ಹುಬ್ಬಳ್ಳಿ: ಅಕ್ರಮವಾಗಿ ಸರ್ಕಾರಿ ಕಚೇರಿಯಲ್ಲಿ ವಾಸ್ತವ್ಯ ಮಾಡಿದ್ದ ಶಹರ ಬಿಇಒ ಚನ್ನಪ್ಪಗೌಡ ಅವರನ್ನು ಅಮಾನತ್ತಿನಲ್ಲಿಟ್ಟು, ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು, ವಾರದೊಳಗೆ ಕ್ರಮವಾಗದಿದ್ದರೆ ಧರಣಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ ಗಡದಿನ್ನಿ ಆಗ್ರಹಿಸಿದ್ದಾರೆ.
ಡಿಡಿಪಿಐ ನೀಡಿದ ನೋಟಿಸ್‌ಗೆ ಶಿಕ್ಷಕಿ ಶೈಲಜಾ ಹಿರೇಮಠ ಅವರ ವಿದ್ಯಾನಗರದ ಮನೆಯಲ್ಲಿ ವಾಸವಿರುವುದಾಗಿ ಹೇಳಿ ಅವರನ್ನೂ ಕಾನೂನಿನ ಇಕ್ಕಟ್ಟಿನಲ್ಲಿ ಸಿಲುಕಿಲಿದ್ದಾರೆ ಎಂದು ದೂರಿದರು.
ಅಲ್ಲದೆ, 1999ರ ನೇಮಕಾತಿ ಮತ್ತು ನಿಯಂತ್ರಣ ಪ್ರಾಧಿಕಾರ ಕಾಯ್ದೆ ಕಲಂ 14, 15, 16 ರನ್ವಯ ಬಿಇಒ ಅವರಿಗೆ ಅನುದಾನಿತ ಶಾಲಾ ಶಿಕ್ಷಕರ ವೇತನ ತಡೆಹಿಡಿಯುವ ಅಧಿಕಾರವಿಲ್ಲ. ಆದರೂ ಹಲವು ಶಿಕ್ಷಕರ ವೇತನ ತಡೆಹಿಡಿದು, ಆರ್ಥಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ. ಚನ್ನಪ್ಪಗೌಡ ಅವರಿಂದಲೇ ಶಿಕ್ಷಕ ಅಶೋಕ ಹಾದಿಮನಿ ನೌಕರಿ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದರು.ಇಲಾಖಾ ಕಾರ್ಯಗಳಲ್ಲಿ ನಿವೃತ್ತಿ ಅಂಚಿನಲ್ಲಿರುವ ಹಿರಿಯ ಶಿಕ್ಷಕ, ಶಿಕ್ಷಕಿಯರನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನಾಗಿಸಿ, ಅತ್ಯಂತ ಕಿರಿಯ ಶಿಕ್ಷಕರನ್ನು ಮೇಲಿನ ಹುದ್ದೆಗಳಾದ ಕಸ್ಟೋಡಿಯನ್‌ಗಳಾಗಿ ಹಾಗೂ ಸಿಟ್ಟಿಂಗ್ ಸ್ಕ್ವಾಡ್‌ಗಳಾಗಿ ನಿಯೋಜಿಸಿ ಕಿರಿಯರ ಕೈಕೆಳಗೆ ಹಿರಿಯರು ಕಾರ್ಯನಿರ್ವಹಿಸಲು ನಿಯೋಜಿಸಿ ಸೇವಾ ಜೇಷ್ಠತೆ ನಿಯಮ ಉಲ್ಲಂಘಿಸಿದ್ದಾರೆ ಎಂದರು.
ಬಿಇಒ ಚನ್ನಪ್ಪಗೌಡ ಮುಂದಿನ ತಿಂಗಳು ನಿವೃತ್ತಿಯಾಗುತ್ತಿರುವುದರಿಂದ ಶಿಕ್ಷಕರು, ಸಂಘಟನೆಗಳ ಮೇಲೆ ಒತ್ತಡ ಹಾಕಿ ತಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಸಂಗ್ರಹಿಸಿ ಅಮಾನತ್ತಿನಿಂದ ಪಾರಾಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ವಾಟ್ಸಆ್ಯಪ್ ಸಂದೇಶಗಳ ಕುರಿತಂತೆ ದಾಖಲೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಎನ್. ಸಂಜೀವ್, ಮಹಾಪ್ರಧಾನ ಕಾರ್ಯದರ್ಶಿ ರವೀಂದ್ರ ಪಾಟೀಲ, ಎಸ್.ಎನ್. ನೆಗಳೂರಮಠ ಮತ್ತಿತರರಿದ್ದರು.