ತಾತ್ಕಾಲಿಕ ತಡೆ ಸಿಕ್ಕಿದ್ದಕ್ಕೆ ಯಾರೂ ಸಂತೋಷ ಪಡಬೇಕಾಗಿಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ಇದು ಅಂತ್ಯವಲ್ಲ, ಆರಂಭ ಎಂಬ ಪೋಸ್ಟರ್ಪ್ರಸಾದ್ ನಗರೆ
ಕನ್ನಡಪ್ರಭ ವಾರ್ತೆ ಹೊನ್ನಾವರತಾಲೂಕಿನಲ್ಲಿ ಆರಂಭಿಸಲು ಉದ್ದೇಶಿಸಲಾಗಿದ್ದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತಾತ್ಕಾಲಿಕವಾಗಿ ತಡೆ ಸಿಕ್ಕಿದೆ. ಹೀಗೆಂದ ಮಾತ್ರಕ್ಕೆ ಈ ಯೋಜನೆಯನ್ನೇ ಸರ್ಕಾರ ಕೈಬಿಟ್ಟಿದೆ ಎಂದಲ್ಲ. ತಾತ್ಕಾಲಿಕ ತಡೆ ಸಿಕ್ಕಿದ್ದಕ್ಕೆ ಯಾರೂ ಸಂತೋಷ ಪಡಬೇಕಾಗಿಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಯೋಜನೆಯ ಸಂಪೂರ್ಣ ರದ್ದತಿಗೆ ಗೆಜೆಟ್ ಅಧಿಸೂಚನೆಗೆ ಪಟ್ಟು ಹಿಡಿದಿದ್ದಾರೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧದ ಹೋರಾಟ ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಈ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಆಗ್ರಹಿಸಿರುವ ಪರಿಸರ ಕಾರ್ಯಕರ್ತರು ಮತ್ತು ಸ್ಥಳೀಯರು, ಸರಕಾರದಿಂದ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸುವವರೆಗೂ ತಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಹ್ಯಾಂಡ್ಸ್ ಆಫ್ ಶರಾವತಿ ಅಭಿಯಾನದ ಭಾಗವಾಗಿ, ಈ ಯೋಜನೆಯನ್ನು ರದ್ದುಪಡಿಸಲು ನಮಗೆ ಕೇವಲ ಭರವಸೆಗಳಲ್ಲ, ಬದಲಿಗೆ ಅಧಿಕೃತ ಗೆಜೆಟ್ ಅಧಿಸೂಚನೆ ಬೇಕು ಎಂದು ಹೋರಾಟಗಾರರು ಬಲವಾಗಿ ಆಗ್ರಹಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇದು ಅಂತ್ಯವಲ್ಲ, ಆರಂಭ ಎಂಬ ಬಲವಾದ ಸಂದೇಶದೊಂದಿಗೆ ಪೋಸ್ಟರ್‌ಗಳು ಹರಿದಾಡುತ್ತಿದ್ದು, ಯೋಜನೆಯಿಂದ ಶರಾವತಿ ಕಣಿವೆಯ ಪರಿಸರದ ಮೇಲೆ ಆಗುವ ಹಾನಿಯ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ. ನಮ್ಮ ಬೇಡಿಕೆ ಸಂಪೂರ್ಣವಾಗಿ ಈಡೇರುವವರೆಗೂ ನಾವು ಈ ಹೋರಾಟವನ್ನು ನಿಲ್ಲಿಸುವುದಿಲ್ಲ. ಇದು ನಮ್ಮ ಅಸ್ತಿತ್ವದ ಪ್ರಶ್ನೆ ಎಂದು ಹೋರಾಟಗಾರರು ತಿಳಿಸಿದ್ದಾರೆ.ಜನಸಂಘಟನೆಗೆ ನಡೆದಿತ್ತು ಕ್ಯಾಂಪೇನ್:
ಇನ್ನು ಈ ಹಿಂದೆ ಗೇರುಸೊಪ್ಪಾದಲ್ಲಿ ನಡೆದಿದ್ದ ಅಹವಾಲು ಸಭೆಯ ಸಂದರ್ಭದಲ್ಲಿಯೂ ಇಲ್ಲಿನ ಯುವ ಸಮುದಾಯ ಸೋಷಿಯಲ್ ಮೀಡಿಯಾ ಕ್ಯಾಂಪೇನ್ ನಡೆಸಿತ್ತು. ಇದೀಗ ಮತ್ತೆ ಶರಾವತಿ ಯೋಜನೆ ವಿರುದ್ದ ಇದು ಅಂತ್ಯವಲ್ಲ, ಆರಂಭ ಎಂಬ ಪೋಸ್ಟರ್ ಫೇಸ್ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ದೊಡ್ಡಮಟ್ಟದ ಸದ್ದನ್ನು ಮಾಡಲು ಪ್ರಾರಂಭಿಸಿದೆ. ಜನಜಾಗೃತಿಯನ್ನು ಮಾಡಲು ಯುವ ಸಮೂದಾಯ, ವಿಜ್ಞಾನಿಗಳ ತಂಡ, ಪರಿಸರ ತಜ್ಞರು ಎಲ್ಲರೂ ಇದಕ್ಕೆ ಸಾಥ್ ನೀಡಿದ್ದಾರೆ.ಇದು ಪೂರ್ವ ನಿಯೋಜಿತ ತಂತ್ರ?:
ಅ.27, 2025ರಂದು ದೆಹಲಿಯಲ್ಲಿ ನಡೆದ ಫಾರೆಸ್ಟ್ ಅಡ್ವೈಸರಿ ಕಮಿಟಿ ಸಭೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ರದ್ದುಪಡಿಸಿಲ್ಲ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಮತ್ತು ವಿವರಗಳನ್ನು ಹಾಗೂ ಸಮಜಾಯಿಷಿ ಕೇಳಿದ್ದಾರೆ ಅಷ್ಟೇ. ಕೆಪಿಸಿಎಲ್ ಮತ್ತು ಕರ್ನಾಟಕ ಸರ್ಕಾರ ಸುಳ್ಳುಗಳ ಪ್ರಮಾಣ ಕಡಿಮೆ ಮಾಡಿ, ಮತ್ತೊಂದು ವರದಿ ಸಲ್ಲಿಸಲಿದೆ. ಬಹುಶಃ ಮುಂದಿನ ಸಭೆಯಲ್ಲಿ ಇದನ್ನು ಒಪ್ಪಿಕೊಂಡು ಅನುಮತಿ ನೀಡಬಹುದು. ಇದು ಪೂರ್ವ ನಿಯೋಜಿತ ತಂತ್ರ ಎಂದು ಪರಿಸರ ಹೋರಾಟಗಾರರು ಹೇಳುತ್ತಿದ್ದಾರೆ.ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಂಪೂರ್ಣವಾಗಿ ರದ್ದಾಗುವವರೆಗೂ ಹೋರಾಟವನ್ನು ಮುಂದುವರಿಸಲು ಹೋರಾಟಗಾರರು ದೃಢ ನಿರ್ಧಾರ ಕೈಗೊಂಡಿದ್ದಾರೆ. ಈಗ ಸಿಕ್ಕಿರುವ ತಡೆಯ ಬಗ್ಗೆ ಸಂಪೂರ್ಣವಾಗಿ ಸಮಾಧಾನದಲ್ಲಿ ಯೋಜನೆಯ ವಿರುದ್ದದ ಹೋರಾಟಗಾರರು ಇಲ್ಲ. ಯೋಜನೆಯನ್ನು ಶಾಶ್ವತವಾಗಿ ನಿಲ್ಲಿಸದ ಹೊರತು ಈ ಹೋರಾಟ ಅಂತ್ಯವಾಗುವ ಲಕ್ಷಣಗಳಿಲ್ಲ.