ಕೊಪ್ಪಳ: ಪುಸ್ತಕ ಓದುವವರ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ತೆರೆಯಬೇಕೆಂಬ ಯೋಜನೆ ಜಾರಿ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ಅವರು ಶುಕ್ರವಾರ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕನ್ನಡ ಪುಸ್ತಕ ಪ್ರಾಧಿಕಾರದ ಉದ್ದೇಶ ಕಲೆ, ನಾಟಕಕ್ಕೆ ಒಂದೊಂದು ಪ್ರಾಧಿಕಾರಗಳಿರುವಂತೆ ಪುಸ್ತಕಕ್ಕಾಗಿಯೇ ಒಂದು ಪ್ರಾಧಿಕಾರವಿದೆ. ಈಗಿನ ಕಾಲದಲ್ಲಿ ಪುಸ್ತಕ ಪ್ರಕಟಿಸುವವರ ಸಂಖ್ಯೆ ಹೆಚ್ಚಾಗಿದೆ ಆದರೆ, ಪುಸ್ತಕ ಓದುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಹಾಗಾಗಿ ಪುಸ್ತಕ ಓದುವವರ ಸಂಖ್ಯೆ ಹೆಚ್ಚಿಸಬೇಕೆಂಬ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ತೆರೆಯಬೇಕೆಂಬ ಯೋಜನೆ ಜಾರಿ ಮಾಡಲಾಗಿದೆ. ಮನೆಗೊಂದು ಗ್ರಂಥಾಲಯ ಎಂದರೆ, ದೊಡ್ಡ ಪ್ರಮಾಣದಲ್ಲಿ ಮಾಡಬೇಕೆಂದೆನೂ ಇಲ್ಲ, ಒಂದು ಸಣ್ಣಮನೆಯಲ್ಲಿಯೂ ಕೂಡಾ ಲೈಬ್ರರಿ ಮಾಡಬಹುದು. ಮನೆಯಲ್ಲಿ ಟಿವಿಯ ಪಕ್ಕದಲ್ಲಿಯೋ ಅಥವಾ ಎಲ್ಲಿ ಜಾಗವಿರುತ್ತದೆಯೋ ಅಲ್ಲಿ ಒಂದು ಪುಸ್ತಕದ ಸ್ಟ್ಯಾಂಡ್ ಇಟ್ಟು ಮನೆಯಲ್ಲಿ ಎಲ್ಲಿ ಬೇಕೆಂದರಲ್ಲಿ ಇಟ್ಟಿರುವ ಪುಸ್ತಕ ನೀಟಾಕಿ ಸ್ಟ್ಯಾಂಡಿನಲ್ಲಿ ಜೋಡಿಸಿಟ್ಟರೆ ಅದೇ ಒಂದು ಗ್ರಂಥಾಲಯ ಆಗುತ್ತದೆ. ಮನೆಗೆ ಬರುವವರು ಮೊದಲು ಪುಸ್ತಕದ ಕಡೆ ಕಣ್ಣಾಯಿಸುತ್ತಾರೆ. ನಾವೂ ನಮ್ಮ ಮನೆಯಲ್ಲಿ ಈತರದ ಲೈಬ್ರರಿ ಮಾಡಬಹುದಲ್ಲ ಎಂಬ ಆಲೋಚನೆ ಅವರಲ್ಲಿ ಮೂಡುತ್ತದೆ. ಹಾಗೇ ನಿಮ್ಮ ಗೌರವೂ ಹೆಚ್ಚುತ್ತದೆ. ಯಾರೂ ಉತ್ತಮವಾಗಿ ಗ್ರಂಥಾಲಯ ಮಾಡಿ, ಉಪಯುಕ್ತವಾಗಿ ನಿರ್ವಹಿಸುತ್ತಾರೋ ಅಂಥವರನ್ನು ಹುಡುಕಿ ರಾಜ್ಯ ಸರ್ಕಾರದಿಂದ ನಗದು ಸಹಿತ ಪ್ರಶಸ್ತಿ ಕೊಡಿಸಲಾಗುವುದು ಮತ್ತು ಮುಖ್ಯಮಂತ್ರಿಗಳಿಂದ ಸನ್ಮಾನಿಸಲಾಗುವುದು ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ಪ್ರತಿಯೊಂದು ಮನೆಗೆ ಹೇಗೆ ಒಂದು ಹಾಲ್, ಒಂದು ದೇವರ ಕೋಣೆ, ಒಂದು ಬೆಡ್ ರೂಮ್, ಟಿವಿ, ಹೋಂಥಿಯೆಟರ್ ನಂತಹ ಐಷರಾಮಿ ಅಲಂಕಾರಿಕ ವಸ್ತುಗಳಿರುವಂತೆ ಒಂದು ಪುಸ್ತಕ ರೂಮ್ ಅಥವಾ ಗ್ರಂಥಾಲಯ ಇರಬೇಕು ಎನ್ನುವುದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರ ಪರಿಕಲ್ಪನೆಯಾಗಿದೆ ಎಂದು ಹೇಳಿದರು.ಮನೆಯಲ್ಲಿ ಮಿನಿ ಗ್ರಂಥಾಲಯ ಇದ್ದರೆ ಕುಟುಂಬದವರು ಅಥವಾ ಮಕ್ಕಳು ಒಂದಿಲ್ಲೊಂದು ದಿನ ಒಂದಾದರೂ ಪುಸ್ತಕ ಓದೇ ಓದುತ್ತಾರೆ ಎನ್ನುವ ಕಾನ್ಸೆಪ್ಟ್ ಇಟ್ಟುಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ. ಮನೆಗೊಂದು ಗ್ರಂಥಾಲಯ ಮೊಟ್ಟ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯನವರ ಮನೆಯಲ್ಲಿ ಅನಾವರಣಗೊಳಿಸಲಾಗಿದೆ, ಮೊದಲನೆಯದು ಬೆಂಗಳೂರಲ್ಲಾದರೆ ಎರಡನೆಯದು ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ಕರಣಕುಮಾರ್ ಮಾತನಾಡಿದರು. ಡಾ. ರಾಜಕುಮಾರ್ ನಿರೂಪಿಸಿದರು.ಈ ವೇಳೆ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯರಿಗೆ ಅರ್ಹತಾ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಂಥಾಲಯ ಜಾಗೃತಿ ಸಮಿತಿಯ ಸಂಚಾಲಕ ಜಿ.ಎಸ್.ಗೋನಾಳ, ಸದಸ್ಯರಾದ ಡಾ. ಫಕೀರಪ್ಪ ವಜ್ರಬಂಡಿ, ಮಹಮ್ಮದ್ ರಫಿ ಮರ್ದಾನ್ ಸಾಬ್, ಅರಳಿನಾಗಭೂಷಣ್, ಶರಣಪ್ಪ ಕೊಟ್ಯಾಳ್, ರವೀಂದ್ರ ಬಾಕಳೆ, ಕರಿಸಿದ್ದನಗೌಡ ಮಾಲಿಪಾಟೀಲ್, ಬಸವರಾಜ ಬೋದೂರು, ಅಂಜನಾದೇವಿ ಶಾಂತಮೂರ್ತಿ ಹಾಗೂ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಉಮೇಶ್ ಸುರ್ವೆ, ಡಾ. ನಾಗರಾಜ ದಂಡೋತಿ ಸೇರಿದಂತೆ ಅನೇಕರು ಇದ್ದರು.