ಕನ್ನಡಪ್ರಭ ವಾರ್ತೆ ಅರಸೀಕೆರೆ
ಒಕ್ಕಲಿಗರ ಸಂಘ ಹಾಗೂ ತಾಲೂಕು ಆಡಳಿತದಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ 515ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಆಗಿನ ಕಾಲದಲ್ಲೇ ಆಧುನಿಕ ಪರಿಕಲ್ಪನೆಯಲ್ಲಿ ಮಹಾನಗರವನ್ನು ನಿರ್ಮಿಸಿದ್ದರು. ಕೆಂಪೇಗೌಡರು ಆ ಕಾಲದಲ್ಲೇ ಬೆಂಗಳೂರಿನಲ್ಲಿ ದೇವಾಲಯಗಳು ಮತ್ತು ಸುಸಜ್ಜಿತ ನೀರಿನ ಜಲಾಶಯಗಳನ್ನು ನಿರ್ಮಿಸಿದ್ದರು. ಸರ್ಕಾರವು ಕೆಂಪೇಗೌಡರೆಂಬ ಈ ಯುಗಪುರುಷನ ಜನ್ಮದಿನ ಆಚರಿಸುತ್ತಿರುವುದು ಇಂದಿನ ಪೀಳಿಗೆಗೆ ಅವರ ಮಹಾನ್ ಕಾರ್ಯಗಳನ್ನು ತಿಳಿಯಲು ಸಹಕಾರಿಯಾಗಿದೆ ಎಂದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಆರ್. ಅನಂತ ಕುಮಾರ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಎಲ್ಲಾ ಸಮುದಾಯಗಳ ವ್ಯಾಪಾರದ ಅನುಕೂಲಕ್ಕಾಗಿ ಪೇಟೆಗಳನ್ನು ನಿರ್ಮಿಸಿದ್ದರು. ಒಟ್ಟಾರೆ ಬೆಂಗಳೂರು ಎಂಬ ಮಹಾನಗರವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ, ಕೆಂಪೇಗೌಡರಿಗೆ ಸಲ್ಲುತ್ತದೆ. ಇಂದು ಅವರು ನಿರ್ಮಿಸಿರುವ ಬೆಂಗಳೂರು ನಗರವು ಕೋಟ್ಯಂತರ ಜನರು ನೆಮ್ಮದಿಯಿಂದ ಬದುಕುತ್ತಿರುವ ಆಶ್ರಯ ತಾಣವಾಗಿದೆ ಎಂದು ಶ್ಲಾಘಿಸಿದರು.ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಬೆಂಗಳೂರನ್ನು 500 ವರ್ಷಗಳ ಹಿಂದೆಯೇ ಜನ ಸಾಮಾನ್ಯರ ಅನುಕೂಲಕ್ಕಾಗಿ ಭವ್ಯವಾಗಿ ನಿರ್ಮಾಣ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಪರಿಸರ ಪ್ರೇಮಿಯಾಗಿ ಆಗಿನ ಕಾಲದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಸುಂದರ ನಗರ ನಿರ್ಮಿಸಿದ್ದರಿಂದ ಈಗಿನ ಆಧುನಿಕ ಕಾಲಕ್ಕೂ ಉಪಯೋಗವಾಗಿದೆ ಹೇಳಿದರು.