ಕನ್ನಡಪ್ರಭ ವಾರ್ತೆ ಶಿರಸಿ
ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ರಾಜ್ಯದ ಅರಣ್ಯವಾಸಿಗಳ ಭೂಮಿ ಹಕ್ಕಿಗೆ ಸಂಬಂಧಿಸಿ ವಿಶೇಷ ಕಲಾಪದ ಅವಧಿಯನ್ನು ನಿಗದಿಗೊಳಿಸಬೇಕೆಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವ ಎಚ್.ಕೆ. ಪಾಟೀಲ್ ಅವರನ್ನು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅದ್ಯಕ್ಷ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.ವಿಧಾನಸೌಧದ ಕಚೇರಿಯಲ್ಲಿ ಪಂಚಾಯತ್ ರಾಜ್ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಉಪಸ್ಥಿತಿಯಲ್ಲಿ ಸಚಿವರೊಂದಿಗೆ ಚರ್ಚಿಸಿದರು.
ಜಿಲ್ಲೆಯಲ್ಲಿ ಅರಣ್ಯ ಭೂಮಿಯ ಮೇಲೆ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 88 ಸಾವಿರ ಕುಟುಂಬಗಳು, ಎ. 27, 1978ರ ಪೂರ್ವ ಕೇಂದ್ರ ಸರ್ಕಾರದ ಪರವಾನಿಗೆ ಮಂಜೂರಿಗೆ ಷರತ್ತು ಬದ್ಧ ಪರವಾನಿಗೆ 1996 ರಲ್ಲಿ ಪಡೆದ 2,513 ಕುಟುಂಬ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ ಪೂರ್ವದಲ್ಲಿ ಸಾಗುವಳಿಗಾಗಿ ನೀಡಿದಂತ ಹಂಗಾಮಿ ಲಾಗಣಿ ಸುಮಾರು 2 ಸಾವಿರ ಕುಟುಂಬಗಳು ಸೇರಿದಂತೆ ಸುಮಾರು ಒಂದು ಲಕ್ಷ ಅರಣ್ಯವಾಸಿ ಕುಟುಂಬಗಳು ಅಂದರೇ, ಒಟ್ಟೂ ಜಿಲ್ಲೆಯ ಜನಸಂಖ್ಯೆಯಲ್ಲಿ ಐದು ಲಕ್ಷ ಆಧರಿತ ಭೂಮಿ ಹಕ್ಕಿನ ನಿರೀಕ್ಷೆಯಲ್ಲಿ ಇರುವುದರಿಂದ ಮುಂಬರುವ ಬೆಳಗಾವಿಯ ಅಧಿವೇಶನದಲ್ಲಿ ವಿಶೇಷ ಅವಧಿಯನ್ನು ನಿಗದಿಗೊಳಿಸಬೇಕೆಂದು ಸಚಿವರಲ್ಲಿ ವಿನಂತಿಸಿದರು.ಗೊಂದಲದಲ್ಲಿ ಕಾನೂನು:
ಅರಣ್ಯ ಹಕ್ಕು ಕಾಯ್ದೆ ಪಾರ್ಲಿಮೆಂಟ್‌ನಲ್ಲಿ ಅನುಮೋದನೆಯಾಗಿ ಕಳೆದ 20 ವರ್ಷಗಳಾದವು. ಕಾನೂನು ಅನುಷ್ಠಾನದಲ್ಲಿ ಗೊಂದಲ, ಸ್ಪಷ್ಟತೆ ಇಲ್ಲದ ಮಂಜೂರಿ ಪ್ರಕ್ರಿಯೆ, ಅರಣ್ಯವಾಸಿಗಳಿಗೆ ಪೂರ್ಣ ಪ್ರಮಾಣದ ಕಾನೂನು ಕೊರತೆ, ಆಡಳಿತಾತ್ಮಕ ವ್ಯವಸ್ಥೆಗೆ ಇಚ್ಚಾಶಕ್ತಿ ಕೊರತೆಯಿಂದ ರಾಜ್ಯದಲ್ಲಿ ಶೇ.82ರಷ್ಟು ಅರ್ಜಿ ತಿರಸ್ಕಾರವಾಗಿದ್ದವು. ಕೇವಲ ಶೇ 5.2ರಷ್ಟು ಅರ್ಜಿಗಳಿಗೆ ಮಾನ್ಯತೆ ದೊರಕಿರುವ ಅಂಶವನ್ನು ರವೀಂದ್ರ ನಾಯ್ಕ ಸಚಿವರ ಗಮನಕ್ಕೆ ತಂದರು.