ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನಲ್ಲಿರುವ ಅನೇಕ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ಸರ್ಕಾರದಿಂದ ಮಾನ್ಯತೆ ಪಡೆಯದೆ, ಶಿಕ್ಷಣ ಇಲಾಖೆಯ ನಿಯಮಗಳನ್ನೂ ಗಾಳಿಗೆ ತೂರಿ ರಾಜಾರೋಷವಾಗಿ ನಾಯಿಕೊಡೆಯಂತೆ ತಲೆ ಎತ್ತಿವೆ. ಇದಕ್ಕೆ ಶಿಕ್ಷಣ ಇಲಾಖೆಯ ಕೆಲ ಅಧಿಕಾರಿಗಳ ಕುಮ್ಮಕ್ಕು ಕಾರಣ ಎಂದು ಒಕ್ಕೂಟ ಆರೋಪಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆರ್.ಚನ್ನಬಸ್ಸು ವನದುರ್ಗ, ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ತಾಲೂಕಿನಲ್ಲಿ ಅನಧಿಕೃತವಾಗಿ ಕೋಚಿಂಗ್ ಸೆಂಟರ್‌ಗಳು ರಾಜಾರೋಷವಾಗಿ ನಡೆಯುತ್ತಿವೆ. ನವೋದಯ, ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ, ಆದರ್ಶ, ಸೈನಿಕ ಸೇರಿದಂತೆ ಇತರೆ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಕೊಡಿಸಲಾಗುವುದು ಎಂದು ಭರವಸೆ ನೀಡಿ ಮುಗ್ಧ ಪಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.ಎಕ್ಸಲೆಂಟ್ ನವೋದಯ ತರಬೇತಿ ಕೇಂದ್ರ, ವಿದ್ಯಾದೀಪ (ಗಬ್ಬೂರು) ನವೋದಯ ತರಬೇತಿ ಕೇಂದ್ರ, ಜೀನಿಯಸ್ ತರಬೇತಿ ಕೇಂದ್ರ ಹಾಗೂ ಅಲ್ಲಮ ಪ್ರಭು (ಗಬ್ಬೂರ) ವಡಗೇರಾ ಕೇಂದ್ರಗಳು ಸೇರಿದಂತೆ ಇನ್ನು ಹಲವಾರು ಕೋಚಿಂಗ್ ಸೆಂಟರ್‌ಗಳು ತರಬೇತಿ ನೀಡುತ್ತಿವೆ. ಅನಧಿಕೃತ ತರಬೇತಿ ಕೇಂದ್ರಗಳಲ್ಲಿ ಸರಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳ ಮಕ್ಕಳು ತರಬೇತಿ ಕೇಂದ್ರಕ್ಕೆ ಹೋಗುತ್ತಿರುವುದರಿಂದ ಸರಕಾರಿ ಮತ್ತು ಖಾಸಗಿ ಶಾಲೆಗಳ ದಾಖಲಾತಿ ಕಡಿಮೆಯಾಗುತ್ತಿದೆ ಎಂದರು.
ಈ ಕುರಿತು ಮನವಿ ಮಾಡಿದರೂ ಸಹಿತ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಹುಸಿ ಭರವಸೆ ನೀಡಿ, ಪೋಷಕರಿಂದ ದುಬಾರಿ ಹಣ ಪಡೆದು ಮಕ್ಕಳಿಗೆ, ವಿಶೇಷವಾಗಿ ಬಾಲಕಿಯರಿಗೆ ಸೂಕ್ತ ರಕ್ಷಣೆ ಇಲ್ಲದೇ ವಸತಿ ಶಾಲೆಗಳ ಮಕ್ಕಳ ಭವಿಷ್ಯದ ವಿಷಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದರು.