ದೇವನಹಳ್ಳಿ: ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಕೆಲಸದ ಒತ್ತಡ, ಬಾಕಿ ವೇತನ ಬಿಡುಗಡೆ ವಿಳಂಬ ಹಾಗೂ ಮಾನಸಿಕ ಕಿರುಕುಳದಿಂದಾಗಿ ಕೊತಬಾಲ ಗ್ರಾಪಂ ಪಿಡಿಒ ಮುಕ್ರಂ ಹುಸೇನ ಕರಡಿಗುಡ್ಡ ಅವರ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ಹಾಗೂ ರಾಜ್ಯದ ಎಲ್ಲಾ ಪಿಡಿಒಗಳ ಸೇವಾ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ದಿಲೀಪ್ ಕುಮಾರ್ ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅಮಾನತುಗೊಂಡು, ಕಳೆದ ೮-೯ ತಿಂಗಳಿಂದ ಅವರಿಗೆ ವೇತನವಾಗಿರಲಿಲ್ಲ. ಎರಡು ತಿಂಗಳ ಹಿಂದೆಯೇ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ವೇತನವಿಲ್ಲದೆ ಸಂಸಾರ ಸಾಗಿಸಲು ಕಷ್ಟವಾಗಿ, ಅವರ ಪತ್ನಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವಂತಹ ಚಿಂತಾಜನಕ ಸ್ಥಿತಿ ಅವರ ಕುಟುಂಬಕ್ಕೊದಗಿತ್ತು. ಮಕ್ಕಳ ಭವಿಷ್ಯದ ಚಿಂತೆ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಪ್ರಕರಣ ಕೇವಲ ಒಬ್ಬ ಅಧಿಕಾರಿಯ ದುರಂತವಲ್ಲ, ಬದಲಾಗಿ ಇಡೀ ರಾಜ್ಯದಲ್ಲಿ ಪಿಡಿಒಗಳು ಎದುರಿಸುತ್ತಿರುವ ನೈಜ ಮತ್ತು ಭೀಕರ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಗ್ರಾಮೀಣಾಭಿವೃದ್ಧಿಯ ಅಧಾರ ಸ್ತಂಭವಾಗಿರುವ ಪಿಡಿಒಗಳು ಇಂದು ಕೆಲಸದ ಒತ್ತಡದಲ್ಲಿ ನಲುಗಿ ಹೋಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.ಈ ವೇಳೆ ಪಿಡಿಒಗಳಾದ ಜಾಲಿಗೆ ಗ್ರಾಪಂ ಪಿಡಿಒ ಪ್ರಕಾಶ್, ಅಣ್ಣೇಶ್ವರ ಗಂಗರಾಜು, ಶಿವರಾಜು, ಕಾರ್ಯದರ್ಶಿಗಳ ಸಂಘದ ಅಧ್ಯಕ್ಷೆ ಪದ್ಮಮ್ಮ, ಬಸವಣ್ಣಗೌಡ ಪಾಟೀಲ್, ನಂದಿನಿ, ಮಹೇಶ್ ಜಿಲ್ಲೆಯ ಎಲ್ಲಾ ಪಿಡಿಒಗಳು ಕಾರ್ಯದರ್ಶಿಗಳು ಹಾಜರಿದ್ದರು.
ಬೆಂಗಳೂರು ಗ್ರಾಮಾಂತರ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್‌ಗೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ದಿಲೀಪ್ ಕುಮಾರ್ ಮನವಿ ಸಲ್ಲಿಸಿದರು.