ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಿ: ನಲಿನ್ ಅತುಲ್

KannadaprabhaNewsNetwork | Published : Nov 1, 2024 12:00 AM

ಸಾರಾಂಶ

ಅಲ್ಪಸಂಖ್ಯಾತ ಸಮುದಾಯದವರ ಅಭಿವೃದ್ಧಿಗಾಗಿ ರೂಪಿಸಿರುವ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು.

ಅಲ್ಪಸಂಖ್ಯಾತರಿಗೆ ಪಿಎಂ ಹೊಸ 15 ಅಂಶಗಳ ಕಾರ್ಯಕ್ರಮ । 2ನೇ ತ್ರೈಮಾಸಿಕ ಪ್ರಗತಿ ಪರಿಶಿಲನಾ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಡಿ ಅಲ್ಪಸಂಖ್ಯಾತರಿಗೆ ಇರುವ ವಿವಿಧ ಯೋಜನೆಗಳ ಸೌಲಭ್ಯವನ್ನು ಆ ಸಮುದಾಯದ ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದ್ದಾರೆ.

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2ನೇ ತ್ರೈಮಾಸಿಕ ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತ ಸಮುದಾಯದವರ ಅಭಿವೃದ್ಧಿಗಾಗಿ ರೂಪಿಸಿರುವ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಅಲ್ಪಸಂಖ್ಯಾತರಾದ ಮುಸ್ಲಿಂ, ಬೌದ್ಧ, ಜೈನ್, ಕ್ರಿಶ್ಚಿಯನ್, ಸಿಖ್ ಹಾಗೂ ಪಾರ್ಸಿ ಸಮುದಾಯದ ಅರ್ಹ ಫಲಾನುಭವಿಗಳಿಗೆ ಇಲಾಖಾವಾರು ಇರುವ ಸೌಲಭ್ಯ ಒದಗಿಸಿ. ಕೃಷಿ, ತೋಟಗಾರಿಕೆ, ಪಶು, ರೇಷ್ಮೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿ ಮುಂತಾದ ಇಲಾಖೆಗಳಲ್ಲಿ ವಿವಿಧ ಯೋಜನೆಗಳಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕು. ಸರ್ಕಾರ ನಿಗದಿಪಡಿಸಿದ ಶೇಕಡಾವಾರು ಮೀಸಲಾತಿಗೆ ತಕ್ಕಂತೆ ಅರ್ಹರಿಗೆ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಣೆ:

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಕೊಪ್ಪಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ಮಾದಿನೂರಿನ ಪ್ರಶಾಂತ ಸುಬ್ಬಣ್ಣ ದೇಸಾಯಿ, ಕುಷ್ಟಗಿಯ ಮೊಹ್ಮದ್ ನಜೀರದ್ದೀನ್ ಎ. ಮೂಲಿಮನಿ, ಕೊಪ್ಪಳ ನಗರದ ಮೆಹಬೂಬ ಪಾಶಾ ಎಂ. ಮಾನ್ವಿ, ಕಾರಟಗಿಯ ಸಮೀನಾಬೇಗಂ ಮೆಹಬೂಬಪಾಷಾ, ಯರಡೋಣ ಗ್ರಾಮದ ಎಂ. ಮದರವಲಿ ಸಾಬ ಆರ್. ಹಾಗೂ ಸಿದ್ದಾಪುರದ ಎಂ.ಡಿ. ಸಿರಾಜ್ ಎಚ್.ಎಸ್. ಅವರನ್ನು ಸರ್ಕಾರ ನಾಮ ನಿರ್ದೇಶನಗೊಳಿಸಿದ್ದು, ನೂತನ ಸಮಿತಿಯ ಸದಸ್ಯರಿಗೆ ಜಿಲ್ಲಾಧಿಕಾರಿ ಪ್ರಮಾಣ ಪತ್ರ ವಿತರಣೆ ಮಾಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ ಕೊಕರೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಕೊಪ್ಪಳ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಅಧಿಕಾರೇತರ ಸದಸ್ಯರು ಉಪಸ್ಥಿತರಿದ್ದರು.

Share this article