ಹೊಸಪೇಟೆ: ವಕೀಲರ ವಿರುದ್ಧ ರಾಮನಗರ ಪೊಲೀಸರು ಸಲ್ಲಿಸಿದ ಸುಳ್ಳು ಪ್ರಕರಣ ಹಿಂಪಡೆಯಲು ಮತ್ತು ಪಿಎಸ್ಐ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಇಲ್ಲಿನ ವಕೀಲರ ಸಂಘದದಿಂದ ಗುರುವಾರ ಕಲಾಪ ಬಹಿಷ್ಕರಿಸಿ ನಗರದಲ್ಲಿ ಪ್ರತಿಭಟನೆ ಮಾಡಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ. ಪ್ರಹ್ಲಾದ್ ಮಾತನಾಡಿ, ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಸಕಾರಣವಿಲ್ಲದೆ 50 ಜನ ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ವಕೀಲರ ವಿರುದ್ಧವೇ ಪೊಲೀಸರು ಈ ರೀತಿಯ ಸುಳ್ಳು ಕೇಸುಗಳನ್ನು ದಾಖಲಿಸುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಕಾನೂನು ರಕ್ಷಣೆ ಮಾಡುವ ಮತ್ತು ಪಾಲನೆ ಮಾಡುವ ವಕೀಲರ ಪರಿಸ್ಥಿತಿ ಹೀಗಾದರೆ ಸಾಮಾನ್ಯ ಜನರ ಪಾಡೇನು? ಇಂತಹ ವಾತಾವರಣ ಸೃಷ್ಟಿಸಿದ ರಾಮನಗರ ಪೊಲೀಸರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈಗಾಗಲೇ ವಕೀಲರ ಮೇಲೆ ದಾಖಲಿಸಿದ ಸುಳ್ಳು ಪ್ರಕರಣವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಶ್ರೀನಿವಾಸಮೂರ್ತಿ, ಉಪಾಧ್ಯಕ್ಷ ಎಚ್.ಎಂ. ಮಂಜುನಾಥಸ್ವಾಮಿ, ಜಂಟಿ ಕಾರ್ಯದರ್ಶಿ ವಿ. ರವಿಕುಮಾರ, ವಕೀಲರಾದ ಎ. ಮರಿಯಪ್ಪ, ಎಸ್.ವಿ. ಜವಳಿ, ಡಿ. ರವಿರಾಜ್. ಜಿ. ವೀರಭದ್ರಪ್ಪ, ಜೆ. ಪ್ರಹ್ಲಾದ್ ಶೆಟ್ಟಿ, ಎ. ಕರುಣಾನಿಧಿ, ಬಳ್ಳಾರಿ ಜಿ. ಬಸವರಾಜ್, ಐ. ಪರಶುರಾಮ, ಬಿ.ಸಿ. ಮಹಾಂತೇಶ, ನೋಟರಿಗಳಾದ ಚಂದ್ರಶೇಖರ ವಿ. ಯಲಗೊಡು, ತಾರಿಹಳ್ಳಿ ಹನುಮಂತಪ್ಪ, ಎನ್.ಎಂ. ಸೌದಾಗರ್ ಇತರರಿದ್ದರು.