ರಾಣಿಬೆನ್ನೂರು: ನೂತನ ಸಚಿವ ಸಂಪುಟದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡುವಂತೆ ಅಹಿಂದ ಕಾರ್ಯಕರ್ತರು ಶನಿವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಆಗ್ರಹಿಸಿದರು. ಅಹಿಂದ ಮುಖಂಡ ಹಾಗೂ ನ್ಯಾಯವಾದಿ ನಾಗರಾಜ ಸಂಶಿ ಮಾತನಾಡಿ, ಕಾಂಗ್ರೆಸ್ ನಿರ್ದೇಶನದ ಮೇರೆಗೆ ಅಹಿಂದ ಮುಖಂಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಯಂಪ್ರೇರಿತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಲ್ಲಾ ಸಮಾಜಕ್ಕೆ ಅಧಿಕಾರ ಸಿಗಲಿ ಎನ್ನುವ ಸದುದ್ದೇಶದಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಸಿಎಂ ಸ್ಥಾನವನ್ನು ಡಿ.ಕೆ. ಶಿವಕುಮಾರಗೆ ನೀಡಲು ಹೈಕಮಾಂಡ್ ತೀರ್ಮಾನಿಸಿದೆ. ಹಾವೇರಿ ಜಿಲ್ಲೆಯ ಅಹಿಂದ ಸಮಾಜದ ಮುಖಂಡ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರಿಗೆ ನೂತನ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕು. ಇದಕ್ಕೆ ಅಹಿಂದ ಸಂಘಟನೆ ಹಾಗೂ ಎಲ್ಲಾ ಸಂಘಟನೆಗಳ ಒತ್ತಾಸೆಯಾಗಿದೆ. ಜಿಲ್ಲೆಯನ್ನು ಬಿಜೆಪಿ ಮುಕ್ತವಾಗಿಸುವಲ್ಲಿ ಬಸವರಾಜ ಶಿವಣ್ಣನವರ ಶ್ರಮವಿದೆ. ಅವರು ಎಲ್ಲಾ ಸಮಾಜದ ಪ್ರೀತಿ ಪಾತ್ರರಾಗಿದ್ದು ಸರಳ, ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಜಿಲ್ಲೆಗೆ ಮಂತ್ರಿ ಸ್ಥಾನ ಕೇಳಲಿಲ್ಲ. ಈಗ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದರಿಂದ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡಬೇಕು. ಹೀಗಾದಲ್ಲಿ 2028ರ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 6 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಇಲ್ಲವಾದಲ್ಲಿ ಅಹಿಂದ ಬೆಂಬಲ ಕಡಿಮೆಯಾಗುತ್ತದೆ ಎಂದರು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಹನುಮಂತಪ್ಪ ದೇವರಗುಡ್ಡ ಮಾತನಾಡಿ, ಅಹಿಂದ ನಾಯಕ ಸಿದ್ದರಾಮಯ್ಯ ಅವರಿಗೆ ಇನ್ನೂ ಎರಡು ವರ್ಷ ಅವಕಾಶ ಮಾಡಿಕೊಡಬೇಕಾಗಿತ್ತು. ಆದರೂ ಪಕ್ಷದ ಹೈಕಮಾಂಡ್‌ನ ಆದೇಶಕ್ಕೆ ತಲೆಬಾಗಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಎಲ್ಲಾ ಸ್ಥಾನ ಗೆದ್ದಿರುವುದು ನಮ್ಮ ಸಮಾಜದವರ ಬೆಂಬಲದಿಂದ ಸಾಧ್ಯವಾಗಿದೆ. ಜಿಲ್ಲೆಯಲ್ಲಿ ನಮ್ಮ ಸಮಾಜದ ಅಹಿಂದ ನಾಯಕರಾಗಿರುವ ಬಸವರಾಜ ಶಿವಣ್ಣನವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಹನುಮಪ್ಪಜ್ಜ ಹೊಳಿಯಪ್ಪನವರ, ಮಂಜುನಾಥ ಬೂಸಮ್ಮನವರ, ಮಾಲತೇಶ ಹೊಳಿಯಪ್ಪನವರ, ಮಂಜುನಾಥ ಬ್ಯಾಡಗಿ, ಸುಭಾಸ ಕೆಂಗಲ್, ನಿಂಗಪ್ಪ ಗಂಟಿ,ಮಲ್ಲಪ್ಪ ದೇವರಗುಡ್ಡ, ರಾಹುಲ್ ಎಳೆಹೊಳಿ ಮತ್ತಿತರರಿದ್ದರು.