ಯಕ್ಷಗಾನ ವೇಷಕ್ಕೆ ಅವಮಾನ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Sep 06, 2024, 01:01 AM IST
ಯಕ್ಷ5 | Kannada Prabha

ಸಾರಾಂಶ

ಯಕ್ಷ ವೇಷಭೂಷಣಗಳನ್ನು ಧರಿಸಿ ಭಿಕ್ಷಾಟನೆ ಮಾಡುವುದು, ಅಸಹ್ಯಕರವಾಗಿ ವರ್ತನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ದ.ಕ. - ಉಡುಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ವತಿಯಿಂದ ಉಡುಪಿ ಜಿಲ್ಲಾ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕರಾವಳಿಯ ಶ್ರೇಷ್ಠ ಕಲೆಗಳಲ್ಲಿ ಯಕ್ಷಗಾನವು ಒಂದು. ಈ ಕಲೆಗೆ ಸಂಬಂಧಿಸಿದ ಯಕ್ಷ ವೇಷಭೂಷಣಗಳನ್ನು ಧರಿಸಿ ಭಿಕ್ಷಾಟನೆ ಮಾಡುವುದು, ಅಸಹ್ಯಕರವಾಗಿ ವರ್ತನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ದ.ಕ. - ಉಡುಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ವತಿಯಿಂದ ಉಡುಪಿ ಜಿಲ್ಲಾ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಈ ಬಗ್ಗೆ ಪ್ರಕೋಷ್ಠದ ದ.ಕ. ಜಿಲ್ಲಾ ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಸೇರಿದಂತೆ ವಿವಿಧ ಸಭೆ ಸಮಾರಂಭಗಳಲ್ಲಿ ಯಕ್ಷಗಾನ ವೇಷಗಳನ್ನು ಧರಿಸಿಕೊಂಡು ಕಲೆಗೆ ಅಪಮಾನ ಮಾಡುತ್ತಿರುವುದು ವೃತ್ತಿಪರ ಕಲಾವಿದರಿಗೆ ತುಂಬಾ ನೋವುಂಟು ಮಾಡಿದೆ. ಯಕ್ಷಗಾನದ ವೇಷಭೂಷಣ, ಬಣ್ಣಗಾರಿಕೆಗೆ ತನ್ನದೇ ಆದ ಧಾರ್ಮಿಕ ಮಹತ್ವವಿದೆ‌. ಅದನ್ನು ಮರೆತು ಈ ರೀತಿಯಲ್ಲಿ ಕಲೆಯ ಗರಿಮೆಗೆ ಧಕ್ಕೆ ತರುತ್ತಿರುವ ಕಾರ್ಯಗಳು ಆಗುತ್ತಿರುವುದು ಬೇಸರ ತಂದಿದೆ ಎಂದವರು ತಿಳಿಸಿದರು.ಈ ಕುರಿತಂತೆ ಪ್ರಕೋಷ್ಠದ ವತಿಯಿಂದ ಎಸ್ಪಿಗೆ ಮನವಿ ಸಲ್ಲಿಸಿದಾಗ ಅವರು ತಕ್ಷಣ ಸ್ಪಂದಿಸಿ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಸುತ್ತೋಲೆ ಕಲಿಸಿ, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಕೋಷ್ಠದ ಉಡುಪಿ ಜಿಲ್ಲಾ ಸಹಸಂಚಾಲಕ ಪ್ರಕಾಶ್ ಕಾಮತ್, ಉಡುಪಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್ ಶ್ರೀನಿಧಿ ಹೆಗ್ಡೆ, ರಾಜಶೇಖರ್, ಸುರೇಂದ್ರ ಪಣಿಯೂರು ಉಪಸ್ಥಿತರಿದ್ದರು.------

ಅವಮಾನ ಕಂಡುಬಂದರೆ 112ಕ್ಕೆ ಕರೆ ಮಾಡಿ

ಯಕ್ಷಗಾನ ವೇಷಭೂಷಣಗಳು ಹಾಗೂ ಪರಿಕರಗಳನ್ನು ಬಾಡಿಗೆ ನೀಡುತ್ತಿರುವ ಸಂಸ್ಥೆಗಳು ಕಲಾವಿದರ ನೋವನ್ನು ಅರ್ಥಮಾಡಿಕೊಳ್ಳಬೇಕು. ಇಂತಹ ಪರಿಕರಗಳನ್ನು ಬಾಡಿಗೆಗೆ ನೀಡಬಾರದು. ವೇಷಧಾರಿಗಳಿಂದ ಅಸಭ್ಯ ವರ್ತನೆ ಕಂಡುಬಂದಲ್ಲಿ ಸಾರ್ವಜನಿಕ ಸ್ಥಳೀಯ ಪೊಲೀಸ್ ಠಾಣೆ ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿದರು.

PREV