ಕುಮಟಾ: ಭಾರತ ಸ್ವಾತಂತ್ರ‍್ಯ ಹೋರಾಟದಲ್ಲಿ ವಂದೇಮಾತರಂ ಗೀತೆ ಅತ್ಯಂತ ಮಹತ್ವದ ಸ್ಥಾನ ಹೊಂದಿದೆ ಎಂದು ಬಿಜೆಪಿ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಹಸಂಚಾಲಕ ಎಂ.ಜಿ. ಭಟ್ ಕೂಜಳ್ಳಿ ಹೇಳಿದರು.
ವಂದೇ ಮಾತರಂ ಗೀತೆ ರಚಿಸಿ ೧೫೦ ವರ್ಷವಾದ ಹಿನ್ನೆಲೆಯಲ್ಲಿ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು. ವಂದೇಮಾತರಂ ಗೀತೆಯು ಕೋಟ್ಯಂತರ ಸ್ವಾತಂತ್ರ‍್ಯ ಹೋರಾಟಗಾರರಿಗೆ ಸ್ಫೂರ್ತಿ, ನವಚೈತನ್ಯ, ತ್ಯಾಗ ಮನೋಭಾವ ತುಂಬಿ, ದೇಶಭಕ್ತಿಯ ಕಿಚ್ಚನ್ನು ಹಚ್ಚಿದ ಗೀತೆ. ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಓರ್ವ ದೇಶಭಕ್ತರಾಗಿದ್ದು, ೧೮೭೫ರಲ್ಲಿ ವಂದೇ ಮಾತರಂ ಗೀತೆಯನ್ನು ಬರೆದರು. ಈ ಗೀತೆಯು ಪ್ರತಿ ಮನಮನೆಯಲ್ಲೂ ದೇಶಭಕ್ತಿಯ ಕಿಚ್ಚು ಹಚ್ಚಿದ್ದರಿಂದಲೇ ಬ್ರಿಟಿಷ್ ಆಳ್ವಿಕೆ ನಲುಗಿ ಹೋಯಿತು. ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯಾಗಬಲ್ಲ ಎಲ್ಲ ಅರ್ಹತೆ ಇದ್ದರೂ ಕಾಂಗ್ರೆಸಿಗರ ಮುಸ್ಲಿಂ ಓಲೈಕೆಯ ಪರಿಣಾಮ ರಾಷ್ಟ್ರಗೀತೆಯಾಗಲು ಸಾಧ್ಯವಾಗಲಿಲ್ಲ. ಆದರೆ ಅಂದಿನಿಂದ ಇಂದಿನವರೆಗೂ ದೇಶಪ್ರೇಮಿಗಳು ಈ ಗೀತೆಯನ್ನು ರಾಷ್ಟ್ರಗೀತೆಯಂತೆಯೇ ಪರಿಗಣಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು ಆ ಗೀತೆಗೆ ಬಂದ ಗೌರವವಾಗಿದೆ ಎಂದರು.ನಮ್ಮ ರಾಷ್ಟ್ರಗೀತೆ ಜನಗಣಮನಕ್ಕೆ ಸರಿಸಮಾನವಾದ ಸ್ಥಾನವನ್ನು ವಂದೇ ಮಾತರಂ ಗೀತೆ ಹೊಂದಿದೆ. ಈ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೇಳಿಕೆ ಜನಗಣಮನ ಗೀತೆಯು ಒಬ್ಬ ಬ್ರಿಟಿಷ್ ಅಧಿಕಾರಿಯ ಬಗ್ಗೆ ಹೊಗಳಿ ಬರೆದಿದ್ದು ಎಂಬುದು ಸತ್ಯ. ಈ ಸತ್ಯವನ್ನು ಸದಾಕಾಲ ಮುಚ್ಚಿಡಲು ಸಾಧ್ಯವಿಲ್ಲ. ಆದರೆ ನಮ್ಮ ಸಂವಿಧಾನಕ್ಕೆ ಬದ್ಧವಾಗಿ ನಾವು ಜನಗಣಮನಕ್ಕೆ ರಾಷ್ಟ್ರಗೀತೆಯ ಸಕಲ ಗೌರವವನ್ನು ನೀಡುತ್ತಿದ್ದೇವೆ. ಹೀಗಿರುವಾಗ ಸಂವಿಧಾನಕ್ಕೆ ಅವಮಾನ ಮಾಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸಿಗರು ಉದ್ದೇಶಪೂರ್ವಕ ಸಮಾಜಘಾತುಕ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರು ಕೆ. ಶೆಟ್ಟಿ ಮಾತನಾಡಿ, ವಂದೇ ಮಾತರಂ ಗೀತೆಗೆ ೧೫೦ ವರ್ಷ ತುಂಬಿದ್ದು ಇಡೀ ಭಾರತವು ಹೆಮ್ಮೆ ಪಡುವಂತಹ ಗೀತೆಯಾಗಿದೆ. ದೇಶಭಕ್ತಿಯನ್ನು ಪ್ರತಿಯೊಬ್ಬರಲ್ಲೂ ಸ್ಫುರಿಸುವಂತಹ ಶಕ್ತಿಗೀತೆಯಾಗಿದೆ. ವಂದೇಮಾತರಂ ಗೀತೆಗೆ ಎಲ್ಲೆಡೆಯೂ ಪ್ರಾಶಸ್ತ್ಯ ಸಿಗಬೇಕು ಎಂದರು.ಕುಮಟಾ ಮಂಡಲಾಧ್ಯಕ್ಷ ಜಿ.ಐ. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ ಸ್ವಾಗತಿಸಿದರು. ಗೋಕರ್ಣ ಮಂಡಲಾಧ್ಯಕ್ಷ ಗಣೇಶ ಪಂಡಿತ ವಂದಿಸಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಾ ಶೇಟ್ ಇನ್ನಿತರರು ಇದ್ದರು.