಲವಾರು ಮಾರ್ಗೋಪಾಯಗಳನ್ನು ನೀಡಿದೆ. ಗ್ರಾಮಗಳಲ್ಲಿನ ಸಿಎಸ್‌ಸಿ, ಗ್ರಾಮ ಒನ್ ಸೇರಿದಂತೆ ಇತರೆ ಸಂಸ್ಥೆಗಳು ಜವಾಬ್ದಾರಿಯುತವಾಗಿ ಕಾರ್‍ಯ ನಿರ್ವಹಿಸಬೇಕಾಗಿದೆ ಎಂದರು.

ಬಹುತೇಕ ಹಳ್ಳಿಗಳಲ್ಲಿ 5 ಎಕರೆಗಿಂತ ಕಡಿಮೆ ಇರುವ ಮಂದಿಯೇ ಹೆಚ್ಚಿದ್ದು, ತುಂಡು ಭೂಮಿಗಳಲ್ಲಿ ಆದಾಯೋತ್ಪನ್ನ ಚಟುವಟಿಕೆಗಳನ್ನು ಮಾಡುತ್ತಾ ಜೀವನ ಮಟ್ಟದ ಸುಧಾರಿಸುತ್ತಿರುವ ಇವರ ಜೀವನ ಶೋಚನೀಯ ಸ್ಥಿತಿಯಲ್ಲಿದೆ. ಸ್ವಾವಲಂಭಿ ಜೀವನವನ್ನು ಸಾಗಿಸುವಂತಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರನ್ನು ಗಮನದಲ್ಲಿಟ್ಟು ರೂಪಿಸುವ ಯೋಜನೆ ತಲುಪಿಸುವಂತಹ ಕಾರ್‍ಯವನ್ನು ಪಾರದರ್ಶಕವಾಗಿ ಮಾಡಬೇಕು ಎಂದರು.

ಇ-ಶ್ರಮ್, ಸಂಧ್ಯಾ ಸುರಕ್ಷಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಶ್ರಮಿಕ್ ಕಾರ್ಡ್, ಆಯಿಷ್ಮಾನ್ ಭಾರತ್ ಕಾರ್ಡ್ ವಿತರಣೆ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಈ ಶಿಬಿರದಿಂದ ಯಶಸ್ಸು ಸಿಗುವಂತಾಗಬೇಕು ಎಂದರು.

ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಎಪಿಜೆ ಅಬ್ದುಲ್ ಕಲಾಂ ಅವರ ಗ್ರಾಮೀಣ ಪುರ ಯೋಜನೆಯು ನಗರ ಪ್ರದೇಶದ ಸಕಲ ಸವಲತ್ತು ಹೊಂದುವ ಹಾಗೇ ಸ್ವಾವಲಂಭಿಯನ್ನು ಕಾಪಾಡಲು ಕರ್ನಾಟಕ ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕಿದೆ ಎಂದರು.

ಪ್ರತೀ ಗ್ರಾಮಗಳಲ್ಲೂ ಕೂಡ ಶಿಕ್ಷಣ, ಆರೋಗ್ಯ, ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಪರಿಚಯಿಸಿ ಅನುಷ್ಠಾನಗೊಳಿಸಲು ಉಚಿತವಾಗಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವೃಂದ, ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ ಶಿಕ್ಷಣಾಧಿಕಾರಿ ಸತೀಶ್‌ಕುಮಾರ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಅರುಣ್‌ಕುಮಾರ್, ಜಿಲ್ಲಾ ಉದ್ಯೋಗಾಧಿಕಾರಿ ಕನ್ನಯ್ಯಕುಮಾರ್, ಪರಿಸರ ಸಂಸ್ಥೆ ಕಾರ್‍ಯದರ್ಶಿ ಕೆ.ಪಿ.ಅರುಣಕುಮಾರಿ, ಪಿಡಿಒ ಕೃಷ್ಣೇಗೌಡ, ಗ್ರಾಪಂ ಸದಸ್ಯರಾದ ನವೀನ್, ಶಿವಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ವಿ. ಶಂಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Share this article