ಹೊಸಪೇಟೆ: ತಾಲೂಕಿನ ಕಮಲಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದ ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿದ ನಂತರ ಮೊದಲ ಬಾರಿ ಶುಕ್ರವಾರ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮಹಿಳೆಯರು ಹೊಸಪೇಟೆ ನಗರಕ್ಕೆ ಬರುವುದನ್ನು ತಪ್ಪಿಸಿದಂತಾಗಿದೆ. ಸದ್ಯ ಶಸ್ತ್ರಚಿಕಿತ್ಸೆ ಹೆರಿಗೆಗೆ ಚಾಲನೆ ಸಿಕ್ಕಿದ್ದು, ಈ ಭಾಗದ ಜನತೆಗೆ ನಿರಾಳ ಭಾವ ಮೂಡಿದೆ.ಕಮಲಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಆಡಳಿತ ವೈದ್ಯಾಧಿಕಾರಿ ಡಾ.ಯೋಗಾನಂದ ರೆಡ್ಡಿ ನೇತೃತ್ವದಲ್ಲಿ ಶುಕ್ರವಾರ ಮೊದಲ ಟ್ಯುಬೆಕ್ಟಮಿ ಶಸ್ತ್ರ ಚಿಕಿತ್ಸೆಯನ್ನು ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ.ಮೆಹಬೂಬಿ, ಅನಸ್ತೇಸಿಯಾ ತಜ್ಞ ಡಾ.ಪ್ರಶಾಂತ್ ಯಶಸ್ವಿಯಾಗಿ ನಡೆಸಿದ್ದಾರೆ.
ಪ್ರಸ್ತುತ ಕಮಲಾಪುರ ಆಸ್ಪತ್ರೆಯಲ್ಲಿ ಜನರಲ್ ಫಿಜಿಷಿಯನ್ ಡಾ.ಯೋಗಾನಂದ ರೆಡ್ಡಿ, ಮಕ್ಕಳ ತಜ್ಞ ಡಾ. ಶ್ರೀನಿವಾಸ್, ದಂತ ತಜ್ಞೆ ಡಾ.ಸಪ್ನಾ ಕಟ್ಟಿ ಕೂಡ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಮುಂದಿನ ದಿನಗಳಲ್ಲಿ ಹೆರಿಗೆ ಸೇರಿದಂತೆ ಇತರೆ ಶಸ್ತ್ರಚಿಕಿತ್ಸೆಗೆ ಸೇವೆ ಹಾಗೂ ಆಯುಷ್ ಸೇವೆ ಕೂಡ ಸಿಗಲಿದೆ. ಸಾರ್ವಜನಿಕರು ಈ ಸಮುದಾಯ ಆಯೋಗ್ಯ ಕೇಂದ್ರದ ಸದುಪಯೋಗ ಪಡೆಯಬೇಕು ಎಂದು ಟಿಎಚ್‌ಒ ಡಾ.ವಿನೋದ್ ಕುಮಾರ್ ತಿಳಿಸಿದ್ದಾರೆ.